ಮೌನ

ಯಾರೂ ಅರಿಯದ ಭಾವಗಳ ಮಾಲೆ
ತಣ್ಣಗೆ ಬೀಸುತ ಮನದಿ ಇಣುಕುತಿಹವು
ಏಳುತ ಬೀಳುತ ಬೊಬ್ಬೆಯ ಹೊಡೆದು
ಅಲೆದಾಡುತ ನೆಮ್ಮದಿ ಹುಡುಕುತಿಹವು
ನನ್ನೆದೆಯ ಗೂಡಲ್ಲಿ ಬೆಚ್ಚಗೆ ಕುಳಿತು
ಹಸಿ-ಬಿಸಿ ಉಸಿರಲಿ ಬೆರೆತು ಕಲೆತು
ತನ್ನಯ ರಾಗಕೆ ತಾಳವ ಬಯಸುತ
ಬೆಂಬಲ ದನಿಯನು ಬೇಡುತಿಹವು
ಭಾವಗಳ ಬೀಸಣಿಗೆಯ ತಂಗಾಳಿ
ಅಲೆ ಅಲೆಯಾಗಿ ತೇಲಿ ಸಾಗುತಿರೆ
ಹೊನಲು ಬೆಳಕಿನ ದಿವ್ಯ ಸ್ಪಂದನ
ಬಾಳಿನ ಭಾಗ್ಯದ ಬಾಗಿಲು ಸಿಂಗಾರ
ಬೇಡದ ಮಾತಿಗೆ ಮೌನದ ಹಾದಿ
ಅರ್ಥವಾಗದವರಿಗೆ ಮೌನ ಕ್ರಾಂತಿ
ಮೌನ ಗುಪ್ತಗಾಮಿನಿಯ ಸಂಚಾರ
ತಾಳ್ಮೆ ಸಹನೆಗೆ ನೆಚ್ಚಿನ ನೆಮ್ಮದಿ ತಾಣ
ಒಬ್ಬರಿಗೊಬ್ಬರಿಗಿರಲು ಅರಿವ ಮನ
ಭಾವಗಳ ಗೊಂಚಲಿನ ಸವಿಯೂಟ
ಬಿಟ್ಟರೆ ದೂರ ಸೆಳೆಯಲು ಹತ್ತಿರ
ಬದುಕಿನ ಬಿಂದು ಸುಂದರ ಅಮರ
ಬಗೆ ಬಗೆಯ ಭಾವಗಳ ಮೆರವಣಿಗೆ
ಸೂತ್ರಧಾರಿ ಪಾತ್ರಧಾರಿ ನಾವುಗಳು
ಒಡೆದು ಒಂದಾಗುವ ಇಬ್ಬಗೆ ಭಾವ
ಅರಿಯಲು ಸಾಧ್ಯವೇ ಮನುಜ ಭಾವ!
ಮನದಿ ಮೂಡಿದ ಮಂಥನ ಮುಗಿಲು
ಮೌನವೇ ಮಾತಾಗಿಹ ಕವಿತೆ ಸಾಲು
ಮೌನ ಬಿತ್ತರದಿ ಅರ್ಥ ಮಹತ್ತರವು
ಸಿಹಿ ಬಯಕೆ ಮೌನ ಯಾನದ ಮಿಂಚು
ಅನುಭವ ಅನುಭಾವಗಳ ಅನುಭೂತಿ
ಬಳಲಿದ ಮನಗಳಿಗೆ ಮೌನ ಮಂದಾರ
ಮುದ ನೀಡುವ ಮೌನ ಬಂಗಾರ ಸಿರಿ
ಬೇಡದ ಮಾತಿಗೆ ತಂಪು ಜಳಕದ ಉತ್ತರ
ಮೌನವು ಮಲಗದ ಒಡಲು ಕಡಲು
ಶಾಂತಿ ಮಾರ್ಗದ ತೊಂದರೆ ನಿವಾರಕ
ಹರುಷದ ಹಾದಿಯ ಸಂತೃಪ್ತಿಯ ವಾಹಕ
ನೋವು-ನಲಿವು ಭಾವವು ಹತ್ತಿರ ಬಿತ್ತರ
ಭಯೋತ್ಪಾದನೆ ಕಾಲ್ತುಳಿತ ಅಪಘಾತಗಳು
ಜೀವ ತೆತ್ತವರ ಮನೆಯ ನೀರವ ಮೌನ
ಅನ್ಯಾಯದ ವಿರುದ್ಧ ಕುದಿ ಮೌನ ಅಸದಳ
ವಿಧಿಯ ಆಟದಿ ಮೌನದ ಬಗೆ-ಬಗೆ ಚಿತ್ತಾರ
(ದಿನದ ಶೀರ್ಷಿಕೆಗಾಗಿ)
✍️ ಎಸ್ ಶ್ರೀಧರಮೂರ್ತಿ
( ಶಿವಜಯಸುತ),ಮಂಡ್ಯ.