ಸಾಮಾಜಿಕ ಮತ್ತು ಕೌಟುಂಬಿಕ
ದೀಪವು ನಿನ್ನದೇ, ಗಾಳಿಯು ನಿನ್ನದೇ...
Nov 27, 2024

"ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬದುಕು,
ಕಡಲು ನಿನ್ನದೇ, ಹಡಗು ನಿನ್ನದೇ
ಮುಳುಗದಿರಲಿ ಬದುಕು...."
ಹಾಡನ್ನು ಕೇಳುತ್ತಾ ಮತ್ತೊಮ್ಮೆ ತನ್ನ ಜೀವನದ ಕಹಿ ಘಟನೆಯನ್ನು ನೆನಪಿಸಿಕೊಂಡಳು ಸಾನ್ವಿ. ಅದೆಷ್ಟು ಚೆಂದವಿತ್ತು ನಮ್ಮ ಜೀವನ..? ಏನು ಕಷ್ಟವೇ ಇಲ್ಲದೇ, ನಮ್ಮ ಬಾಳು ಚೆನ್ನಾಗಿಯೇ ಸಾಗುತ್ತಿತ್ತು. ಆರು ವರ್ಷದ ಪುಟ್ಟ ಮಗಳು ಸಿರಿಯೊಂದಿಗೆ, ತನ್ನ ಮತ್ತು ತನ್ನ ಗಂಡನ ಜೀವನ ಬಹಳ ಖುಷಿಯಿಂದ ಮತ್ತು ಸಂಭ್ರಮದಿಂದಲೇ ಸಾಗುತ್ತಿತ್ತು.
ಮದುವೆಯಾಗಿ ನಾಲ್ಕು ವರ್ಷಗಳ ನಂತರ ಹುಟ್ಟಿದ ಮಗು ಅದು. ಹಾಗಾಗಿ ತುಂಬಾ ಜೋಪಾನ ಮಾಡಿ ಬೆಳೆಸಿದ್ದೆ. ಎಲ್ಲಿ ಅವಳು ಹೊರಗಡೆ ಹೋದರೆ ನೆಗಡಿ ಬರುತ್ತೋ, ಧೂಳಿಗೆ ಹೋದರೆ ಕೆಮ್ಮು ಬರುತ್ತೋ, ತಣ್ಣೀರು ಕುಡಿದರೆ ಜ್ವರ ಬರುತ್ತೋ ಎಂದು ತೀರಾ ಜೋಪಾನ ಮಾಡಿ ಸಾಕುತ್ತಿದ್ದೆ ಅವಳನ್ನು..! ಆದರೆ ಅದೇಕೆ ಹಾಗಾಯಿತು..? ಕನಸು ಮನಸ್ಸಿನಲ್ಲಿಯೂ ಯೋಚಿಸದ ಅನಿರೀಕ್ಷಿತ ಘಟನೆ ಅಂದು ನಡೆದೇಬಿಟ್ಟಿತು..!!
ನನ್ನ ಗಂಡನೂ ಸಹ ಸಿರಿಯನ್ನು ತೀರಾ ಮುದ್ದು ಮಾಡಿ ನೋಡಿಕೊಳ್ಳುತ್ತಿದ್ದರು. ಅವಳು ಕೇಳುವುದಕ್ಕೆ ಮುಂಚೆಯೇ ಎಲ್ಲಾ ರೀತಿಯ ಗೊಂಬೆಗಳು, ಪುಸ್ತಕಗಳು, ಬಟ್ಟೆಗಳು ಅವಳ ಮುಂದೆ ಇರುತ್ತಿದ್ದವು. ಒಂದು ಬಟ್ಟೆಗೆ ಒಂದು ಶೂಸ್ ಎನ್ನುವಂತೆ ಹತ್ತು ಹಲವು ಬಣ್ಣ ಬಣ್ಣದ ಶೂಸುಗಳು ಅವಳ ಹತ್ತಿರ ಇದ್ದವು. "ಅಪ್ಪನ ಮುದ್ದಿನ ರಾಜಕುಮಾರಿ" ಎಂಬುದರಲ್ಲಿ ಎರಡು ಮಾತಿಲ್ಲ..!! ಅಷ್ಟು ಕಾಳಜಿಯಿಂದ ನನ್ನ ಪತಿಯು ಮಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅದು ಯಾರ ಕೆಟ್ಟ ದೃಷ್ಟಿ ಬಿದ್ದಿತೋ ಗೊತ್ತಿಲ್ಲ... ಆರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನಾವು ಮೂವರೂ ಪ್ರಸಿದ್ಧವಾದ ಒಂದು ರೆಸಾರ್ಟ್ ಗೆ ಅಂದು ಹೋಗಿದ್ದೆವು.
ಆ ದಿನವೂ ಸಹ ನನ್ನ ಗಂಡ ಸಿರಿಗೆ ದೊಡ್ಡ ಕೇಕ್, ಬಟ್ಟೆಗಳನ್ನು ಕೊಡಿಸಿ, ಹೋಟೆಲಿನಲ್ಲಿ ತರಹೇವಾರಿ ತಿಂಡಿಗಳನ್ನು ತಿನ್ನಿಸಿದರು. ಎಂದಿನಂತೆ ನಾನು "ರೀ, ಜಾಸ್ತಿ ಮುದ್ದು ಮಾಡಿ ಬೆಳೆಸಿದರೆ ಮಕ್ಕಳು ಹಠ ಜಾಸ್ತಿ ಮಾಡುತ್ತಾರೆ. ಎಲ್ಲವನ್ನು ಒಮ್ಮೆಲೇ ಅವಳಿಗೆ ಕೊಡಿಸಬೇಡಿ. ಒಂಚೂರು ಕಷ್ಟವೇನೆಂದು ಮಕ್ಕಳಿಗೂ ಗೊತ್ತಾಗಬೇಕಲ್ಲವೇ..!" ಎಂದೆ.
ಅದಕ್ಕೆ ನನ್ನ ಪತಿ "ಇಲ್ಲ ನನ್ನ ಮುದ್ದು ಮಗಳು ಸಿರಿಗೆ ಯಾವ ಕಷ್ಟವೂ ಬರಬಾರದು. ಬರುವುದಕ್ಕೂ ನಾನು ಬಿಡುವುದಿಲ್ಲ. ಏನೇ ಕಷ್ಟವಿದ್ದರೂ ಅದು ನನಗಿರಲಿ..!! ಅವಳನ್ನು ತುಂಬಾ ಚೆನ್ನಾಗಿ ಬೆಳೆಸಿ, ಒಂದು ಒಳ್ಳೆಯ ಮನೆಗೆ ಮದುವೆ ಮಾಡಿಕೊಡುತ್ತೇನೆ. ನನ್ನ ಮಗಳನ್ನು ಬೇರೆಯವರ ಮನೆಗೆ ಕಳುಹಿಸುತ್ತೇನೆ ಅಂದುಕೊಳ್ಳಬೇಡ..! ಒಬ್ಬ ಸುಸಂಸ್ಕೃತನಾದ ಹುಡುಗನಿಗೆ ಮದುವೆ ಮಾಡಿ, ಅವನನ್ನೂ ನಮ್ಮ ಮನೆಗೆ ಕರೆ ತರುತ್ತೇನೆ..! ನನ್ನ ಮಗಳು ಯಾವಾಗಲೂ ನನ್ನ ಕಣ್ಣು ಮುಂದೆಯೇ ಓಡಾಡಿಕೊಂಡು ಇರಬೇಕು" ಎಂದು ಅವಳನ್ನು ಮುದ್ದಿಸುತ್ತಾ ಹೇಳಿದರು.
"ಸರಿ ಹೋಯಿತು ಅಪ್ಪ-ಮಗಳ ಕಥೆ..! ಅಂದರೆ ಮಗಳು ದೊಡ್ಡವಳಾಗಿ ಮದುವೆಯಾದರೂ ನಿಮ್ಮೊಂದಿಗೇನೇ ಇಟ್ಟುಕೊಳ್ಳಬೇಕೆಂಬ ಯೋಚನೆಯೇ ನಿಮಗೆ..? ಅಂದರೆ ಮನೆ ಅಳಿಯನೇ ಸಿಗಬೇಕೆಂದು ಈಗಿನಿಂದಲೇ ಯೋಚಿಸುತ್ತಿದ್ದೀರಿ..?!" ಎಂದು ನಗುತ್ತಾ ಕೇಳಿದೆ.
"ಹೌದು ಮತ್ತೆ, ನನ್ನ ಮಗಳು ಕಣ್ಣು ಮುಂದೆ ಓಡಾಡಿಕೊಂಡಿದ್ದರೇನೇ ನನಗೆ ಧೈರ್ಯ. ಅವಳು ಒಂದು ಕ್ಷಣ ಆ ಕಡೆ ಈ ಕಡೆ ಹೋದರೂ ನನಗೆ ಭಯವಾಗುತ್ತೆ. ನನ್ನ ಮುತ್ತಿನಂತಹ ಮಗಳನ್ನು ಎಲ್ಲಿಗೂ ಕಳಿಸುವುದಿಲ್ಲ. ಅವಳೆಂದಿಗೂ ನಮ್ಮೊಂದಿಗೇನೇ ಇರಬೇಕು..!!" ಎಂದರು.
ಅಬ್ಬಾ ಇದೆಂತಹ ಹುಚ್ಚು ಪ್ರೀತಿ ಮಗಳ ಮೇಲೆ ಇವರಿಗೆ..? ಅದೆಷ್ಟು ಸಲ ಹೇಳಿದ್ದೇನೋ, ಅತಿಯಾದ ಪ್ರೀತಿ ಎಂದಿಗೂ ಒಳ್ಳೆಯದಲ್ಲ ರೀ ಎಂದು..!! ಆದರೆ ದಿನದಿಂದ ದಿನಕ್ಕೆ ಅಪ್ಪ-ಮಗಳ ಮುದ್ದಾದ ಪ್ರೀತಿ ಜಾಸ್ತಿ ಆಗುತ್ತಿದೆಯೇ ಹೊರತು, ಕಡಿಮೆಯಂತೂ ಆಗುತ್ತಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.
ರೆಸಾರ್ಟ್ ನಲ್ಲಿ ಹಲವಾರು ಆಟಗಳು ಇದ್ದವು. ಎಲ್ಲವನ್ನು ನಾವು ಮೂರೂ ಜನ ಚೆನ್ನಾಗಿ ಆಡಿದೆವು. ನಂತರ ಭಾರಿ ಭೋಜನವೂ ಸಿದ್ಧವಾಗಿತ್ತು. ರುಚಿಕರವಾಗಿದ್ದರಿಂದ ಖುಷಿಯಾಗಿ ತಿಂದೆವು. ಯಥಾಪ್ರಕಾರ ಸಿರಿಗೆ ತಿನ್ನಲು ಬರುತ್ತದೆ ಎಂದರೂ, ಅವಳ ಅಪ್ಪನೇ ಮಗಳಿಗೆ ತಿನಿಸಿದ್ದು..!
ಸಿರಿ ದೊಡ್ಡವಳಾಗಿದ್ದಾಳೆ, ಅವಳು ತಿನ್ನಲು ಕಲಿತಿದ್ದಾಳೆ ಎಂದರೂ ಅವಳ ಅಪ್ಪ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದೇನೋ ಅತಿಯಾದ ಮುದ್ದು ಅವರಿಗೆ. ಸರಿ ಹೋಗಲಿ ಎಂದು ನಾನೂ ಸುಮ್ಮನಾದೆ.
ನಂತರ ರೆಸಾರ್ಟ್ ಗೆ ಬಂದ ಮಕ್ಕಳು, ಪೋಷಕರೆಲ್ಲ ಅಲ್ಲೇ ಒಂದು ಗುಂಪು ಕಟ್ಟಿಕೊಂಡು ಆಡುತ್ತಿದ್ದರು. ನಾವು ಆ ಗುಂಪನ್ನು ಸೇರಿಕೊಂಡು ಆಟವಾಡುತ್ತಿದ್ದೆವು. ನಾನು ವಾಶ್ ರೂಮಿಗೆ ಹೋಗಬೇಕೆಂದು ಗಂಡನಲ್ಲಿ ಹೇಳಿ ಸಿರಿ ಜೋಪಾನ ಎನ್ನುತ್ತಾ ಹೋದೆ. ನನ್ನ ಗಂಡನ ಅತಿ ಮಾತಿನ ಚಟ, ಅದರಿಂದ ತಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬ ಮರೆಯುವ ಗುಣ ಅವರಿಗಿದೆ ಎಂದು ಅದೇಕೆ ಅಂದು ನಾನು ಮರೆತೆ ಎಂದು ಈಗಲೂ ಗೊತ್ತಿಲ್ಲ..!! ಬಹುಶಃ ನನ್ನ ಪ್ರಕೃತಿ ಕರೆಯು ನನಗೆ ಆ ವಿಷಯವನ್ನು ಮರೆಯುವಂತೆ ಮಾಡಿತು ಎನಿಸುತ್ತದೆ..!
ಹತ್ತು ಹದಿನೈದು ನಿಮಿಷದ ನಂತರ ನಾನು ಮತ್ತೆ ಅವರಿಬ್ಬರೂ ಇದ್ದ ಕಡೆ ಬಂದೆ. ಆದರೆ ಅಲ್ಲಿ ನನ್ನ ಪತಿಯೂ ಇರಲಿಲ್ಲ, ಸಿರಿಯೂ ಇರಲಿಲ್ಲ. ಜೊತೆಗಿರುವವರ ಬಳಿ ವಿಚಾರಿಸಿದಾಗ, ವಿನಯ್ ಮತ್ತು ಅವರ ಮಗಳೊಂದಿಗೆ, ಇವರಿಬ್ಬರೂ ಆ ಕಡೆ ಹೋದರೆಂದು ತೋರಿಸಿದರು.
ಅವರು ಹೇಳಿದ ಕಡೆ ನಾನು ಹುಡುಕಿಕೊಂಡು ಹೊರಟೆ. ಕೆಲವು ನಿಮಿಷಗಳ ಹುಡುಕಾಟದ ನಂತರ ನನಗೆ ಸಿಕ್ಕಿದರು. ಆದರೆ ಅಲ್ಲಿದ್ದದ್ದು ವಿನಯ್ ಮತ್ತು ನನ್ನ ಪತಿ ಇಬ್ಬರೇ..!!
"ರೀ ಸಿರಿ ಎಲ್ಲಿ..?" ಎಂದು ನನ್ನವರನ್ನು ಕೇಳಿದೆ. ಆಗ ಇವರಿಗೆ ಮಾತಾಡುತ್ತಾ ತಾವು ಮಗಳನ್ನು ವಿನಯ್ ನೊಟ್ಟಿಗೆ ಇಲ್ಲಿಯವರೆಗೂ ಕರೆತಂದದ್ದು ಗೊತ್ತಾಯ್ತು. "ಹಾಂ... ಹೌದು ಸಿರಿ... ಅವಳು ವಿನಯ್ ಮಗಳೊಟ್ಟಿಗೆ ಇಲ್ಲೇ ಆಡಿ ಬರುತ್ತೇನೆ ಎಂದು ಹೋದಳು. ಬಾ ನೋಡೋಣ" ಎಂದರು. "ಅದು ಹೇಗೆ ಅವರಿಬ್ಬರನ್ನೇ ನೀವಿಬ್ಬರು ಹೋಗಲು ಬಿಟ್ಟಿರಿ..? ಅಷ್ಟು ಜ್ಞಾನ ಬೇಡವೇ ನಿಮಗೆ..?!" ಎಂದು ಓಡುತ್ತಾ ಎಲ್ಲಾ ಕಡೆ ಹುಡುಕಲು ಶುರು ಮಾಡಿದೆ.
"ದೇವರೇ ಸಿರಿಗಿಂತ ವಿನಯ್ ಮಗಳು ಎರಡು ವರ್ಷ ಚಿಕ್ಕವಳು. ಇವರಿಬ್ಬರೂ ಎಲ್ಲಿಗೆ ಹೋದರು..?" ಎಂದು ಹುಡುಕಲು ಶುರುಮಾಡಿದೆ. ವಿನಯ್ ಮತ್ತು ನನ್ನ ಪತಿ ಸಹ ಒಂದೊಂದು ಕಡೆ ಹುಡುಕುತ್ತಾ ಹೋದರು. ಹೀಗೆಯೇ ಹತ್ತು ನಿಮಿಷ ಕಳೆಯಲು, ವಿನಯ್ ನ ಧ್ವನಿ ಜೋರಾಗಿ ಕೇಳಿತು. "ಸಾನ್ವಿ ಬನ್ನಿ ಇಲ್ಲಿ..!!" ಎಂಬ ಕೂಗು. ಆ ಕೂಗು ಎಷ್ಟು ತೀಕ್ಷ್ಣವಾಗಿತ್ತು ಎಂದರೆ, ಇಷ್ಟು ವರ್ಷವಾದರೂ ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ. ಅಂತಹ ಕೂಗು ಅದಾಗಿತ್ತು..!! ನಾನಂತೂ ಒಂದೇ ಕ್ಷಣದಲ್ಲಿ ಅವರು ಕಿರುಚಿದ ಜಾಗಕ್ಕೆ ನೆಗೆದೇ ಹೋದೆ ಎನ್ನಬಹುದು..!
ಆದರೆ ಪರಿಸ್ಥಿತಿ ಕೈ ಮೀರಿತ್ತು. ಸಿರಿಯಂತೆ ನಮ್ಮ ಜೀವನದಲ್ಲಿ ಕಾಲಿಟ್ಟ ನಮ್ಮ ಪುಟ್ಟ ಕಂದ ಅದಾಗಲೇ ಜವರಾಯನ ಹತ್ತಿರ ಹೋಗಿಯಾಗಿತ್ತು..!! ಮಕ್ಕಳಿಬ್ಬರು ಆಡುತ್ತಾ ಈಜುಕೊಳದ ಹತ್ತಿರ ಹೋಗಿದ್ದರು. ವಿನಯ್ ಮಗಳು ಆಡುತ್ತಿದ್ದ ಚೆಂಡು ಕೈ ಜಾರಿ ನೀರಿಗೆ ಬಿತ್ತೆಂದು, ಸಿರಿ ಅದನ್ನು ತೆಗೆಯಲು ಪ್ರಯತ್ನಿಸಿದ್ದಾಳೆ. ಪರಿಣಾಮ ಮುಗ್ಗರಿಸಿ ನೀರೊಳಗೆ ಬಿದ್ದಿದ್ದಾಳೆ. ಇದನ್ನು ಕಂಡ ವಿನಯ್ ನ ಮಗಳಿಗೆ ಸ್ವಲ್ಪ ಹೊತ್ತು ಏನೆಂದು ಗೊತ್ತೇ ಆಗಿಲ್ಲ. ಕೊನೆಗೆ ವಿಷಯವನ್ನು ತಿಳಿಸೋಣವೆಂದು ತನ್ನಪ್ಪ ಇರುವ ಜಾಗವನ್ನು ಹುಡುಕುತ್ತಾ ಹೋಗಿದ್ದಾಳೆ.
ಆದರೆ ಪುಟ್ಟ ಮಗುವಾದ್ದರಿಂದ ಅವಳೂ ದಾರಿ ತಪ್ಪಿದ್ದಾಳೆ. ಕೊನೆಗೆ ತನ್ನಮ್ಮ ಇದ್ದ ಗುಂಪಿಗೆ ಸೇರಿದ್ದಾಳೆ. ಅಷ್ಟರೊಳಗೆ ಈಜು ಬರದ ಸಿರಿಯ ಉಸಿರು ನೀರೊಳಗೆಯೇ ನಿಂತಿದೆ..!!
ಏನೆಂದು ಹೇಳುವುದು ನಮ್ಮ ದುರಾದೃಷ್ಟದ ಬಗ್ಗೆ..?! ಅಷ್ಟು ಸಮಯ ಅಲ್ಲಿ ಕಾವಲು ಕಾಯುತ್ತಿದ್ದ ಹುಡುಗ ಈ ಮಕ್ಕಳು ಬರುವ ಹತ್ತು ನಿಮಿಷದ ಕೆಳಗೆ ಊಟ ಮಾಡಲು ಎಂದು ಬೇರೆ ಕಡೆ ಹೋದನಂತೆ. ಬಂದಿದ್ದ ತಂಡದ ಜನರೆಲ್ಲರೂ ಬೇರೆ ಕಡೆ ಒಟ್ಟಿಗೆ ಕುಳಿತು, ತಿನ್ನುತ್ತಾ ಹರಟೆ ಹೊಡೆಯುತ್ತಿದ್ದಾರೆ, ಹಾಗಾಗಿ ಇಲ್ಲಿಗೆ ಯಾರು ಬರುವುದಿಲ್ಲವೆಂದು ಇನ್ನೊಬ್ಬನಿಗೆ ಕಾವಲು ಕಾಯಲು ಹೇಳಿಲ್ಲ. ಆ ಸಮಯದಲ್ಲೇ ನನ್ನ ಮಗಳು ಈಜುಕೊಳದಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾಳೆ.
ಯಾರನ್ನೆಂದು ದೂಷಿಸಲಿ ನಾನು..?! ಮಧ್ಯದಲ್ಲಿಯೇ ಇವರಿಬ್ಬರನ್ನು ಬಿಟ್ಟು ವಾಶ್ರೂಮ್ ಗೆ ಹೋದ ನನ್ನನ್ನೇ, ಅಥವಾ ಮಗಳನ್ನು ತನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದರೂ ಮಾತಿನ ಚಟಕ್ಕೆ ಮಗಳನ್ನು ಮರೆತ ನನ್ನ ಗಂಡನನ್ನೇ, ಅಥವಾ ಗೆಳತಿ ಬೀಳಿಸಿಕೊಂಡ ಚೆಂಡನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಹೋದ ನನ್ನ ಪುಟ್ಟ ಸಿರಿಯನ್ನೇ, ಅಥವಾ ಕಾವಲುಗಾರನ ಬೇಜವಾಬ್ದಾರಿತನವನ್ನೇ, ಅಥವಾ ವಿಧಿಯಾಟವನ್ನೇ ಯಾರನ್ನೆಂದು ದೂಷಿಸುವುದು..?
ದೂಷಿಸಿ ಮಾಡುವುದಾದರೂ ಏನನ್ನು..? ನನ್ನ ಪುಟ್ಟ ಸಿರಿಯ ಜೀವ ಅದಾಗಲೇ ಹೋಗಿಬಿಟ್ಟಿತ್ತು. ನನಗಿಂತ ಹೆಚ್ಚು ಮುದ್ದು ಮಾಡುತ್ತಾ, ತನ್ನ ಜೀವವಂತೆ ನೋಡಿಕೊಳ್ಳುತ್ತಿದ್ದ ನನ್ನ ಪತಿಯ ಮುಖವನ್ನು ನೋಡುವುದಕ್ಕೆ ಆಗಲಿಲ್ಲ. ತಾನೇ ತನ್ನ ಮಗಳ ಜೀವಕ್ಕೆ ಕುತ್ತು ತಂದನೇನೋ ಎಂಬ ಅಪರಾಧಿ ಪ್ರಜ್ಞೆ ಅವರಲ್ಲಿ ಸೇರಿಬಿಟ್ಟಿತ್ತು. ಹಾಗಾಗಿ ನಾನು ಮೌನವೇ ಲೇಸು ಎಂದು ಸುಮ್ಮನಾಗಿಬಿಟ್ಟೆ.
ಸಿರಿ ಇಲ್ಲದ ಜೀವನವನ್ನು ನಾವು ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ. ಮನೆಯ ಮೂಲೆ ಮೂಲೆಯಲ್ಲೂ, ಕಣ ಕಣದಲ್ಲಿಯೂ ಅವಳೇ ಇದ್ದಾಳೆ ಎನಿಸುತ್ತಿತ್ತು. ಸಾಲದ್ದಕ್ಕೆ ಅವಳ ಅಪ್ಪ ಕೊಡಿಸಿದ ಬಣ್ಣ ಬಣ್ಣದ ಚೆಂದನೆಯ ಶೂಸುಗಳು ನನ್ನನ್ನು ಮತ್ತೂ ಅವಳ ಬಗ್ಗೆ ಯೋಚಿಸುವಂತೆ ಮಾಡುತ್ತಿತ್ತು. ಅದೇಕಾದರೂ ಅಂದು ರೆಸಾರ್ಟ್ ಗೆ ಹುಟ್ಟಿದ ಹಬ್ಬ ಆಚರಿಸಲು ಹೋದೆವು..?! ಸುಮ್ಮನೆ ಮನೆಯಲ್ಲಿಯೇ ಇದ್ದರೆ ಆಗುತ್ತಿತ್ತು. ದೇವರೇ ಅವಳ ಹುಟ್ಟಿದ ದಿನ, ಸತ್ತ ದಿನ ಎರಡೂ ಒಂದೇ ದಿನ ಆಯ್ತಲ್ಲ..! ಇದೆಂತಹ ಕ್ರೂರ ಶಿಕ್ಷೆ ನಮಗೆ ಕೊಟ್ಟೆ..!! ಎಂದು ದಿನವೂ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ.
ಮದುವೆಯಾಗಿ ನಾಲ್ಕು ವರ್ಷಗಳ ನಂತರ ಹುಟ್ಟಿದ ಸಿರಿಯನ್ನು, ಆರು ವರ್ಷಗಳು ಮಾತ್ರ ನಮ್ಮೊಂದಿಗೆ ಜೀವಿಸಲು ಕಳಿಸಿದ್ದ ಆ ಭಗವಂತ..! ಈಗ ಮತ್ತೆ ಅವಳನ್ನು ಅವನ ಹತ್ತಿರ ಕರೆಸಿಕೊಂಡಿದ್ದ. ಇಷ್ಟು ಬೇಗ ಕರೆಸಿಕೊಳ್ಳುವ ಅಗತ್ಯವಾದರೂ ಏನಿತ್ತು ಆ ದೇವನಿಗೆ..? ಎಂದು ಕೆಲವೊಮ್ಮೆ ಅವನನ್ನು ಬಯ್ಯುತ್ತಿದ್ದೆ.
ಸಿರಿ ನಮ್ಮಿಂದ ಮರೆಯಾಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಮತ್ತೆ ನನ್ನ ಒಡಲಲ್ಲಿ ಕೂಸೊಂದು ಮೂಡುತ್ತಿದೆ. "ಮಗುವಿಗೆ ಏನೂ ತೊಂದರೆ ಇಲ್ಲ. ಆರೋಗ್ಯವಾಗಿ ಬೆಳೆಯುತ್ತಿದೆ" ಎಂದು ಕೆಲವು ದಿನದ ಹಿಂದಷ್ಟೇ ಡಾಕ್ಟರ್ ತಿಳಿಸಿದರು. ಮತ್ತೆ ನಮ್ಮ ಮನೆಯಲ್ಲಿ ಜೀವಂತಿಕೆಯ ಕಳೆ ಬಂದಿದೆ. ನನ್ನ ಪತಿಯ ಮುಖದಲ್ಲಿ ಅಪರಾಧಿ ಪ್ರಜ್ಞೆ ಮರೆಯಾಗಿ ಮಂದಹಾಸ ಮೂಡಿದೆ..!!
ದೇವರು ಅಂತೂ ನಮ್ಮ ಪಾಲಿಗೆ ಕಣ್ಣು ಬಿಟ್ಟನಲ್ಲ ಎಂಬ ತೃಪ್ತಿ ನನಗೆ. ದೇವರೇ ಎಲ್ಲದಕ್ಕೂ ನೀನೇ ಕಾರಣ..! "ದೀಪವು ನಿನ್ನದೇ, ಗಾಳಿಯು ನಿನ್ನದೇ.... ಎಲ್ಲವನ್ನು ಕೊಡುವವನು ನೀನೇ, ಎಲ್ಲವನ್ನು ಕರುಣಿಸುವವನು ನೀನೇ..!". ಹುಟ್ಟುವ ಮಗುವನ್ನು ಆಶೀರ್ವದಿಸು, ಮಗು ಆರೋಗ್ಯದಿಂದ ಬೆಳೆದು ದೊಡ್ಡದಾಗುವಂತೆ ಮಾಡು, ನಾವಿಬ್ಬರೂ ಮಗುವನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ನಮ್ಮಿಬ್ಬರಿಗೂ ಒಳ್ಳೆಯ ಬುದ್ಧಿ ಮನಸ್ಸು ಕೊಡು ಎಂದು ಪ್ರಾರ್ಥಿಸಿದೆ..!!
✍
ಇತ್ತೀಚಿನ ಕಾಮೆಂಟ್‌ಗಳು