ಕಾಲಾಂತರದ ಗಾಯ
ಥತ್!
ಬೇಸರ, ಇಲ್ಲಿ ಎಲ್ಲವೂ ಹೀಗೆ ;
ಪ್ರಕೃತಿಯೇ ಸ್ಪಂದಿಸುವುದಿಲ್ಲ
ಇನ್ನು ಮನುಷ್ಯರು?!
ಅನಿಸಿದ್ದು ಮಾಡಲಾಗದ
ಬಯಸಿದ್ದು ಪಡೆಯಲಾಗದ
ತ್ರಿಶಂಕು ಸ್ಥಿತಿಯಲ್ಲಿ ಬದುಕು.
ನೋಡಿ ಅಸೂಯೆ ಪಡೋದಾ
ಅಥವಾ ಮೌನವಾಗಿ ಎಲ್ಲವನ್ನೂ
ಸಹಿಸೋದಾ?
ಗೆದ್ದವರೇ ಮತ್ತೆ ಮತ್ತೆ ಗೆದ್ದರೆ
ಸೋತವರೇನು ಸಾಯುವುದಾ?
ಸಮಾನತೆಯಂತೆ,
ಸಮಸಮಾಜವಂತೆ,
ಯಾತಕ್ಕಾಗಿ?
ಎಲ್ಲವೂ ಮೀಸಲಾಗಿರುವಾಗ.
ಬಂಡಾಯದ ಬಿಸಿ ತಾಕಿದರೆ
ಮಾತ್ರವೆ ಉಳಿಗಾಲವಿಲ್ಲಿ.
ಎಡತಾಕಿದರಷ್ಟೆ ಮಾನ್ಯತೆ
ಅದರಾಚೆಯ ಹಂಬಲಕ್ಕೆ
ಕಿಂಚಿತ್ತೂ ಬಲವಿಲ್ಲ.
ಇದ್ದರೂ ಏನಾದೀತು?
ಅಲಿಯದೂ ಇದೇ ಕಥೆ.
ಅತ್ತಲೂ ಸಾಗದ ಇತ್ತಲೂ ಹೋಗಲಾಗದ
ಈ ಪಯಣಕ್ಕೆ ಗಮ್ಯವೇನೆಂಬುದೇ
ಮರೆತುಹೋಗಿದೆ.
ಮುಖಸ್ತುತಿಯ ಬಳಗದ
ಸದಸ್ಯರು ಆಗಬೇಕು,
ಆಗ ಮಾತ್ರ ಎಲ್ಲವೂ ಸರಾಗ.
ಹೊಮ್ಮುವುದು ಸ್ವಪ್ನರಾಗ.
ಇದೇನು ಹೊಸದಲ್ಲ ಬಿಡಿ.
ಅನಾದಿಕಾಲದಿಂದಲೂ
ಅನಂತಕಾಲದವರೆಗೆ
ಈ ಹೋರಾಟ, ಈ ಹಾರಾಟ
ನಿರಂತರ ಕಾಲಾಂತರದ ಗಾಯವಿದು ಮಾಯದಂಥದ್ದು.
ಆದರೂ ಒಮ್ಮೊಮ್ಮೆ
ಈ ಅರ್ಥವಿಲ್ಲದ
ಸ್ವಾರ್ಥಪರ ದಾರಿಯೇ
ಸರಿ ಅನಿಸುವುದು
ಅಸಹಜವಲ್ಲ.
ಯಾಕೆ ಗೊತ್ತಾ?!
ಹಾಗಾದರೂ ಬದುಕಬಹುದಲ್ಲ
ಕಲೆಗೂ ಬೆಲೆಯುಂಟಲ್ಲ ಅನಿಸುವುದಲ್ಲ ಹಾಗಾಗಿ.
ಮನಸ್ಸು ಬಯಸುವುದಿಷ್ಟೆ.......
ಒಂದು ಬೆಂಬಲದ ಮುಗುಳ್ನಗು
ಒಂದಷ್ಟು ಗೌರವ,
ಗೌರವಕ್ಕೆ ಸರಿಯಾದ ಮೌಲ್ಯ.
ಅದರ ಹೊರತು ಮತ್ತೇನು ಬೇಕು
ಕವಿಗೆ, ಕಲೆಗಾರನಿಗೆ ಮತ್ತು
ಹಾಡುಗಾರನ ಹೃಧಯಕ್ಕೆ.
● ಅಜಯ್ ಅಂಗಡಿ