ಸ್ವಾತಂತ್ರ್ಯೋತ್ಸವ ಮತ್ತು..
ಏನ್ ಹೇಳೋಣ...
ಸ್ವಾಂತತ್ರ್ಯೋತ್ಸವದ ಶುಭಾಶಯವನ್ನಾ ? ಅಥವಾ ಹೆಣ್ಣಿಗೆ ರಕ್ಷಣೆ ಒದಗಿಸಿ ಅನ್ನೋ ಆಗ್ರಹವನ್ನ ?
ಬೆಳಿಗ್ಗೆ ಬೇಗ ಎದ್ದು ಸ್ವಾತಂತ್ರ್ಯೋತ್ಸವದ ಖುಷಿ ಹಂಚಿಕೊಳ್ಳೋಣ ಅಂದುಕೊಳ್ಳುತ್ತ ಸೋಷಿಯಲ್ ಮೀಡಿಯಾ ಓಪನ್ ಮಾಡಿದೋನಿಗೆ ಕೆಳಗೆ ಹಾಕಿದೀನಲ್ಲ.. ಆ ಪೋಸ್ಟ್ ನೋಡಿ ಒಂಥರಾ ಹಿಂಸೆ ಆಗೋಯ್ತು. ಇಡೀ ಸತ್ಪುರುಷ ನಾಗರೀಕತೆಗೆ ನಾಚಿಕೆಯಾಗೋವಂಥ ವಿಷಯ. ಆದ್ರೆ ಕೆಳಗಡೆ ಕೊನೆಯ ಸಾಲು ಇದ್ಯಲ್ಲ ಅದ್ಯಾಕೋ ತುಂಬಾ ಅಭಾಸ ಎನ್ನಿಸಿತು.
ಈ ದೇಶದಲ್ಲಿ ಹೋಪ್ ಇಟ್ಕೊಳ್ಳೋದೇ ಅಪರಾಧ ! ಅನ್ನೋ ಸಾಲಿದ್ಯಲ್ಲ.. ಸ್ವಾತಂತ್ರ್ಯೋತ್ಸವದ ದಿವಸವೇ ಆ ಸಾಲನ್ನು ಓದಬೇಕಾಯ್ತಲ್ಲ..
ಒಂದೇ ನಿಮಿಶ. ನಾನಿಲ್ಲಿ ಯಾವುದನ್ನೂ ಜಸ್ಟಿಫೈ ಮಾಡ್ತಿಲ್ಲ. ಬಟ್ ಆಕ್ರೋಶ ಹೊರಹಾಕೋವಾಗ ನಾವ್ಯಾಕೋ ಸ್ವಲ್ಪ ಡೀವಿಯೇಟ್ ಆಗ್ತಿದ್ದೀವೇನೋ ಅನ್ನಿಸಿಬಿಡ್ತು ಅಷ್ಟೇ.
ಬೈಬೇಕಾಗಿದ್ದು ಯಾರಿಗೆ ? ದೂಷಿಸಬೇಕಾದ್ದು ಯಾರನ್ನ ? ಆಕ್ರೋಶ ಹೊರಹಾಕಬೇಕಿರೋದು ಯಾರ ಮೇಲೆ ? ಅಂತ ನೀವ್ ಕೇಳಿದ್ರೆ ನನ್ನ ಉತ್ತರ ಸಮಾಜವನ್ನ ಅಂತೀನಿ.
ಯಾರ ಕೋಪಕ್ಕೆ ಪರಶಿವನೂ ನತಮಸ್ತಕನಾಗಿ ಕೈ ಮುಗಿದು ನಿಲ್ತಾನೋ, ಯಾರ ಕೆಂಗಣ್ಣುಗಳೆದುರು ಸೃಷ್ಟಿಕರ್ತ ಬ್ರಹ್ಮನೇ ಕರಮುಗಿಯುತ್ತಾನೋ, ಯಾರ ರೌದ್ರಾವತಾರಕ್ಕೆ ಸ್ಥಿತಿಕರ್ತ ವಿಷ್ಣುವೂ ಮಂಡಿಯೂರುತ್ತಾನೋ, ಯಾರ ಮಡಿಲಲ್ಲಿ ಬ್ರಹ್ಮಾಂಡದ ಮಹಾರಥಿಗಳಾದ ತ್ರಿಮೂರ್ತಿಗಳು ಮಕ್ಕಳಾಗಿಬಿಡುತ್ತಾರೋ, ಅಂಥಹ ಸ್ತ್ರೀರೂಪವನ್ನು ಕೇವಲ ಮತ್ತು ಕೇವಲ ಅರೆಘಳಿಗೆಯ ಕಾಮದ ವಸ್ತುವಾಗಿ ನೋಡುತ್ತಿದೆಯಲ್ಲ.. ಆ ಸಮಾಜದ್ದು.
ಸಮಾಜ ಅಂದ್ರೆ ನಾವೇ ತಾನೆ ? ನಮ್ಮನ್ನು ನಾವು ಬೈಕೊಳಕ್ಕಾಗತ್ತಾ ? ಅದ್ಕೆ ದೇಶವನ್ನು ಬೈದುಬಿಡ್ತೀವಿ ಅನ್ನೋದು ಯಾಕೋ ಸರಿ ಅನ್ನಿಸಲ್ಲ. ಜಗತ್ ಸೃಷ್ಟಿಗೆ ಕಾರಣೀಭೂತಳಾದ ಹೆಣ್ಣನ್ನು ಆದಿಶಕ್ತಿಯೆಂದು ಪೂಜಿಸುವುದನ್ನು ಕಲಿಸಿಕೊಟ್ಟಿದ್ದು ಈ ದೇಶ. ಹೆಣ್ಣನ್ನು ಪೂಜಿಸುವಲ್ಲಿ ದೇವತೇಗಳೇ ನೆಲೆಸಿರುತ್ತಾರೆ ಎಂಬ ತತ್ವಕೊಟ್ಟಿದ್ದು ಈ ದೇಶ. ತೊಟ್ಟಿಲುತೂಗುವ ಕೈ ದೇಶವನ್ನಾಳಬಲ್ಲದು ಎಂಬ ಪಾಠ ಕಲಿಸಿದ್ದು ಇದೇ ದೇಶ.
ಅದಕ್ಕೇ ಅಲ್ಲವೇ ದಿ ಗ್ರೇಟ್ ಅಲೆಕ್ಸಾಂಡರನ್ನೇ ಸೋಲಿಸಿದ ಕಾಂಭೋಜ ಕುಲದ ರಾಣಿ ಕೃಪಾಳಂಥವರು ಉದಯಿಸಿದ್ದು. ಆದಿ ಶಂಕರರನ್ನೇ ಸೋಲಿಸಿದ್ ಉದಯಭಾರತಿ ಎಂಬಂತಹ ಹೆಣ್ಣುಮಗಳು ಹುಟ್ಟಿದ್ದು. ರಾಣಿ ದುರ್ಗವತಿಯಂತಹ, ಅಹಲ್ಯಾ ಬಾಯಿ ಹೋಳ್ಕರಳಂತಹ, ರಾಣಿ ಲಕ್ಷ್ಮೀಬಾಯಿಯಂತಹ ವೀರನಾರಿಮಣಿಗಳು ಅವತರಿಸಿದ್ದು.
ಆದರೆ ಇದೇ ದೇಶದಲ್ಲೀಗ ಈ ಎಲ್ಲಾ ಬೋಧನೆಗಳೂ ಹಳ್ಳ ಹಿಡಿಯುವಂತಾಗಿರುವುದೇ ವಿಪರ್ಯಾಸ. ಇದಕ್ಕೆ ಕಾರಣ ದಾರಿತಪ್ಪುತ್ತಿರುವ ಸಮಾಜ ಎಂದರೆ ಸರಿಯಾಗುತ್ತದೇನೊ. ಸಮಾಜವೇಕೆ ದಾರಿತಪ್ಪುತ್ತಿದೆ ? ಸಮಸ್ಯೆಯ ಮೂಲ ಎಲ್ಲಿದೆ ? ಎಂಬುದನ್ನು ಹುಡುಕಿಕೊಂಡರೆ ಅರ್ಧ ಸಮಸ್ಯೆ ಪರಿಹಾರವಾದಂತೆ.
ನಾಗರೀಕತೆ ಮತ್ತು ಸಂಸ್ಕೃತಿ ಇವೆರಡರ ನಡುವಿನ ವ್ಯತ್ಯಾಸ ಗುರುತಿಸುವಲ್ಲಿ ನಾವು ಎಡವಿದ್ದೇವಲ್ಲ. ಸಮಸ್ಯೆ ಹುಟ್ಟಿದ್ದೇ ಅಲ್ಲಿಂದ. ಯಾವುದನ್ನು ನಾಗರೀಕವಾಗಿ ಸ್ವೀಕರಿಸಬಹುದಿತ್ತೋ ಅದನ್ನು ಸಂಸ್ಕೃತಿಯಾಗಿಸಿಕೊಂಡೆವಲ್ಲ.. ಸಮಸ್ಯೆ ಮೊಳಕೆಯೊಡೆದದ್ದು ಅಲ್ಲೇ.
ಇನ್ನೂ ಸರಳವಾಗಿ ಹೇಳ್ತೇನೆ ಕೇಳಿ. ಸಂಸ್ಕೃತಿ ಯಾವತ್ತೂ ಬದಲಾಗುವುದಿಲ್ಲ. ಆದರೆ ನಾಗರೀಕತೆ ವಿಕಸಿತವಾಗುತ್ತದೆ. ತಿನ್ನುವ ಆಹಾರ ಪರಬ್ರಹ್ಮ ಸ್ವರೂಪ ಅದನ್ನು ಗೌರವಿಸಬೇಕು ಎನ್ನುವುದು ಸಂಸ್ಕೃತಿ, ಈ ಹೊತ್ತಿಗೆ ಇದನ್ನು ತಿನ್ನಬೇಕೆನ್ನುವುದು ನಾಗರೀಕತೆ. ಅಭಿವ್ಯಕ್ತಿ, ನಂಬಿಕೆ, ನೈತಿಕತೆ ಮತ್ತು ಮೌಲ್ಯಗಳು ಸಂಸ್ಕೃತಿಯ ಭಾಗವಾದರೆ...ಆಡಳಿತ, ತಂತ್ರಜ್ಞಾನ, ಕಾನೂನು ಇವೆಲ್ಲ ನಾಗರೀಕತೆಯ ಭಾಗಗಳು.
ನಾವೆಲ್ಲ ನಾಗರೀಕರಂತೂ ಹೌದು, ಒಪ್ಪಿಕೊಳ್ಳೋಣ. ಆದರೆ ಸಂಸ್ಕೃತಿವಂತರಾ ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡಾಗ ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಬಹುದು. ಕಾಲಕ್ಕೆ ತಕ್ಕಂತೆ ಬದಲಾಗುವ ನಾಗರೀಕತೆಯನ್ನು ನಾವು ಸಾಂಸ್ಕೃತಿಕವಾಗಿ ಅಪ್ಪಿಕೊಳ್ಳುತ್ತಿದ್ದೇವಲ್ಲ ಅಲ್ಲಿಯೇ ಸಮಸ್ಯೆ ಇರುವುದು. ತಂದೆತಾಯಿ, ಗುರು ಹಿರಿಯರನ್ನು ಗೌರವಿಸಬೇಕು. ಹೆಣ್ಣನ್ನು ಪೂಜಿಸಬೇಕು ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಲು ನಾವು ವಿಫಲರಾಗುತ್ತಿದ್ದೇವಲ್ಲ ಇದು ಸಂಸ್ಕೃತಿಯ ಅಧಃಪತನವಲ್ಲದೇ ಇನ್ನೇನು ? ಇದಕ್ಕೆ ಉತ್ತರ ಕಂಡುಕೊಂಡಾಗ ಮಾತ್ರವೇ ಈ ಎಲ್ಲ ನಾಚಿಕೆಗೇಡಿನ ಘಟನೆಗಳು ನಿಂತಾವು. ಸಿವಿಲೈಸೇಷನ್ ಮತ್ತು ಕಲ್ಚರ್ ಈ ಎರಡು ಪದಗಳ ನಡುವಿನ ಗೆರೆ ನಮಗೆ ಅರ್ಥವಾದಾಗ ಬದುಕು ಸುಲಭವಾಗಬಹುದು. ಬಿಡಿ ತೀರಾ ಫಿಲಾಸಾಫಿಕಲ್ ಆಗಿಹೇಳ ಹೊರಟರೆ ಅರ್ಥವಾಗದೇ ಇರಬಹುದು, ಬರವಣಿಗೆಯಲ್ಲಿ ನಾನೂ ಕೊಂಚ ವೀಕ್.
ಬಟ್, ಸಮಾಜ ದಾರಿ ತಪ್ಪುತ್ತಿರುವುದಂತೂ ಸತ್ಯ. ಹೆಣ್ಮಕ್ಳು ಹದ್ದು ಬಸ್ತಿನಲ್ಲಿದ್ರೆ ಎಲ್ಲಾ ಸರಿಇರುತ್ತೆ, ಹೆಣ್ಮಕ್ಕಳು ಹೆಂಗೆಂಗೋ ಆಡ್ಬಾರ್ದು, ಮೈ ಕಾಣಿಸೋ ಬಟ್ಟೆ ಹಾಕ್ಕೊಳ್ಳೋದು, ಕೂದಲು ಬಿಚ್ಚಿ ಹರಡಿಕೊಳ್ಳೋದು ಎಲ್ಲಾ ಕಡಿಮೆ ಆದ್ರೆ ಸಮಸ್ಯೆ ಕಡಿಮೆ ಆಗತ್ತೆ ಅಂತ ವಾದ ಮಾಡೋರು ತುಂಬಾ ಜನ ಇದಾರೆ. ಅಪ್ಕೋರ್ಸ್ ಅತಿಯಾದರೆ ಅಮೃತವೂ ವಿಷ, ಅತಿ ಸರ್ವತ್ರ ವರ್ಜಯೇತ್ ಅಂತಾರಲ್ಲ ಹಾಗೆ. ಬಟ್, ಇದ್ನೆಲ್ಲ ಹೇಳೋಕೂ ಮುನ್ನ ಗಂಡ್ಮಕ್ಳು ಎಲ್ಲಿಗ್ ಹೋಗ್ ಮುಟ್ಟಿದಾರೆ ಅಂತನೂ ಸ್ವಲ್ಪ ಯೋಚ್ನೆ ಮಾಡೋದು ಮುಖ್ಯ ಅನ್ನಿಸುತ್ತಲ್ವಾ ? ಫೆಮಿನಿಸಮ್ ದೃಷ್ಟಿಯಲ್ಲಿ ಹೇಳ್ತಿಲ್ಲ. ದೂಷಿಸುವಾಗ ಎರಡೂ ಕಡೆ ನೋಡ್ಕೊಳ್ಳೋದು ಉತ್ತಮ ಅನ್ಸತ್ತೆ.
ಒಂದು ಹೆಣ್ಮಗಳಿಗೆ ಹೀಗೆಲ್ಲ ಮಾಡಿರುವಾತನ ಮಾನಸಿಕ ವಿಕೃತಿ ಅದ್ಯಾವ ಮಟ್ಟಕ್ಕೆ ತಲುಪಿರಬಹುದು. ತನ್ನಂತೆ ಆಕೆಯದೂ ಮನುಷ್ಯದೇಹವೇ ಅಂತನೂ ಅವನಿಗೆ ಅನ್ನಿಸೋದಿಲ್ಲ ಅಂತಾದರೆ, ಆ ಮಟ್ಟಕ್ಕೆ ಮನುಷ್ಯ ಹೋಗಿ ತಲುಪುತ್ತಾನೆ ಅಂತಾದರೆ, ನಮ್ಮ ಸಮಾಜಕ್ಕೆ ಏನಾಗ್ತಿದೆ ? ಒಂಚೂರು ಯೋಚಿಸಬೇಕಲ್ವಾ.
ಈ ಸುದ್ದಿ ನಮ್ಮನೆಯ ಟಿವಿ ಚಾನೆಲ್ಗಳಲ್ಲಿ ಬಿತ್ತರವಾಗುತ್ತಿರುವಾಗ ನಮ್ಮಮನೆಯಲ್ಲಿದ್ದ ನಮ್ಮ ಅಕ್ಕನೋ, ಅಮ್ಮನೋ, ಹೆಂಡತಿಯೋ ಅಥವಾ ಇನ್ಯಾರೋ ಹೆಣ್ಣುಮಕ್ಕಳ ಮುಖ ಗಮನಿಸಿದ್ದೀರಾ ? ಅವ್ರ ಮುಖದಲ್ಲಿ ಕನಿಷ್ಟ ಒಂದು ಕ್ಷಣದ ಮಟ್ಟಿಗಾದರೂ ಅಸುರಕ್ಷತೆಯ ಭಾವ ಆವರಿಸಿಕೊಂಡಿರುತ್ತದೆ. ಅಂದರೆ ನಮ್ಮ ಸುತ್ತಮುತ್ತ ಒಂದು ಸೇಫ್ ವಾತಾವರಣ ಸೃಷ್ಟಿಸುವಲ್ಲಿ ನಾವು ಫೇಲ್ ಆಗಿಬಿಟ್ವಾ ? ಉಹೂ, ನಾವು ಫೇಲ್ ಆಗಿಲ್ಲ ಆದರೆ ಸಮಾಜ ಫೇಲ್ ಆಗಿದೆ.
ಹಾಗಿದ್ರೆ ಸಮಾಜವನ್ನು ತಿದ್ದೋಕಾಗತ್ತಾ ? ಒಬ್ಬಿಬ್ಬರಿಂದಂತೂ ಸಾಧ್ಯವಿಲ್ಲ ಬಿಡಿ, ನೂರಾರು - ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸೇವಕರಿರುವ ಅದೆಷ್ಟೋ ಸಂಘ - ಸಂಸ್ಥೆಗಳು, ಪೋಲೀಸರು, ಸರ್ಕಾರ ಎಲ್ಲವೂ ಪ್ರಯತ್ನಿಸುತ್ತಲೇ ಇದೆ. ಆದರೂ ಸಮಸ್ಯೆ ಮಾತ್ರ ತಪ್ಪಿಲ್ಲ. ಹಾಗಿದ್ರೆ ಇನ್ನೇನು ಮಾಡೋದು ? ಅಂತೆಲ್ಲ ಕೇಳಬೇಡಿ, ಬದಲಾವಣೆ ಒಬ್ಬನಿಂದಲೂ ಸಾಧ್ಯ. ನಾವು ನಮ್ಮ ಮನೆಯ ಮಕ್ಕಳಿಗೆ ಹೆಣ್ಣುಮಕ್ಕಳಿಗೆ ಗೌರವಿಸುವುದನ್ನು ಕಲಿಸಿದ್ದೇವಾ ? ನಮ್ಮ ಸುತ್ತಮುತ್ತಲಿನವರಿಗೆ ಆ ಬಗ್ಗೆ ತಿಳುವಳಿಕೆ ನೀಡಿದ್ದೇವಾ? ನನ್ನ ಗೆಳೆಯನೋ, ಸಂಬಂಧಿಕನೋ, ಕೆಲಸದವನೋ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿ ಸರಿಇದೆಯಾ ? ನನ್ನ ಪ್ರೇಯಸಿಯನ್ನೋ, ಅಕ್ಕನನ್ನೋ , ತಾಯಿಯನ್ನೋ ನಾನು ಗೌರವಿಸುತ್ತೇನಾ? ನನ್ನ ಗೆಳೆಯ ಗೌರವಿಸುತ್ತಾನಾ? ನಮ್ಮನೆಯವರೆಲ್ಲರೂ ಗೌರವಿಸುತ್ತಾರಾ ? ಎಂಬ ಪ್ರಶ್ನೆ ಕೇಳಿಕೊಂಡರೆ ಸಾಕು. ಅದೇ ಬದಲಾವಣೆಗೆ ನಾಂದಿಯಾಗುತ್ತದೆ.
ಇನ್ನೂ ಕಾಲ ಮಿಂಚಿಲ್ಲ. ಆದಿಶಕ್ತಿಯ ಕೋಪ ಪರಾಕಾಷ್ಠೆಯ ಗಡಿ ಮೀರುವುದರೊಳಗೆ, ಪಾರ್ವತಿಯ ಕೋಪ ಮಹಾಕಾಳಿಯ ರೂಪ ಪಡೆಯಿವುದರೊಳಗೆ, ಬ್ರಹ್ಮಚಾರಣಿ ಭದ್ರಕಾಳಿಯಾಗುವುದರೊಳಗೆ .. ವಿಸ್ಮೃತಿಯನ್ನು ಹೋಗಲಾಡಿಸಬೇಕಿದೆ. ಇಲ್ಲವೆಂದಾದರೆ
ತ್ರಾಹಿಮಾಂ ತ್ರಾಹಿಮಾಂ, ಪಾಹಿಮಾಂ ಪಾಹಿಮಾಂ
ಜಗತ್-ಸೃಷ್ಟಿ - ಪ್ರಳಯ ವಿಶ್ವ ಸಂಕಟ ತವ ನಾಶಿತಾಮ್
ಎಂದು ಬೇಡಿಕೊಳ್ಳಬೇಕಷ್ಟೇ..