ಸಾಮಾಜಿಕ ಮತ್ತು ಕೌಟುಂಬಿಕ
ಮಾತಿನ ಮಾಗು
Mar 09, 2025

ಚಿತ್ರ ಕೃಪೆ ಮೆಟಾ ಎಐ
ಆಕಸ್ಮಿಕವಾಗಿ ಸಾವನ್ನಪ್ಪಿದ ಗಂಡನ ಅಗಲುವಿಕೆ ಅನುಸೂಯಮ್ಮನನ್ನು ಕುಗ್ಗಿಸಿತು. ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ಧೈರ್ಯ ತಂದುಕೊಂಡು ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕೆ ಸೇರಿ ಹಗಲು ರಾತ್ರಿ ದುಡಿದು ಮಕ್ಕಳನ್ನು ಬೆಳೆಸಿದರು. ಮಗ ತಾಯಿಯ ಕಷ್ಟವನ್ನು ಅರಿತಿದ್ದರಿಂದ ಶ್ರದ್ಧೆಯಿಂದ ಓದಿ ಒಳ್ಳೆಯ ಅಂಕದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಒಳ್ಳೆಯ ಉದ್ಯೋಗ ಪಡೆದನು. ಮಗ ದುಡಿಯಲು ಆರಂಭಿಸಿದ ಮೇಲೆ ಅಮ್ಮನಿಗೆ ವಿರಾಮ ನೀಡಲು ನಿರ್ಧಾರ ಮಾಡಿ ಅನುಸೂಯಮ್ಮನಿಗೆ ಆರಾಮ್ ಆಗಿ ಮನೆಯಲ್ಲಿ ಇರುವಂತೆ ಹೇಳಿದನು. ಇದಕ್ಕೆ ಒಪ್ಪದ ಅನುಸೂಯಮ್ಮ ಕಷ್ಟ ಪಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಮಗಳು ಓದಿ ಮುಗಿಯುತ್ತಿದ್ದಂತೆ ಒಂದೊಳ್ಳೆ ವರನನ್ನು ಹುಡುಕಿ ಮದುವೆ ಮಾಡಬೇಕು ಎಂದು ಸದಾ ಯೋಚಿಸುತ್ತಿದ್ದರು.
ಮಗ ಸಾಲ ಮಾಡಿ ಮನೆಯೊಂದನ್ನು ಕಟ್ಟಿಸಿದ ವಿಚಾರ ತಿಳಿದಾಗ ಅನುಸೂಯಮ್ಮ ಕೋಪ ಮಾಡಿಕೊಂಡರು. ಮಗಳ ಮದುವೆ ಮಾಡಬೇಕೆಂದಿರುವಾಗ ಮನೆಗಾಗಿ ಸಾಲ ಮಾಡಿದ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಅವರ ಆತ್ಮೀಯರೊಬ್ಬರ ಸಲಹೆಯಂತೆ ಕೆಲಸಕ್ಕೆ ಹೋಗುವವಳನ್ನು ಮಗನಿಗೆ ಮದುವೆ ಮಾಡಿದರೆ ಮಗನಿಗೆ ಹೆಚ್ಚಿನ ಶ್ರಮವಾಗಲಾರದು, ಮಗಳ ಮದುವೆಯನ್ನು ನಿರಾತಂಕವಾಗಿ ಮಾಡಬಹುದು ಎಂದು
ಯೋಚಿಸಿ ಮಗನಿಗೊಂದು ಸಂಬಂಧ ಹುಡುಕಿದರು.
ಕೆಲಸಕ್ಕೆ ಹೋಗುವ ಹುಡುಗಿಯನ್ನು ಹುಡುಕಿ ಮಗನಿಗೆ ಮದುವೆ ಮಾಡಿದರು. ಮದುವೆಯಾಗಿ ಮನೆಗೆ ಬಂದ ಸೊಸೆ ಕೆಲಸಕ್ಕೆ ಹೋಗುವ ಬಗ್ಗೆ ಅನುಸೂಯಮ್ಮನಿಗೆ ಸಂತೋಷವಿತ್ತು. ಒಳಗೆ ಹೊರಗೆ ದುಡಿಯುವ ಸೊಸೆಯ ಬಗ್ಗೆ ಹೆಮ್ಮೆ ಇತ್ತು.
ಮದುವೆಯಾಗಿ ಒಂದು ತಿಂಗಳು ಕಳೆಯಿತು. ಸ್ವಾತಿಯ
ಸಂಬಳ ದಿನ ಅನಸೂಯಾ ಬಾಗಿಲಲ್ಲಿ ನಿಂತು ಕಾಯುತ್ತಿದ್ದರು. ಅಂದು ಸ್ವಾತಿ ಮನೆಗೆ ಬರುವುದು ಕೊಂಚ ತಡವಾಗಿತ್ತು. ತನಗಾಗಿ ಅತ್ತೆ ಬಾಗಿಲಲ್ಲಿ ನಿಂತು ಚಡಪಡಿಸುತ್ತಿರುವುದು ನೋಡಿ ಆಶ್ಚರ್ಯದ ಜೊತೆಗೆ ಸಂತೋಷವಾಯಿತು.
" ಯಾಕಮ್ಮ ಇಷ್ಟು ಲೇಟಾಯಿತು. ಒಂದು ಪೋನ್ ಆದ್ರು ಮಾಡ್ಬಹುದಿತ್ತು" ಎಂದು ಸಣ್ಣದಾಗಿ ಆಕ್ಷೇಪಿಸಿದರು.
" ದಾರಿಯಲ್ಲಿ ಬರುವಾಗ ಕ್ಯಾಬ್ ಹಾಳಾಯಿತು ಅತ್ತೆ.ಪೋನ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿದೆ..ಮೊದಲು ಚಾರ್ಜ್ ಗೆ ಹಾಕ್ಬೇಕು " ಎಂದವಳು ಅಲ್ಲಿ ನಿಲ್ಲದೆ ತನ್ನ ಕೋಣೆಗೆ ಹೋದಳು. ಪೋನ್ ಚಾರ್ಜ್ ಗೆ ಹಾಕಿ ಕೈ ಕಾಲು ತೊಳೆದು ಅಲ್ಲಿಯೇ ಬಾಟಲ್ ನಲ್ಲಿ ಇದ್ದ ನೀರು ಕುಡಿದು ಪೋನ್ ನೋಡಿದವಳಿಗೆ ಅರುಣ್ ಮೆಸೇಜ್ ಮಾಡಿರುವುದು ತಿಳಿಯಿತು. ಏನು ಕಳಿಸಿರಬಹುದು ಎಂಬ ಕುತೂಹಲದಿಂದ ವಾಟ್ಸಪ್ ತೆರೆದಳು.
" ಅಪ್ಪು ಯಾಕೆ ಏನು ಅಂತ ಕೇಳ್ಬೇಡ. ನಾನು ಮನೆಗೆ ಬಂದ ಮೇಲೆ ವಿಷಯ ಹೇಳ್ತೀನಿ. ಅಮ್ಮ ನಿನ್ನ ಸಂಬಳ ಕೇಳಿದ್ರೆ ನನಗೆ ಕಳಿಸಿದ್ದಿ ಅಂತ ಹೇಳು.ಪ್ಲೀಸ್ " ಎಂದು ಕಳಿಸಿರುವುದನ್ನು ಕಂಡಳು.
ಸ್ವಾತಿ ತಂದೆ ಇಲ್ಲದೆ ತಾಯಿಯ ಆಶ್ರಯದಲ್ಲಿ ಬೆಳೆದವಳು. ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೊತ್ತಿದ್ದಳು. ಎಲ್ಲಾ ವಿಚಾರದಲ್ಲೂ ಅವಳು ತುಂಬಾ ಜಾಣೆಯಾಗಿದ್ದಳು. ಮನೆಯಲ್ಲಿನ ಸೂಕ್ಷ್ಮ ಸಂಗತಿಗಳನ್ನು ಬಹಳಾ ಬೇಗ ಅರ್ಥ ಮಾಡಿಕೊಳ್ಳುತ್ತಿದ್ದಳು. ಸೌಮ್ಯ ಸ್ವಭಾವದ ಸ್ವಾತಿ ಎಂತಹ ಕಠಿಣ ಸಂದರ್ಭದಲ್ಲಿಯೂ ಕೂಡ ತನ್ನ ವಿವೇಕ ಕಳೆದುಕೊಳ್ಳದೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದಳು.
ಅರುಣ್ ಕಳಿಸಿದ ಸಂದೇಶ ಓದಿ ಪೋನ್ ಬದಿಗಿಟ್ಟು ಅಡುಗೆ ಮನೆಗೆ ಹೋದಳು. ಅನುಸೂಯಮ್ಮ ಅವಳಿಗೆ ಇಷ್ಟವೆಂದು ಈರುಳ್ಳಿ ಪಕೋಡವನ್ನು ಮೊದಲೇ ತಯಾರಿಸಿ ಇಟ್ಟವರು ಸೊಸೆಗೆ ಬಿಸಿ ಬಿಸಿ ಕಾಫಿ ಕೊಟ್ಟು ಪಕೋಡವನ್ನು ತಿನ್ನಲು ಕೊಟ್ಟರು.
" ಅತ್ತೆ ಪಕೋಡ ತುಂಬಾ ಚೆನ್ನಾಗಿದೆ. ಏನ್ ಸ್ಪೆಷಲ್ ಇವತ್ತು" ಎಂದು ಕೇಳಿದವಳ ಮಾತಿಗೆ ಉತ್ತರವಾಗಿ "ಸುಮ್ಮನೆ ನಿಮಗೆಲ್ಲ ಇಷ್ಟ ಅಲ್ವಾ ಅಂತ ಮಾಡ್ದೆ" ಎಂದು ಹೇಳಿದಳು ಮಗಳನ್ನು ಕರೆದಳು. ತನ್ನಷ್ಟಕ್ಕೆ ಕೋಣೆಯಲ್ಲಿ ಕುಳಿತ ಅಕ್ಷರ ಹೊರಗೆ ಬಂದು ಅತ್ತಿಗೆಯೊಂದಿಗೆ ಕುಳಿತು ಪಕೋಡ ಕೈಗೆತ್ತಿಕೊಂಡಳು.
" ಅಕ್ಷರ ಇನ್ನೇನು ನಿನ್ನ ಓದು ಮುಗಿಯುತ್ತೆ. ಕೆಲಸಕ್ಕೆ ಹೋಗುವ ಅಂದಾಜು ಇದ್ಯಾ " ಎಂದ ಕೇಳಿದ ಸ್ವಾತಿಯ ಮುಖವನ್ನು ಅನುಸೂಯಮ್ಮ ಹಾಗು ಅಕ್ಷರ ನೋಡಿದರು.
"ಯಾಕೆ ಅತ್ತಿಗೆ ಹೀಗೆ ಕೇಳ್ತಾ ಇದ್ದೀರಾ..ನಾನು ಮದುವೆಯಾದ ಮೇಲು ಕೆಲಸ ಮಾಡ್ಬೇಕು ಅಂತ ಇದ್ದೀನಿ ನಿಮ್ಮ ತರಾನೆ" ಎಂದ ಮಗಳನ್ನು ನೋಡುತ್ತಾ " ಹೌದು ಅವಳು ಮದುವೆಯಾದ ಮೇಲು ಕೆಲಸಕ್ಕೆ ಕಳಿಸಲು ತಕರಾರು ಮಾಡದಂತ ಮನೆಯ ವರನನ್ನು ಹುಡುಕಿ ಮದುವೆ ಮಾಡ್ಬೇಕು. ನನ್ನ ತರ ಸೊಸೆನಾ ನೋಡ್ಕೊಳೋ ಅತ್ತೆ ನನ್ನ ಮಗಳಿಗೆ ಸಿಗ್ಬೇಕು" ಎಂದು ತನ್ನ ಸೆರಗಿಗೆ ಕೈ ಒರಿಸಿಕೊಂಡಳು.
" ನಿಜ ಅತ್ತೆ. ನಿಮ್ಮ ತರ ಇದ್ರೆ ಯಾವ ಸೊಸೆಗು ಸಮಸ್ಯೆ ಇರಲ್ಲ" ಎಂದವಳು ಅಕ್ಷರ ಕಡೆ ತಿರುಗಿ " ಮದುವೆಯಾದ ಮೇಲೆ ನೀನು ದುಡಿಯುವ ಹಣವನ್ನು ಏನ್ಮಾಡ್ತಿ" ಎಂದು ಕೇಳಿದಳು.
ಒಂದು ಕ್ಷಣವೂ ಯೋಚಿಸದೆ "ನನ್ನ ದುಡ್ಡು ನನ್ನ ದುಡಿಮೆ ನನ್ನ ಇಷ್ಟ. ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ" ಎನ್ನುತ್ತಿದ್ದಂತೆ "ಅಲ್ಲಾ ಅಕ್ಷರಾ ಅಕಸ್ಮಾತ್ ನಿನ್ನ ಅತ್ತೆ ನಿನ್ನ ಸಂಪಾದನೆನ ಕೇಳಿದ್ರೆ " ಎಂದಳು.
ಬಾಣದಂತೆ ಬಂದ ಪ್ರಶ್ನೆಗೆ ಅಷ್ಟೇ ವೇಗವಾಗಿ "ಕೊಡಲ್ಲ ಅಂತಿನೀ. ಯಾಕೆ ಕೊಡ್ಬೇಕು ಅಂತ ಧ್ವನಿ ಏರಿಸಿ ಕೇಳ್ತಿನಿ. ತುಂಬಾ ಅವಶ್ಯಕತೆ ಇದ್ರೆ ಸ್ವಲ್ಪ ಕೊಡ್ತಿನಿ. ಅಷ್ಟಕ್ಕೂ ಅವರಿಗೆ ನನ್ನ ದುಡ್ಡು ಯಾಕೆ ಬೇಕಾಗುತ್ತೆ. ಅವರ ಮಗ ಅಂದ್ರೆ ನನ್ನ ಗಂಡ ದುಡಿತಾನಲ್ಲ ಅದು ಸಾಕಾಗಲ್ವಾ" ಎಂದು ಖಾರವಾಗಿ ನುಡಿದಳು.
ಅಲ್ಲಿಯೇ ಇದ್ದ ಅನುಸೂಯಮ್ಮ ಮಗಳ ಮಾತನ್ನು ಕೇಳಿ ಬೆರಗಾದಳು. ತಾನು ಸ್ವಾತಿಯ ಬಳಿ ಹಣ ಕೇಳಿದರೆ ಹೀಗೆ ಉತ್ತರಿಸಬಹುದೇ ಎಂದು ಕಾಡತೊಡಗಿತು. ತಾನು ಸೊಸೆಯ ಹಣದ ಮೇಲೆ ಅಧಿಕಾರ ಚಲಾಯಿಸುವುದು ಎಷ್ಟು ಸರಿ ಎಂದು ಯೋಚಿಸುತ್ತಿದ್ದಂತೆ " ಅತ್ತೆ ಏನು ಯೋಚನೆ ಮಾಡ್ತಾ ಇದ್ದೀರಿ" ಎಂಬ ಸ್ವಾತಿಯ ಪ್ರಶ್ನೆ ಅನುಸೂಯಳನ್ನು ಎಚ್ಚರಿಸಿತು. ತಡವರಿಸುತ್ತಾ ಏನಿಲ್ಲ ಸುಮ್ಮನೆ ಎಂದವಳ ಕೈ ಹಿಡಿದು ಅವಳ ಕಾಲು ಬಳಿ ಕುಳಿತಳು. ಅನುಸೂಯ ಅವಳ ಈ ನಡೆಯನ್ನು ನಿರೀಕ್ಷಿಸಿರಲಿಲ್ಲ.
" ಅತ್ತೆ ನಂಗೆ ಇವತ್ತು ಸಂಬಳ ಬಂತು. ಮುಂದಿನ ತಿಂಗಳು ನನಗೆ ಪ್ರಮೋಶನ್ ಆಗೋದಿದೆ. ಸಂಬಳ ಸ್ವಲ್ಪ ಜಾಸ್ತಿ ಆಗುತ್ತೆ. ನನ್ನ ಅಮ್ಮ ನನ್ನ ತಮ್ಮನಿಗೆ ನನ್ನ ಬಿಟ್ರೆ ಬೇರೆ ಯಾರು ಇಲ್ಲ. ಅವರ ಜವಾಬ್ದಾರಿಯನ್ನು ತಮ್ಮನಿಗೆ ಕೆಲಸ ಸಿಗುವವರೆಗು ನಾನೇ ನಿಭಾಯಿಸಬೇಕು. ಅಮ್ಮ ಬಟ್ಟೆ ಹುಲಿದು ಸ್ವಲ್ಪ ಸಂಪಾದನೆ ಮಾಡ್ತಾರೆ. ಅವರಿಗು ತುಂಬಾ ದುಡಿಯೋಕೆ ಆಗಲ್ಲ. ನಾನೇ ಇಷ್ಟು ದಿನ ನೋಡಿಕೊಂಡಂತೆ ಮುಂದೇನೂ ನೋಡಿಕೊಳ್ತಿನಿ. ಹಾಗಂತ ಇಲ್ಲಿ ಜವಾಬ್ದಾರಿನ ಮರಿಯಲ್ಲ. ನನಗೆ ಗೊತ್ತು. ನೀವು ಅಕ್ಷರಾ ಬಗ್ಗೆ ಯೋಚನೆ ಮಾಡ್ತಾ ಅವಳ ಮದುವೆಯ ಒಳಗೆ ಈ ಮನೆ ಲೋನ್ ತೀರಿಸಬೇಕು ಅಂದ್ಕೊಂಡಿದ್ರಿ..ಅಲ್ವಾ..ಅದಕ್ಕೆ ನಾನು ಸದ್ಯದ ಮಟ್ಟಿಗೆ ಸ್ವಲ್ಪ ಸಹಾಯ ಮಾಡ್ತಿನಿ. ನನ್ನ ತಮ್ಮನಿಗೆ ಒಂದು ನೆಲೆ ಕಲ್ಪಿಸುವವರೆಗೆ ನಾನು ಅಲ್ಲಿಗೆ ಸ್ವಲ್ಪ ಜಾಸ್ತಿ ಕೊಡ್ತೀನಿ.
ಆಮೇಲೆ ನಾನು ಅಲ್ಲಿನ ಚಿಂತೆ ಮಾಡೊಲ್ಲ" ಎಂದವಳ ಕಂಠ ಒಣಗಿತು. ತಲೆ ತಗ್ಗಿಸಿ ಕುಳಿತಳು.
ಅನುಸೂಯ ಮೌನವಾಗಿ ಎಲ್ಲವನ್ನು ಆಲಿಸಿದಳು.ಸೊಸೆಯ ಬಗ್ಗೆ ಹೆಮ್ಮೆ ಎನಿಸಿತು. ಅವಳ ನಿಲುವು ಸರಿ ಎನಿಸಿತು. ತನ್ನ ಯೋಚನೆಯ ಬಗ್ಗೆ ನಾಚಿಕೆಯೆನಿಸಿತು. ಮೌನವಾಗಿ ಕುಳಿತ ಅತ್ತೆಯ ಕಂಡು ಸ್ವಾತಿ ಧೈರ್ಯವೆಲ್ಲಾ ಅಡಗಿತು. ಅರುಣ್ ಹೇಳಿದಂತೆ ಮಾಡಬೇಕಿತ್ತೇನೋ ಎಂದು ಪರಿತಪಿಸಿದಳು.
" ನಿನಗೆ ಸಂಬಳ ಚೆನ್ನಾಗಿದೆ ಆದಷ್ಟು ಬೇಗ ಈ ಮನೆಯ ಸಾಲ ತೀರಿಸಬಹುದು ಅಂತ ನನ್ನ ಮಗನಿಗೆ ನಿನ್ನೊಂದಿಗೆ
ಮದುವೆ ಮಾಡಿದೆ. ಮನೆಗೆ ಲಕ್ಷ್ಮಿಯನ್ನು ಕರೆತಂದಿರುವೆ. ನನ್ನ ಕಷ್ಟ ತೀರಿತೆಂದು ಭಾವಿಸಿದೆ. ಆದರೆ ನನ್ನ ಆಯ್ಕೆ ತಪ್ಪಾಗಿದೆ " ಎಂದು ಹೇಳುತ್ತಿದ್ದಂತೆ " ಅತ್ತೆ ಅದು ಹಾಗಲ್ಲ " ಎಂದು ಮಾತನಾಡುವವಳನ್ನು ತಡೆದು ಅಪ್ಪಿಕೊಂಡಳು.
" ನಾನು ಮನೆಗೆ ಮಹಾಲಕ್ಷ್ಮಿಯನ್ನು ತಂದಿರುವೆ. ಹುಟ್ಟಿದ ಮನೆ ಮೆಟ್ಟಿದ ಮನೆ ಎರಡನ್ನು ಬೆಳೆಗಿಸುವ ಸಾಮರ್ಥ್ಯ ಧೈರ್ಯ ಕೌಶಲ್ಯ ನಿನಗಿದೆ ಮಗಳೆ. ನನ್ನ ಮನದ ಕಣ್ಣನ್ನು ತೆರೆಸಿರುವೆ " ಎಂದು ಹೇಳುತ್ತಿದ್ದಂತೆ ಮರೆಯಲ್ಲಿ ನಿಂತು ಸಂಭಾಷಣೆ ಆಲಿಸುತ್ತಿದ್ದ ಅರುಣ್ ಚಪ್ಪಾಳೆ ತಟ್ಟುತ್ತಾ "ಸುಳ್ಳು ಹೇಳಿ ಸಂಭಾಳಿಸಬೇಕು ಅಂತ ಯೋಚಿಸಿದ್ದೆ. ನೀನು ಬ್ಯೂಟಿ ವಿತ್ ಬ್ರೈನ್ ಕಣೆ. ಮಾತಿನಲ್ಲಿ ಮ್ಯಾಜಿಕ್ ಮಾಡಿ ಅಮ್ಮನ ಗೆದ್ದಿ" ಎನ್ನುತ್ತಾ ತಾಯಿ ಹಾಗು ಮಡದಿಯನ್ನು ತಬ್ಬಿದನು.
" ಅತ್ತೆ ನಾ ನಾನು ಗೆದ್ದಿಲ್ಲ ಅವರು ನನ್ನ ಮಾತಿಗೆ ಒಪ್ಪಿ ನನ್ನ ಗೆಲ್ಲಿಸಿದರು" ಎನ್ನುತ್ತಾ ನಕ್ಕಳು.
"ಇಲ್ಲ ಮಗಳೆ ನಿನ್ನ ಮಾತಿನ ಮಾಗು ಮನೆಯ ಶಾಂತಿಯನ್ನು ಕಾಪಾಡಿದೆ. ಮನಸ್ಸುಗಳನ್ನು ಒಡೆಯದಂತೆ ನೋಡಿಕೊಂಡಿದೆ. ಯಾರಿಗೂ ನೋವಾಗದಂತೆ ನೋಡಿಕೊಳ್ಳಬೇಕೆಂದಿರುವ ನಿನ್ನ ನಿಲುವು ನನ್ನ ಮನವನು ಕರಗಿಸಿತು" ಎನ್ನುತ್ತಾ ಜಾರಿದ ಕಂಬನಿಯನ್ನು ಒರೆಸಿಕೊಂಡರು.
ಮೌನವಾಗಿ ಅತ್ತಿಗೆಯ ಮಾತನ್ನು ಆಲಿಸುತ್ತಿದ್ದ ಅಕ್ಷರ ಸಂಸಾರದಲ್ಲಿ ಧ್ವನಿ ಏರಿಸಿ ನಿಲುವನ್ನು ವ್ಯಕ್ತಪಡಿಸಿ ಜಗಳಕ್ಕೆ ನಾಂದಿ ಹಾಡುವ ಬದಲು ಮೆತ್ತಗೆ ಪರಿಸ್ಥಿತಿಯನ್ನು ವಿವರಿಸಿ ಅರ್ಥ ಮಾಡಿಸುವ ಪ್ರಯತ್ನ ಮಾಡಿ ಗೆಲ್ಲಬಹುದು ಎನ್ನುವುದನ್ನು ಕಲಿತಳು. ಅತ್ತಿಗೆಯ ಮಾತಿನಿಂದ ಕೋಪಗೊಳ್ಳದೆ ಸೊಸೆಯ ನಿರ್ಧಾರಕ್ಕೆ ಎದುರಾಡದೆ ತನ್ನ ಅಹಂಕಾರ ತೊಡೆದುಹಾಕಿ ತನ್ನ ಯೋಚನೆಯನ್ನು ಮನದಿಂದ ಕಿತ್ತೆಸೆದು ಒಪ್ಪಿಗೆ ಸೂಚಿಸಿದ ಅಮ್ಮನ ಬಗ್ಗೆ ಹೆಮ್ಮೆ ಎನಿಸಿತು. ಮಾತಿನ ಧಾಟಿ ಎಂಥದೇ ಕಠಿಣ ಸಂದರ್ಭವನ್ನು ತಿಳಿಯಾಗಿಸಲೂಬಹುದು, ಹಾದಿ ರಂಪ ಮಾಡಲೂಬಹುದು ಎನ್ನುವುದನ್ನು ಅರಿತಳು.
✍️ ಆಶ್ರಿತ ಕಿರಣ್
ಇತ್ತೀಚಿನ ಕಾಮೆಂಟ್‌ಗಳು