ಕವನಗಳು
ಕಾರುವ ಕಿಚ್ಚು
Mar 12, 2025

ಕಿಚ್ಚು
ಮೊಗದ ಮೇಲಿರುವುದು ಹುಸಿ ಮಂದಹಾಸ,
ಮನದೊಳಗೆ ಕಾರುವರು ಕಾರ್ಕೋಟಕ ವಿಷ,
ನಗು ನಗುತ್ತಲೇ ಕತ್ತಿಯನು ಮಸೆಯುವರು
ಬೆನ್ನಿಗೆ ಚೂರಿಯಿಂದ ಚುಚ್ಚಿಯೇ ಬಿಡುವರು,
ಅವರ ನಂಬಿಕೊಂಡರೆ ತುಚ್ಛವಾಗಿ ಕಾಣುವರು.
ಹೊರಗಿನವರು ನಮ್ಮವರು ಎಂಬ ಭೇದ ಇಲ್ಲಿಲ್ಲ.
ಆಗಾಗ ತೋರುವರು ನಮ್ಮೊಳಗಿರುವ ಹಲವರು.
ನೇರ ನುಡಿ ಕೋಪದ ಮಾತುಗಳಿಗಿಂತ ಹರಿತವು, ಒಳಗೊಳಗೆ ನಂಜುಕಾರುವ ಮಂದಿ ಸಹವಾಸವು.
ಎಲ್ಲವೂ ಇರಬೇಕು ಅವರ ಮೂಗಿನ ನೇರ,
ಸದಾ ಇತರರ ಹೋಲಿಸುತ ಆಗುವರು ಭಾರ
ಸತ್ಯ ನ್ಯಾಯ ನೀತಿ ದೈವ ಧರ್ಮ ದೇವರ ರೀತಿ ಇವರಿಗಿಲ್ಲವು ಯಾವುದೇ ಪಾಪ ಪುಣ್ಯದ ಭೀತಿ.
ಸದಾ ಆಶಿಸುವರು ಎಲ್ಲ ತಮ್ಮ ಕೈಗೊಂಬೆಗಳೆಂದು, ಮನದಲ್ಲಿ ದ್ವೇಷ ಅಸೂಯೆ ಅಹಂಕಾರದ ಗುಂಗು,
ಜೊತೆಯಲ್ಲಿರಲು ನಾಟಕ ತಂತ್ರಕುತಂತ್ರದ ಬದುಕು,
ತೋರುವರು ಎಲ್ಲರಲಿ ಕಪಟ ಸ್ನೇಹವ ಪ್ರತಿ ಕ್ಷಣಕು.
ಇವರಿಗೆ ಯಾರ, ಯಾವ ಭೀತಿ ಭಯವೂ ಇಲ್ಲ,
ಪ್ರೀತಿ ಸ್ನೇಹ ಕರುಣೆಗಳಿಗೆ ಅವರಲ್ಲಿ ಜಾಗವಿಲ್ಲ.
ಎಂದೊ ನಡೆದು ಹೋದ ಘಟನೆಗಳಿಗೆ ಕಿಚ್ಚನಿಟ್ಟು,
ಕೆಂಡವಾರದಂತೆ ನಿಗಿನಿಗಿಸುವರು ಬಂಧವ ಸುಟ್ಟು
ತಾನೂ ಸುಟ್ಟು ಪರರ ಸುಡುವರು ಕೊಳ್ಳಿಯಿಟ್ಟು.
ಧನ್ಯವಾದಗಳು
ಮಮತಾ ಶೃಂಗೇರಿ
ಇತ್ತೀಚಿನ ಕಾಮೆಂಟ್‌ಗಳು