ಸಣ್ಣ ಕಥೆಗಳು

ಪುಟ್ಟಿಯ ಉದ್ಯಾನ

Jan 09, 2026

ಹಚ್ಚ ಹಸಿರು

ಎಷ್ಟೊಂದು ನಗು.. ಓಡಿದ್ದೆ ಓಡಿದ್ದು ..
ತಣ್ಣಗೆ ಬೀಸಿದ ಸುಳಿಗಾಳಿಯಲಿ ಹಾರುತ್ತಿದ ಒಣಗಿದ ಎಲೆಯನ್ನು ಹಿಡಿಯಲು ಅದರ ಹಿಂದೆ ಓಡುವಾಗ ಧಾವಂತವಿರಲಿಲ್ಲ , ಹಟವಿರಲಿಲ್ಲ, ಯಾವುದೇ ಕಾಂಪಿಟೇಶನ್ ಮನಸ್ಥಿತಿಯೂ ಅಲ್ಲಿರಲಿಲ್ಲ!!

ಪುಟ್ಟ ಪುಟ್ಟ ಹೂವುಗಳು ಬಣ್ಣತುಂಬಿ ನಲಿಯುವಾಗ ಅದರ ಸುತ್ತಾ ಹಾರಾಡುವ ಪಾತರಗಿತ್ತಿಯು ಈ ಹೂದೋಟದ ಅಂದವನ್ನೆ ಹೆಚ್ಚಿಸಿದಂತಿತ್ತು. 
ನಾನು ಆ ಪಾತರಗಿತ್ತಿಯ ಹತ್ತರತ್ತಿರಕ್ಕೆ ಹೋಗುತ್ತಿದ್ದೆ ಅದನ್ನು ಮುಟ್ಟಲು ಕೈ ಚಾಚುತ್ತಿದ್ದೆ.. 

ಹೂವಿನ ರಂಗನ್ನು ನೀ ಹೀರಿ ಹೀರಿ ನೀನು ಇಷ್ಟೊಂದು ಮನಮೋಹಕ ಬಣ್ಣದ ರೆಕ್ಕೆಗಳನು ಹೊಂದಿದೆಯೇನು !? ಎಂದು ಕೇಳಲು ತವಕಿಸುತ್ತಿದ್ದೆ .

ಯಾವ ತಮಾಷೆ ಯ ನುಡಿಗಳನ್ನು ಕೇಳದೆಯೇ ನನ್ನ ಮುಖದಲ್ಲಿ ಮೂಡುತಿರುವ ನಗುವಿನ ಬುಗ್ಗೆಗೇನು ಕೊರತೆಯಿರಲಿಲ್ಲ. 

ಹಸಿರು ಹುಲ್ಲಿನ ಮೇಲೆ ಉರುಳುವಾಗ ಅಮ್ಮನ ಮಡಿಲಿನಲಿ ನಲಿಯುವಂತ ಅನುಭವ!  

ಆಕಾಶದೆತ್ತರಕ್ಕೆ ಬೆಳೆದುನಿಂತ ಘಟೋದ್ಗಜ ದಂತಹ ಮರಗಳನ್ನು ಕಾಣಲು ದೃಷ್ಟಿ ಎತ್ತಿದಷ್ಟು ಸಾಕಾಗಿರಲಿಲ್ಲ..!!

ಸಮಯ ಕಳೆಯಿತು ಅಂತ ಹಗಲು ಜಾರುತ್ತಾ, ನಿಶೆಯ ಏರುತ್ತಾ ಅಲ್ಲಲ್ಲಿ ಕೃತಕ ದೀಪದ ಬೆಳಕು ಆವರಿಸಿದಾಗ ತಿಳಿದಿತ್ತು .

ಮತ್ತೆ ತಿರುಗಿ ಹೋಗುವ ಸಮಯ. ಹೋಗಲು ಮನಸಿಲ್ಲ ,

"ಅಪ್ಪ ನಾವಿಲ್ಲೇ ಯಾಕೆ ಇರಲಬಾರದು ? ಇಲ್ಲೆ ಮನೆಮಾಡಿದರೆ ದಿನವು ಈ ಪ್ರಕೃತಿಯಲ್ಲಿ ನಲಿದು ನೆಮ್ಮದಿಯಲಿ ಇರಬಹುದಲ್ವಾ !? ಆಗ ನಮಗೆ ದಿನವು ರಿಲ್ಯಾಕ್ಸ್ ಆಗುತ್ತಲ್ಲ ..!!" ಎಂದು ಕೇಳಿದ ಪುಟ್ಟಿಯ ಮಾತಿಗೆ ಅಪ್ಪನದ್ದು ಮುಗಳುನಗೆ.  

"ಇಲ್ಲೆ ಇದ್ದರೆ ನಾಳೆ ನೀನು ಶಾಲೆಗೆ ,ಅಪ್ಪ ಹಾಗು ನಾನು ಕೆಲಸಕ್ಕೆ ಹೋಗುವುದು ಹೇಗೆ? "

"ಇಲ್ಲಿಂದಲೇ ಹೋಗುವ ಅಮ್ಮ " ಪುಟ್ಟಿಗೆ ಪ್ರಕೃತಿಯ ಹಚ್ಚಹಸಿರಿನಿಂದ ಹೋಗಲೇ ಮನಸಿಲ್ಲ. 

"ಇಲ್ಲಿಂದ ಸಿಟಿಗೆ ಬಹುದೂರ ಕಂದ. !" 

"ನಾವಿರುವಲ್ಲಿ ಯಾಕೆ ಈ ಕಾಡಿಲ್ಲ ? ಇಂತಹ ಹಸಿರಿಲ್ಲ..!!"

ಅಪ್ಪ ಅಮ್ಮನ ಬಳಿ ಪುಟ್ಟಿಯ ಪ್ರಶ್ನೆಗೆ ಸರಿಯಾದ ಉತ್ತರವೂ ಇದ್ದಂತಿರಲಿಲ್ಲ,  

"ಪುಟ್ಟಿ ಮತ್ತೆ ಮುಂದಿನ ವಾರ ಇಲ್ಲಿಗೆ ಬರುವ ಆಗ ಮತ್ತೆ ನೀನು ಹಾರಿ ಆಡಿ ಕುಣಿದು ಬಿಡು!"  ನಸುನಕ್ಕು ಹೇಳಿದ ಅಮ್ಮನ ಮಾತು ಅಷ್ಟೇನು ಪುಟ್ಟಿಯ ಮನ ಅರಳಿಸಲಿಲ್ಲ .

ಮಗಳ ಮನಸ್ಸು ಹಸಿರು ಬಯಸಿದ್ದು ಈಗ ಅದರಿಂದ ದೂರ ಹೋಗುತ್ತಿರುವುದು ಇಷ್ಟವಾಗದಿರುವುದು ಗಮನಿಸಿದ ಅಪ್ಪ. 

ಹಚ್ಚಹಸಿರಿನ ನೈಜ ಕಾಡಿನಿಂದ 
ಕಾಂಕ್ರೀಟ್ ಕಾಡಿಗೆ ಕಾರು ಬಂದಿತ್ತು.  

ಪುಟ್ಟಿ ಮೊದಲಬಾರಿ ಎಂಬಂತೆ ತಲೆ ಎತ್ತಿ ನೋಡಿದಳು. ಇಲ್ಲೂ ದೃಷ್ಟಿ ಹರಿಸಿದಷ್ಟೂ ಎತ್ತರೆತ್ತರಕ್ಕೆ ಗಗನಚುಂಬಿ ಕಟ್ಟಡಗಳು ಕಂಡಾಗ 'ಕಾಡಲ್ಲಿ ಎಂತಹ ಸುಂದರ ಮರಗಳಿತ್ತು!' ಮತ್ತೆ ನೆನಪಾಗಿ ಪುಟ್ಟಿ ಮುಖ ಮಂಕಾಗಿತ್ತು. 

ಮನೆಯ ಒಳಗೆ ಬಂದವಳಿಗೆ ಏನೋ ತನ್ನದು ಕಳೆದುಕೊಂಡಂತಹ ನೋವು.  ಅಪ್ಪ ಮಗಳ ತಲೆ ನೇವರಿಸಿ ,

"ಪುಟ್ಟಿ ನಿನ್ನ ಮನಸ್ಸು ಖುಷಿಯಾಗಲಿ ಅಂತ ನಿನ್ನನ್ನ ಪ್ರಕೃತಿಯ ಮಡಿಲಿಗೆ ಕರೆದುಕೊಂಡು ಹೋಗಿದ್ದು. ನೀನು ಎಷ್ಟು ಖುಷಿಯಲ್ಲಿದ್ದೆ ! ಆದರೆ ಏಕೆ ನೀನು ಮತ್ತೆ ಮಂಕಾದೆಯಲ್ಲೆ !? "

"ಅಪ್ಪ ಒಂದು ದಿನ ಪ್ರಕೃತಿ ಸುಂದರತೆಯೊಳಗೆ ಇದ್ದರೆ ಸಾಕೆ  ?ಯಾಕಪ್ಪ ನಾವು ದಿನವು ಮರ ಗಿಡ ಹೂವುಗಳ ನಡುವೆ ಇರಲಾಗುವುದಿಲ್ಲ! ನನಗೆ ದಿನವು ಆ ಚಿಟ್ಟೆಯಂತೆ ಹೂವುಗಳ ನೋಡುತ್ತಾ ಅದರ ಅಕ್ಕಪಕ್ಕ ಹಾರಾಡಬೇಕು ಅಂತ ಆಸೆಯಾಗುತ್ತಿದೆ!" ಸಪ್ಪೆಯಾಗಿ ಹೇಳಿ ತನ್ನ ಕೋಣೆ ಸೇರಿದ್ದಳು. 

ಬೆಳಗಿನ ಸೂರ್ಯ ಪುಟ್ಟಿಯ ಕಿಟಕಿಯ ಬಳಿ ಬಂದು ಅವಳ ಕಂಗಳ ಬಾಗಿಲ ತಟ್ಟಿದ್ದ .

ತನ್ನ ಬಾಲ್ಕನಿಯಲ್ಲಿ ದಿನವು ನಿಂತು ಆಕಾಶ ನೋಡುವ ಅಭ್ಯಾಸ ಪುಟ್ಟಿಗೆ. ಆ ನೀಲಿ ಬಣ್ಣದ ಮೇಲಿರುವ ಮುತ್ತಿನ ಮೋಡಗಳು ಸಾಗುವಾಗ ಸೂರ್ಯಣ ಕಿರಣಗಳು ಆಗಾಗ ಅವುಗಳ ಮುತ್ತಿಕ್ಕಿದಾಗ ಮೂಡುವ ಬಂಗಾರದ ರೇಖೆಗಳ ಸೌಂದರ್ಯ ಗಮನಿಸುವ ಪುಟ್ಟಿಗೆ ಇಂದೇಕೋ ಹೊಸ ಮಾರ್ಪಾಟು ತನ್ನ ಕಿಟಕಿಯ ಬಳಿ ಕಂಡು ಚಂಗನೆ ನೆಗೆದು ಬಂದು ಪರದೆ ಸರಿಸಿದವಳಿಗೆ ಹಲವು ಬಣ್ಣಗಳ ಪುಟ್ಟ ಪುಟ್ಟ ಹೂವಿನ ಗಿಡಗಳು ದೊಡ್ಡ ಜಾತಿಯ ಮರಗಳನ್ನು (ಬೋನ್ಸಾಯ್ )ಸಣ್ಣ ಕುಂಡದಲಿ ಬೆಳೆಸಿರುವ ಒಂದಿಷ್ಟು ಪಾಟ್ಗಳು ಕಂಡಿತ್ತು.

ಆಕಾಶದಲ್ಲಿ ಇದ್ದ ಮೋಡಗಳನಷ್ಟೆ ತಾಕುತಿದ್ದ ಸೂರ್ಯ ರಶ್ಮಿ ಇಂದು ಪುಟ್ಟಿಯ ಬಾಲ್ಕಿನಿಗೆ ಹಾಜರಿ ಹಾಕಿದಂತೆ ಕಂಡಿತ್ತು. ಆ ಕಿರಣಗಳು ತಾಕಿ ಬಣ್ಣ ಬಣ್ಣದ ಪುಟ್ಟ ಹೂವುಗಳು ನಲಿಯುತಿತ್ತು ಪುಟ್ಟ ಮರಗಳ ಎಲೆಗಳು ಹೊಳೆಯುತಿತ್ತು  ಪುಟ್ಟಿಯ ರಾತ್ರಿ ಮಂಕಾದ ಮನಸ್ಸು ಮತ್ತೆ ಹಚ್ಚಹಸಿರಾಗಿ ಸಂಭ್ರಮಿಸಿತ್ತು.  

"ಅಪ್ಪಾ .., ಅಮ್ಮ..!"  ಎಂದು ಉದ್ಗರಿಸಿದವಳ ಹಿಂದೆಯೇ ಬಂದು ನಿಂತಿದ್ದ ಅಪ್ಪ ,

"ಪುಟ್ಟಿ ಅಷ್ಟು ದೊಡ್ಡ ಕಾಡು ಮರ ಹೂವು ಗಿಡ ತಂದುಕೊಡಲಾಗದು !ಆದರೆ ದಿನವು ನಿನಗೆ ಹ್ಯಾಪಿ ಆಗಿ ಇರಲು ಈ ಪುಟ್ಟ  ಉದ್ಯಾನ ನಿನಗೆ ಸಹಾಯ ಮಾಡುತ್ತೆ ನಿನ್ನ ಬಾಲ್ಕನಿಯಲ್ಲಿ ನೀನು ಕುಳಿತು ನಿನ್ನ ಹಸಿರಿನ ಜೊತೆ ಖುಷಿಯಾಗಿರ ಬಹುದು !" ಎಂದಾಗ 

"ಹೂ ಅಪ್ಪ ಥ್ಯಾಂಕ್ಯೂ ಅಪ್ಪ... ಎಂದು ಅಪ್ಪನ ತಬ್ಬಿ ಪ್ರೀತಿಯ ಮುತ್ತಿಟ್ಟಳು. ಅಪ್ಪ ದಿನವೂ ನಾನು ಇದನ್ನು ನೋಡಿಕೊಳ್ಳುತ್ತೇನೆ.  ನನ್ನ ಈ ಪುಟ್ಟ ಹೂವುಗಳನ್ನು ನೋಡಲು ಚಿಟ್ಟೆಗಳು ಬರ್ತಾವಲ್ಲಪ್ಪ!? ಕಣ್ಣರಳಿಸಿ ಕೇಳಿದಾಗ 

ಹೌದೆಂದ ತಂದೆಗೆ ಮಗಳ ಕಂಗಳಲಿ ಮತ್ತದೇ ನವೋಲ್ಲಾಸದ ಹೊಳಪು ಕಂಡು ಹೂವು ಗಿಡಗಳನ್ನ ತಂದಿದ್ದಕ್ಕೂ ಸಾರ್ಥಕವೆನಿಸಿತ್ತು.  

"ಪುಟ್ಟಿ ಈಗ ನಿನಗೆ ಖುಷಿಯಾಯ್ತಲ್ಲ!  ಈಗ ನಡಿ ಶಾಲೆಗೆ ಹೋಗಿ ಸಂಜೆ ಬೇಗ ಬಂದು ಇಲ್ಲೆ ಕುಳಿತಿರುವಂತೆ ಬಾ!"  ಅಮ್ಮನ ಮಾತುಗಳು. 

"ಹೂ ಆದರೆ ಅಪ್ಪ ನನಗೆ ವಾರಕ್ಕೊಂದುಬಾರಿ ಆ ದೊಡ್ಡ ಕಾಡಿಗೆ ಕರೆದುಕೊಂಡು ಹೋಗುತ್ತೇನೆ ಅಂತ ನೀವು ಪ್ರಾಮಿಸ್ ಮಾಡಿದ್ದು ಮರೆಯುವಂತಿಲ್ಲ !" ಎಂದಾಗ 

ಸರಿ ಎಂಬಂತೆ ಅಪ್ಪ ಅಮ್ಮ ನಕ್ಕು ಪುಟ್ಟಿಯ ತಲೆ ನೇವರಿಸಿದ್ದರು. 

ಪುಟ್ಟಿಯ ಕಂಗಳು ಹೃದಯವು ಮತ್ತದೆ ಹಚ್ಚಹಸಿರಿನ ಹೊಚ್ಚ ಹೊಸತಾದ ಬಣ್ಣ ಬಣ್ಣದ ಕುಸುಮಗಳ ಮಿಂಚಲ್ಲಿ ಮಿಂಚುತಿತ್ತು...!!
-ಆ.ಶೆ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ