ಕವನಗಳು
ನಮ್ಮ ನಾಡು
Nov 04, 2025
**ಶೀರ್ಷಿಕೆ:ಕನ್ನಡ ನಾಡು ನುಡಿ**
೦೩.೧೧.೨೦೨೫
ವೀರ ಪುರುಷರು ಹುಟ್ಟಿ ಬೆಳೆದಿಹ
ಧೀರ ಶೂರರು ಮಿಂಚಿ ಮೆರೆದಿಹ
ಸಾರ ತುಂಬಿದ ನಾಡು ಕನ್ನಡ ಮೆರೆದು ನಿಂತಿಹುದು|
ಮೇರು ಮುಕುಟವು ಜಗದಿ ಬೆಳಗುತ
ತೇರನೆಳೆಯುತ ಹಾಡಿ ಕುಣಿಯುತ
ಬೇರು ಬಿಟ್ಟಿಹ ನೂರು ಧರ್ಮವು ಸೊಬಗು ಚೆಲ್ಲಿಹುದು||
ಅಂದ ನುಡಿಯದು ಕನ್ನಡನುಡಿಯು
ಚೆಂದ ಕೇಳಲು ಸೊಗಸಿನ ಸೆಲೆಯು
ಬಂಧು ಬಳಗದಿ ಭಾವ ಬಂಧವ ಬೆಸೆದು ನಿಂತಿಹುದು|
ಕಂದನಾಡುವ ತೊದಲು ಮಾತದು
ನೊಂದ ಮನಸಿಗೆ ಸವಿಯನುಣಿಸುತ
ಗಂಧ ಸುಗಂಧ, ಬೀರಿ ಪರಿಮಳ ಹಿತವ ನೀಡಿಹುದು||
ಬನ್ನಿ ಕನ್ನಡ ಕುವರ ಮಣಿಗಳೆ
ತನ್ನಿ ದೀಪವ, ಬೆಳಕು ಬೆಳಗುವ
ಚೆನ್ನ ಕನ್ನಡ ಮಾತೆ ಮಹಿಮೆಯ ಸುತ್ತ ಪಸರಿಸಲು|
ಹೊನ್ನ ಬಣ್ಣದ ಹೊಂಗಿರಣದಲಿ
ಚಿನ್ನ ಚೆಲ್ಲಿದೆ ಬಣ್ಣ ಚಿತ್ತಾರ
ಮನ್ನ ಮಾಡಿದೆ ರೋಷ ದ್ವೇಷವ ತಾಯಿಯೊಲವಿನೊಲು||
ಅಂದ ಅಡಗಿಹ ನಾಡು ನೋಡಿದು
ಬಂಧ ಬೆಳೆಸುವ ಬೀಡು ನಮ್ಮದು
ಕಂದ ಕುಣಿಯಲು ಮಾತೆ ಮಡಿಲಲಿ ಸೊಗವುತುಂಬಿಹುದು|
ಚೆಂದ ನೋಡಲು ಕೃಷಿಯ ಬೀಡಿದು
ನೊಂದ ಮನಸಿನ ನೋವು ತೊರೆವುದು
ಬಂಧು ಬಳಗದಿ ಭಾವ ಬಂಧವ ಬೆಸೆದು ನಿಂತಿಹುದು||
ಅಚ್ಚ ಕನ್ನಡ ಬಳಸಿ ಉಳಿಸುವ
ಹಚ್ಚ ಹಸಿರಿನ ನಾಡ ಬೆಳೆಸುವ
ಮೆಚ್ಚಿ ಪೊಗಳುವ ಕಲೆಯ ಕಾಣುವ ಕನ್ನಡ ನಾಡಲಿ |
ಇಚ್ಛೆಯಿಂದಲಿ ನುಡಿಯ ಕಲಿಯುತ
ಕಿಚ್ಚು ಕೀಳರಿಮೆಯನು ಸರಿಸುತ
ನೆಚ್ಚಿ ಮನಸಲಿ ಪ್ರೀತಿ ತೋರುವ ಭವ್ಯ ಬೀಡಿನಲಿ||
ಡಾ.ಸುಮತಿ ಪಿ
ಇತ್ತೀಚಿನ ಕಾಮೆಂಟ್‌ಗಳು