ನಿರೂಪಣಾ ಕವನ
ಏಕಾಂತದ ಹೆಜ್ಜೆಗಳು
Feb 05, 2026
ಏಕಾಂತದ ಹೆಜ್ಜೆಗಳು
ಎದೆಯ ಭಾರವ ಇಳಿಸಿ
ಅಂತರಂಗದ ಮಾತು ಬಿಚ್ಚಿ
ಇರುಳು ಕಿತ್ತು ಹಗಲಿಗೆ ಒಪ್ಪಿಸುತ್ತವೆ
ಏಕಾಂತದ ಹೆಜ್ಜೆಗಳು
ಎದೆಯಾಳದ ಕೋರ್ಟನಲ್ಲಿ
ವಾದಿ ಪ್ರತಿವಾದಿಯಾಗಿ ವಾದಿಸಿ
ನೈತಿಕತೆಯ ನ್ಯಾಯ ಜಿನುಗಿಸಿ
ಮಾನವೀಯತೆಯ ಮಡಿಲು ಸೇರುತ್ತವೆ
ಏಕಾಂತದ ಹೆಜ್ಜೆಗಳು
ತನ್ನೊಂದಿಗೆ ತನ್ನ ಮಾತನಾಡಿಸಿ
ಕಾರುಣ್ಯದ ನಗೆಯ ಚೆಲ್ಲಿ
ಪ್ರೀತಿ ಹೂವು ಅರಳಿಸುತ್ತವೆ
ಏಕಾಂತದ ಹೆಜ್ಜೆಗಳು
ಕಲ್ಲು ಮುಳ್ಳುಗಳ ಹಾದಿಯಲ್ಲಿ
ಕನಸುಗಳ ಬಿತ್ತುತ್ತವೆ
ಹಸಿಮಳೆ ಉಯ್ಯುತ್ತವೆ
ಏಕಾಂತದ ಹೆಜ್ಜೆಗಳು
ಪರನಿಂದೆಯ ಅಳಿದು
ಪರೋಪಕಾರವ ತಳಿದು
ಎಲ್ಲ ಕಾಲಕೂ ಉಳಿದು
ಮನಸ್ಸಿನಾಳದಲ್ಲಿ
ಸೋನೆಯಾಗಿ ಸುರಿದು
ಕನ್ನೆಸವರಿ ಕಿರುನಗೆ ಚೆಲ್ಲುತ್ತವೆ.
~ ಅಯ್ಯನಗೌಡ ಸಂಗನಾಳ
ಇತ್ತೀಚಿನ ಕಾಮೆಂಟ್‌ಗಳು