ಕವನಗಳು
ಬಾಲ ಭಕುತಿ
Feb 03, 2026
ಈಶ ದೇವನ ಪಾದಪೂಜೆಯ
ತೋಷದಿಂದಲಿ ಮಾಡುತಿರುವನು
ಲೇಶವೂ ತಡ ಮಾಡದೇ ಭಕುತಿಯಲಿ ಬಾಲಕನು
ಆಶೆಯಿಂದಲಿ ಚರಣ ಪರುಶಿಸಿ
ಪೋಷಿಸಲು ತಾ ಬೇಡುತಿರುವನು
ಮೋಸ ವಂಚನೆಯನ್ನು ತಿಳಿಯದ ಪುಟ್ಟ ಕಂದಮ್ಮ
ಅಗಜೆಯೂ ಶಿವನೊಂದಿಗಿರುವಳು
ಮಗುವಿನಾಟವ ನೋಡುತಿರುವಳು
ಜಗದಲೀತೆರ ಬಾಲ ಭಕ್ತಿಯ ಕಂಡು ಹರ್ಷಿಸುತ
ಮೃಗಧರನ ಕಾಲುಗಳಿಗೆರಗುವ
ಮುಗುದ ಹುಡುಗನ ನಿಷ್ಠೆ ಕಾಣಲು
ಸಿಗುವುದಿದರಲಿ ಮನಕೆ ತೃಪ್ತಿಯು ಸೊಗಸು ದೃಶ್ಯವಿದು
ತಂಡಿಯೆನ್ನದೆ ಮಿಂದು ಶುಚಿಯಲಿ
ಮಂಡಿಯೂರುತ ಪೂಜ್ಯಭಾವದಿ
ಖಂಡಪರಶುವಿನೆರಕ ಕುಳಿತಿಹ ಭಕ್ತ ಚಿಕ್ಕವನು
ಮೊಂಡು ಮಾಡದೆಯಿರುವ ಹಸುಳೆಯ
ಕಂಡು ಮನದಲಿ ಖುಷಿಯಗೊಂಡೆನು
ಡಂಡಮರು ನಾದವನು ಕೇಳಲು ಕಾತರವೊ ಕಾಣೆ
✍️ಲತಾ ಧನು ಸೀತಾಂಗೋಳಿ
ಇತ್ತೀಚಿನ ಕಾಮೆಂಟ್‌ಗಳು