ಕವನ
ಚಿಂತಿಸಿ-ಮಂಥಿಸಿ ಸೃಜಿಸುವ
ಮನವ ಬರಿದಾಗಿಸುವ
ಹೃದಯ ಹಗುರಾಗಿಸುವ
ಕಲ್ಪನಾ ವಿಲಾಸವೇ.... ಕವನ!
ಒಲ್ಮೆಯ -ಬಲ್ಮೆಯ
ಶೌರ್ಯ- ಕ್ರೌರ್ಯಗಳ
ಅರ್ಥ -ಅನರ್ಥಗಳ
ನಿರೂಪಿಸುವುದೇ....ಕವನ!
ಒಡಪು ವರ್ತುಲಗಳಡಿ
ಸಿಲುಕಿಹ ಮನಗಳ
ಹುರುಪು-ಉಲ್ಲಾಸಗಳ
ಭವ-ಬವಣೆಗಳರಿಪುದೀ....ಕವನ!
ಇಲ್ಲದ್ದು ಇರಿಸಿ
ಇರುವನ್ನು ಮರೆಸಿ
ಕನಸಲಿ ಮೀಯಿಸಿ
ಭಾವಗಳಲಿ ತೇಲಿಪುದೇ....ಕವನ!
ಅನುಭವ-ಅನುಭಾವಗಳ
ಬದುಕಿನ ಚಿತ್ತಾರಗಳ
ಇಹದ ರಾಗ-ತಾಳಗಳ
ಮೇಳೈಸುವಿಕೆಯೇ....ಕವನ!
✍️ ಎಸ್.ಶ್ರೀಧರಮೂರ್ತಿ ಶಿವಜಯಸುತ