ಮಕ್ಕಳಲ್ಲಿ ಓದಿನ ಸದಭಿರುಚಿ ಬೆಳೆಸೋಣ
ಭಾಷಾಲೋಕ
ಪ್ರತಿ ವಿದ್ಯಾರ್ಥಿಯು ಸ್ಪಷ್ಟವಾಗಿ ಓದಬೇಕು,ಬರೆಯಬೇಕು,ಮಾತನಾಡಬೇಕು ಎಂಬುದು ಎಲ್ಲಾ ಶಿಕ್ಷಕರ ಆಶಯವಾಗಿರುತ್ತದೆ.ಪ್ರಾಥಮಿಕ ಹಂತದಲ್ಲಿ ಅಕ್ಷರಗಳನ್ನು ಕಲಿತು,ಹಂತಹಂತವಾಗಿ ಕಾಗುಣಿತ,ಸರಳ ಪದಗಳು,ಒತ್ತಕ್ಷರಗಳಿಂದ ಕೂಡಿದ ಪದಗಳನ್ನು ಮಗು ಪರಿಚಯಿಸಿಕೊಳ್ಳುತ್ತಾ ಸಾಗುತ್ತದೆ.ಈ ಮೂಲಹಂತಗಳನ್ನು ಸರಿಯಾದ ರೀತಿಯಲ್ಲಿ ಸಾಧಿಸಿದ ಮಗು ಓದು ಬರಹದ ಯಾವುದೇ ಸಮಸ್ಯೆಯನ್ನು ಎದುರಿಸದೆ ಪುಸ್ತಕಗಳು, ದಿನಪತ್ರಿಕೆಗಳನ್ನು ಓದಲು ಪ್ರಾರಂಭಿಸುತ್ತದೆ.ಹೊಸ ಹೊಸ ಪದಗಳ ಅರ್ಥವನ್ನು ಕುತೂಹಲದಿಂದ ಗ್ರಹಿಸುತ್ತಾ ತನ್ನ ಭಾಷಾ ಸಾಮರ್ಥ್ಯವನ್ನು ಬಲಗೊಳಿಸಿಕೊಳ್ಳುತ್ತದೆ.ಆದರೆ ಮಗು ತಾನಾಗಿಯೇ ಈ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ.ಇದಕ್ಕೆ ಶಿಕ್ಷಕರ ಮತ್ತು ಪೋಷಕರ ಪ್ರೇರಣೆ ಅತ್ಯಗತ್ಯ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಮಗುವಿಗೆ ಇಷ್ಟವಾಗುವಂತಹ ಪುಸ್ತಕ ಮತ್ತು ಪತ್ರಿಕೆಗಳನ್ನು ಮಗುವಿಗೆ ಲಭ್ಯವಾಗುವಂತೆ ಇಡಬೇಕು.ಪ್ರತಿದಿನ ಒಂದು ಹೊಸ ವಿಷಯವನ್ನು ಶಿಕ್ಷಕರು ಅಥವಾ ಪೋಷಕರು ಮಕ್ಕಳ ಮುಂದೆ ಓದಿ ಹೇಳಬೇಕು.ಆಗ ಮಗುವಿಗೆ ಈ ಪುಸ್ತಕವನ್ನು ನಾನು ಓದಬೇಕು ಎಂಬ ಕೌತುಕ ಮೂಡುತ್ತದೆ.ನಿಧಾನವಾಗಿ ಪುಟಗಳನ್ನು ತಿರುವಿ ಹಾಕತೊಡಗುತ್ತದೆ.ಇಲ್ಲಿಂದಲೇ ಓದಿನ ರುಚಿ ಮಗುವಿನ ಮನಕ್ಕೆ ಹತ್ತಲು ಪ್ರಾರಂಭಿಸುತ್ತದೆ.
ಪ್ರತಿ ಶಾಲೆಯಲ್ಲಿ ಗ್ರಂಥಾಲಯವಿರುತ್ತದೆ.ಆದರೆ ಅಲ್ಲಿನ ಕಪಾಟುಗಳಿಗೆ ಬೀಗ ಹಾಕಿ ಭದ್ರವಾಗಿಡುವುದು ತಪ್ಪು. ಮಗುವಿನ ಕೈಗೆ ಪುಸ್ತಕ ಎಟುಕದ ಹೊರತು ಮಗುವಿನಲ್ಲಿ
ಓದಿನ ಅಭಿರುಚಿ ಬೆಳೆಸಲು ಸಾಧ್ಯವೇ ಇಲ್ಲ. ಮಗುವಿನ ವಯಸ್ಸಿಗೆ ತಕ್ಕಂತೆ ಆಯಾ ಶಾಲೆಗಳಲ್ಲಿ ಪುಸ್ತಕಗಳನ್ನು ಆಯ್ಕೆ ಮಾಡಿ ತರಿಸಬೇಕು.ಆಕರ್ಷಕ ಮುಖಪುಟ, ಚಿತ್ರಸಹಿತ ವಿವರಣೆ,ಬಣ್ಣಬಣ್ಣದ ಅಕ್ಷರಗಳಿದ್ದರೆ ಪ್ರಾಥಮಿಕ ಹಂತದ ಮಕ್ಕಳು ಇಷ್ಟಪಡುತ್ತಾರೆ.ಮೊದಲ ಹಂತದಲ್ಲಿ ಪುಟ್ಟ ಪುಟ್ಟ ಕತೆಗಳಿರುವ ಪುಸ್ತಕಗಳಿದ್ದರೆ ನಿರೀಕ್ಷಿತ ಫಲ ಸಾಧಿಸಬಹುದು.ಇನ್ನೂ ಪ್ರೌಢಶಾಲೆಗಳಲ್ಲಿ ಸಾಧಕರ ಜೀವನ ಚರಿತ್ರೆ, ನಾಡುನುಡಿಗೆ ಸಂಬಂಧಿಸಿದ
ಮಾಹಿತಿ,ವ್ಯಕ್ತಿತ್ವ ವಿಕಸನ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳನ್ನು ಕುರಿತ ಪುಸ್ತಕಗಳಿದ್ದರೆ ಮಕ್ಕಳಿಗೆ ಆಸಕ್ತಿದಾಯಕವೆನಿಸುತ್ತದೆ.
ಪ್ರಾರ್ಥನಾ ಸಮಯದಲ್ಲಿ ದಿನಪತ್ರಿಕೆಗಳ ಪ್ರಮುಖಾಂಶಗಳನ್ನು ಓದಿಸುವುದರಿಂದ ರಾಜ್ಯ, ದೇಶ,ವಿದೇಶಗಳ ಸುದ್ದಿ ಸಮಾಚಾರಗಳನ್ನು ಮಕ್ಕಳು ತಿಳಿದುಕೊಳ್ಳಲು ಸಹಾಯಕವಾಗುತ್ತದೆ.ಜೊತೆಯಲ್ಲಿ ಓದುವ ಮತ್ತು ಗಮನವಿಟ್ಟು ಆಲಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ.ಮಕ್ಕಳಿಗೆ ಗ್ರಂಥಾಲಯದ ಪುಸ್ತಕಗಳನ್ನು ಕೊಟ್ಟ ನಂತರ ಅದನ್ನು ಓದಿ ಅರ್ಥೈಸಿಕೊಂಡು ಟಿಪ್ಪಣಿ ಮಾಡಿಕೊಳ್ಳಲು ತಿಳಿಸಬೇಕು.ಪ್ರತಿ ಮಗುವು ತಾನು ಓದಿದ ಪುಸ್ತಕದ ಬಗ್ಗೆ ಮಾತನಾಡುವ ಚಟುವಟಿಕೆಯನ್ನು ಮಾಡಿಸಬೇಕು.ಇದರಿಂದ ಮಗುವಿನ ಗ್ರಹಿಕೆಯ ಶಕ್ತಿ ಹೆಚ್ಚುತ್ತದೆ.ಉತ್ತಮ ಮಾತುಗಾರಿಕೆಯೂ ಕರಗತವಾಗುತ್ತದೆ.
ಪ್ರೌಢಶಾಲಾ ಹಂತದಲ್ಲಿ ಮಗು ಶಬ್ದಕೋಶವನ್ನು ಬಳಸಲು ಪ್ರೋತ್ಸಾಹಿಸಬೇಕು.ಪಾಠ ಮತ್ತು ಇತರೆ ಪುಸ್ತಕಗಳಲ್ಲಿ ಬರುವ ಹೊಸಪದಗಳಿಗೆ ತಾವೇ ಅರ್ಥ ಹುಡುಕುವುದು ಒಂದು ಆಟದಂತೆ ಮನರಂಜನೆ ನೀಡುವುದರ ಜೊತೆಗೆ ಮಗುವಿಗೆ ಯಥೇಚ್ಛ ಪದಗಳ ಪರಿಚಯವಾಗುತ್ತದೆ.ಪತ್ರಿಕೆಗಳಲ್ಲಿ ಬರುವ ಪದಬಂಧಗಳನ್ನು ರಚಿಸಲು ಪ್ರೋತ್ಸಾಹಿಸಬೇಕು.ಹೀಗೆ ಸಾಗುವ ಪುಟ್ಟ ಪುಟ್ಟ ಹೆಜ್ಜೆಗಳೇ ಮುಂದೆ ಮಗುವಿನ ಭಾಷಾಲೋಕ ಸುಂದರವಾಗಿ ರೂಪುಗೊಳ್ಳಲು, ಜೀವನದಲ್ಲಿ ಯಶಸ್ವಿಯಾಗಲು ಮೆಟ್ಟಿಲುಗಳಾಗುತ್ತವೆ.ಪೋಷಕರು ಹಾಗೂ ಶಿಕ್ಷಕರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗೋಣ.
ಭವ್ಯ ಟಿ.ಎಸ್.