ಸಣ್ಣ ಕಥೆಗಳು
ಕ್ಷಮೆ
Sep 03, 2025
ಜೈಲಿನಿಂದ ಆಗತಾನೆ ಆತ ಬಿಡುಗಡೆಯಾಗಿದ್ದ . ಚಿಕ್ಕಂದಿನಿಂದ ಅನುಭವಿಸಿದ ಬಡತನ ಹಸಿವು ನೋವು ಹತಾಶೆ ಹೊಟ್ಟೆಪಾಡಿಗೆ ಪಟ್ಟ ಯಾತನೆ ಆತನನ್ನು ಕಳ್ಳತನದ ದಾರಿಗೆ ತಳ್ಳಿತ್ತು . ಚಿಕ್ಕ ಪುಟ್ಟ ಕಳ್ಳತನ ಮಾಡಿ ಹೊಟ್ಟೆಹೊರೆಯುತ್ತಾ ಬರಬರುತ್ತಾ ಕಳ್ಳತನ ಅಭ್ಯಾಸವಾಗಿಬಿಟ್ಟಿತ್ತು . ಆದರೆ ಅವನಿದ್ದ ಊರು ಸಣ್ಣದು ಹಾಗೂ ಜನಸಂಖ್ಯೆಯೂ ಹೆಚ್ಚಿರಲಿಲ್ಲ , ಹಾಗಾಗಿ ಊರ ಜನರು ಜಾಗೃತರಾಗಿ ಒಮ್ಮೆ ಈತ ಕಳ್ಳತನ ಮಾಡುತ್ತಾ ಸಿಕ್ಕಿಬಿದ್ದ . ಶಿಕ್ಷೆಯಾಗಿ ಹೊರಬಂದು ಹೊಟ್ಟೆ ಹೊರೆಯುವ ಸಲುವಾಗಿ ಕಂಡ ಕಂಡ ಕಡೆ ಕೆಲಸ ಯಾಚಿಸಿದ , ಈತನ ಹಿನ್ನೆಲೆಯ ಅರಿವಿದ್ದವರು ಬೆದರಿಸಿ ಕಳಿಸಿದರು. ಉಳಿದವರು ಈತನ ಕೆದರಿದ ಕೂದಲು ಹರಿದ ಮಾಸಲು ಬಟ್ಟೆಯನ್ನು ನೋಡಿಯೇ ದೂರ ಹೋದರು . ಒಟ್ಟಿನಲ್ಲಿ ಕೆಲಸವೂ ಸಿಗದೇ ಅನ್ನ ನೀರು ಇಲ್ಲದೆ ಹಸಿವು ಬಾಯಾರಿಕೆಗಳಿಂದ ಬಳಲಿ ಆತ ಹಳ್ಳಿಯ ಅಂಚಿನಲ್ಲಿದ್ದ ಇಗರ್ಜಿಗೆ ಬಂದ . ಈತನನ್ನು ನೋಡಿದ ಪಾದ್ರಿಯು ಆತನಿಗೆ ಊಟ ಉಪಚಾರ ಒದಗಿಸಿ ಪ್ರೀತಿಯಿಂದ ಮಾತನಾಡಿಸಿ ರಾತ್ರಿ ಮಲಗಲು ವ್ಯವಸ್ಥೆ ಮಾಡಿದ. ಆತ ಜೀವಮಾನದಲ್ಲಿ ಈ ರೀತಿಯ ಪ್ರೀತಿಯ ಉಪಚಾರವನ್ನು ಕಂಡಿರಲಿಲ್ಲ. ಮಧ್ಯರಾತ್ರಿಯಲ್ಲಿ ಆತನಿಗೆ ಎಚ್ಚರವಾಯಿತು ಸುತ್ತ ಮುತ್ತ ನೋಡಿದ ಆತನಿಗೆ ಮಂದವಾಗಿ ಉರಿಯುತ್ತಿದ್ದ ಬೆಳ್ಳಿಯ ದೀಪ ಕಣ್ಣಿಗೆ ಬಿತ್ತು . ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅರಿವಿದ್ದೂ ಅಭ್ಯಾಸ ಬಿಡದೆ ಬೆಳ್ಳಿಯ ದೀಪವನ್ನು ತನ್ನ ಜೋಳಿಗೆಗೆ ಹಾಕಿಕೊಂಡ .
ಮರುದಿನ ಬೆಳಗ್ಗೆ ಬೇಗನೆ ಎದ್ದು ಪಕ್ಕದ ಹಳ್ಳಿಗೆ ಹೋದ . ಅಲ್ಲಿ ಅಕ್ಕಸಾಲಿಗನೊಬ್ಬನಿಗೆ ಬೆಳ್ಳಿಯ ದೀಪವನ್ನು ಮಾರಲು ಪ್ರಯತ್ನಿಸಿದಾಗ ಆತನಿಗೆ ಅನುಮಾನ ಬಂದು ಊರಿನ ಆರಕ್ಷಕರಿಗೆ ಸುದ್ದಿ ಮುಟ್ಟಿಸಿದ . ವಿಷಯ ತಿಳಿದ ಆರಕ್ಷಕರು ಈತನನ್ನು ಬೆಳ್ಳಿಯ ದೀಪದೊಡನೆ ಇಗರ್ಜಿಗೆ ಬಂದು ಪಾದ್ರಿಯನ್ನು ವಿಚಾರಿಸಿ ಇವು ತಮ್ಮದಲ್ಲವೇ ಈತ ಕದ್ದಿದ್ದಾನಲ್ಲವೇ ಎಂದರು . ಆತನಿಗೆ ಈಗ ಸರಿಯಾಗಿ ಸಿಕ್ಕಿಬಿದ್ದೆ ಅಷ್ಟೆಲ್ಲಾ ಪ್ರೀತಿ ತೋರಿ ಉಪಚರಿಸಿದ ಪಾದ್ರಿಗೆ ನಾನು ಮೋಸಮಾಡಿ ಕದ್ದಿದ್ದಕ್ಕೆ ದೇವರು ಇನ್ನೂ ಕಠಿಣ ಶಿಕ್ಷೆ ಕೊಡಲಿದ್ದಾನೆ ಎಂದು ಅನಿಸಿತು . ಆದರೆ ಪಾದ್ರಿಯು ಆರಕ್ಷಕರಿಗೆ ಇದು ಈತ ಕದ್ದಿದ್ದಲ್ಲ ನಾನೇ ಕೊಟ್ಟಿದ್ದು, ಅಲ್ಲಯ್ಯಾ ಯುವಕ ಇದರ ಜೊತೆ ಒಂದು ಬೆಳ್ಳಿಯ ಬಟ್ಟಲು ಕೊಟ್ಟಿದ್ದೆ ಅದು ಏಕೆ ಅಲ್ಲಿಯೇ ಬಿಟ್ಟು ಹೋದೆ ಇದೋ ತೆಗೆದು ಕೋ ಎಂದು ನೀಡಿದ . ಆರಕ್ಷಕರು ಪಾದ್ರಿಗೆ ನಮಿಸಿ ತಮ್ಮ ತಪ್ಪು ಕಲ್ಪನೆಗೆ ಕ್ಷಮೆ ಕೋರುತ್ತಾ ನಿರ್ಗಮಿಸಿದರು . ಕಳ್ಳತನ ಮಾಡಿದ್ದ ಆತನ ಕಣ್ಣಲ್ಲಿ ನೀರು ಹರಿಯುತ್ತಿತ್ತು . ಇಗರ್ಜಿಗೆ ಹೋಗಿ ಪಾದ್ರಿಯ ಕಾಲಿಗೆ ಬಿದ್ದು ತನಗೆ ಈಕೆ ಪೊಲೀಸರಿಗೆ ಒಪ್ಪಿಸಲಿಲ್ಲ , ನಾನು ಕ್ಷಮೆ ಇಲ್ಲದ ತಪ್ಪನ್ನು ಎಸಗಿದ್ದೇನೆ . ದೇವಾಲಯದಲ್ಲಿ ಕಳ್ಳತನ ಮಾಡಿದ್ದೇನೆ ನಿನ್ನ ಪ್ರೀತಿ ವಿಶ್ವಾಸಕ್ಕೆ ದ್ರೋಹ ಮಾಡಿದ್ದೇನೆ ಎಂದ . ನನಗೆ ಕ್ಷಮೆ ಇಲ್ಲ ಎಂದ
ಆಗ ಪಾದ್ರಿಯು ದೇವರ ಸೃಷ್ಟಿಯಲ್ಲಿ ಎಲ್ಲರೂ ಮಕ್ಕಳೇ , ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸುವಂತೆ ದೇವರು ಕರುಣಾಮಯನಾಗಿ ಎಲ್ಲರನ್ನೂ ಸಲಹುತ್ತಾನೆ , ದಯಾವಂತನಾದ ಆತನಿಗೆ ಸಹಾನುಭೂತಿಯಲ್ಲಿ ಆಯ್ಕೆ ಇಲ್ಲ. ಅದು ಎಲ್ಲರ ಮೇಲೂ ಒಂದೇ . ಆತ ಶ್ರೀಮಂತನಿರಲಿ ದರಿದ್ರನಿರಲಿ , ಕಳ್ಳನಿರಲಿ ಅಥವಾ ಸುಳ್ಳನಿರಲಿ . ಆತನ ಕೃಪೆ ಎಲ್ಲರ ಮೇಲೆ ಇದೆ ಎಂದು ನುಡಿದ .
ಪಾದ್ರಿಯ ಕ್ಷಮಾ ಗುಣ ಈತನನ್ನು ಕರಗಿಸಿತ್ತು . ಆತ ಕಳ್ಳತನವನ್ನು ಬಿಟ್ಟು ಇಗರ್ಜಿಯಲ್ಲಿ ಸೇವಕನಾಗಿ ಸತ್ಯವಂತನಾಗಿ ತನ್ನ ಉಳಿದ ಜೀವನ ದೇವರ ಸೇವೆಯಲ್ಲಿ ಕಳೆದು ಧನ್ಯನಾದ . ಕ್ಷಮೆಯ ಹಿರಿತನ ಆಕಾಶಕ್ಕಿಂತಲೂ ದೊಡ್ಡದು
~ಚೇತನ ಭಾರ್ಗವ
ಇತ್ತೀಚಿನ ಕಾಮೆಂಟ್‌ಗಳು