ಜೀವನ ಪಾಠಗಳು

ಕಾಲ

Jul 05, 2025

ಕಾಲವೇ ಬಾಳಿನ ನಿರ್ಣಾಯಕ

ಜಗದ ಆದಿಯಿಂದಲೂ ಇಂದಿಗೂ ಹಿಂದೆ ನೋಡದೆ  ಮುನ್ನಡೆಯುತ್ತಿರುವ 
ಏಕೈಕ ಮಾತ್ರವೆಂದರೆ ಕಾಲ .ಯಾರಿಗೂ ಬೇಧ ಭಾವ ಮಾಡದೆ ತನ್ನದೆಯಾದ ಒಂದೇ ಮಿತಿಯಲ್ಲಿ ಸಾಗುತ್ತಲೇ ಇರುತ್ತದೆ.ಎಷ್ಟೇ ಕೋಟಿ ಕೊಟ್ಟರೂ ಮುಗಿದು ಹೋದ ಕಾಲ ಮರಳಿ ಪಡೆಯಲಾಗದು.ಕೊಂಡುಕೊಳ್ಳುವುದು ಅಸಾಧ್ಯ ಮಾರಾಟವೂ ಅಸಾಧ್ಯ.ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತು ಕೂಡ ಕಾಲದ ಮಹತ್ವ ಮತ್ತು ಅಸ್ತಿತ್ವವನ್ನು ಅರ್ಥವತ್ತಾಗಿ ತಿಳಿಸಿಕೊಡುತ್ತದೆ.ಈಗಾಗಲೇ ಮುಗಿದಿಹ ಕಾಲದ ಬಗ್ಗೆ ಎಷ್ಟೇ ಚಿಂತಿಸಿದರೂ ಇಡೀ ಜಗವೇ ಬುಡಮೇಲಾದರೂ ಮರಳಿ ಪಡೆಯಲು ಸಾಧ್ಯವಿಲ್ಲ.ಕಾಲವನ್ನು ಅರಿತು ನೋಡು ಸುಂದರ ಬದುಕು ನಿನ್ನ ಜೋಡು ಎಂಬ ಮಾತು ಕೂಡ ಕಾಲದ ಬಗೆಗಿನ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಅರಹುತ್ತದೆ.

ಕಾಲಾಯ ತಸ್ಮೈ ನಮ:  ಎನ್ನುವುದು ಕನ್ನಡದ ನುಡಿಗಟ್ಟು ಕಾಲಕ್ಕೆ ಶರಣಾಗುತ್ತೇನೆ ಎಂಬರ್ಥ ನೀಡುವುದು.ಕಾಲವೇ ಸಕಲ ಕಾರ್ಯದ ಅಧಿಪತಿ ಕಾಲವಿಲ್ಲದಿದ್ದರೆ ಜೀವನವೇ ಅಧೋಗತಿಯಾಗುತ್ತಿತ್ತು.
ಕಾಲವನ್ನು ಎಂದಿಗೂ ತಡೆಯಲು ಆಗದು ಸೃಷ್ಟಿಸಲೂ ಆಗದು ಚಲನಾಶೀಲವಾಗಿ ಸತತ ತನ್ನದೆಯಾದ ನಿರ್ದಿಷ್ಟ ಮಿತಿಯಲ್ಲಿ ಸಾಗುತ್ತಲೇ ಇರುತ್ತದೆ.ಎಲ್ಲದಕ್ಕೂ ಕಾಲವನ್ನು ಜರಿಯುವುದು ಸರಿಯಲ್ಲ.ಕಾಲವೇ ಎಲ್ಲವನ್ನು ನಿರ್ಧರಿಸುವುದಾದರೆ ನಾವು ನಮ್ಮ ಪ್ರಯತ್ನವನ್ನು ಪಡುವ ಅವಶ್ಯಕತ್ವಯಿರಲಿಲ್ಲ.ಕಾಲವು ಮಾರ್ಗಸೂಚಿಯಾಗಿ ನಮ್ಮಯ ಸಾಧನೆಗೆ ಆಧಾರಸ್ತಂಭವಾಗಿ ಸದಾ ಜೊತೆಗಾರನಾಗಿರುತ್ತದೆ ಹೊರತು ಕಾಲವೇ ನಮ್ಮ ಸಾಧನೆ ನಿರ್ಧರಿಸದು.

ಕಾಲವನ್ನು ನೀರು ಬಳಸಿದಂತೆ ಉಪಯೋಗಿಸುತ್ತ ಹೋದರೆ ನಷ್ಟವು ಕಟ್ಟಿಟ್ಟ ಬುತ್ತಿ ಹಾಗಾಗಿ ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುತ್ತ ಸುಂದರ ಬದುಕು  ರೂಪಿಸಿಕೊಳ್ಳಬೇಕು.ಕಾಲಹರಣ ಮಾಡದೆ ಅಭ್ಯಾಸಕ್ಕೆ,ಇತರ ಹವ್ಯಾಸಗಳಿಗೆ ಸಮಯ ನಿಗದಿಪಡಿಸುತ ಮಾನಸಿಕವಾಗಿ ದೈಹಿಕವಾಗಿ ಕ್ರಿಯಾಶೀಲರಾಗಿ ಸದಾ ಲವಲವಿಕೆಯಿಂದ ಇರಲು ಕಾಲವು ಭದ್ರ ಬುನಾದಿಯಾಗಿವೆ ಕಾಲವನ್ನು ಅರಿತರೆ ಜೀವನ ಸಂತಸದ ಆಗರ ಇಲ್ಲದಿರೆ ಕಣ್ಣೀರಿನ ಸಾಗರ.ಕಾಲ ತಿಳಿದು ಬದುಕಬೇಕು ಹೊರತು ತುಳಿದು ಬದುಕಬಾರದು.

ಕಾಲವನ್ನು ಜರಿಯುವ ನಾವು ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ಅರಿಯುವ ವ್ಯವಧಾನ ಅತಿ ಅವಶ್ಯವಾಗಿದೆ ಕಾಲ ಸರಿಯುತ್ತಲೇ ಇರುವುದು ಆದರೆ ಆ ಕಾಲಘಟ್ಟದಲ್ಲಿ ನಾವು ಯಾವ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬಹುದಿತ್ತು ಎಂಬ ಅಲೋಚನೆ ಮಾಡಿದ್ದಾದರೆ ಪ್ರತಿ ವ್ಯಕ್ತಿಗೂ ತನ್ನ ಮೂಡನಂಬಿಕೆ ಎಂಬುದು ಸ್ಪಷ್ಟವಾಗುತ್ತದೆ.ಕಾಲವನ್ನು ನಾವು ವಿನಿಯೋಗಿಸುವುದು ಬಹಳ ಮುಖ್ಯವೇ ಹೊರತು ಕಾಲಕ್ಕೆ ನಾವು ಹೆಸರಿಡುವುದು ಎಷ್ಟು ಸೂಕ್ತ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುತ್ತ ಅದಕ್ಕೆ ಉತ್ತರ ಕಂಡು ಕೊಳ್ಳುವುದು ಅತಿ ಅವಶ್ಯ.ಕಾಲ ಮತ್ತು ಉಬ್ಬರವಿಳಿತವೂ ಯಾರಿಗಾಗಿ ಕಾಯುವುದಿಲ್ಲ.ಸಮಯ ಮತ್ತು ಅವಕಾಶ ಯಾರಿಗೂ ಕಾಯವು ಹಾಗಾಗಿ ಸರಿಯಾಗಿ ಕಾಲ ಸದುಪಯೋಗಪಡಿಸಿಕೊಂಡು ಅವಕಾಶ ಪಡೆದುಕೊಳ್ಳಬೇಕು.

ಎನಿಸು ಕಾಲ ಕಲ್ಲು ನೀರೋಳಗೀರ್ದರೇನು
ನೆನೆದು ಮೃದುವಾಗಬಲ್ಲುದೇ?
ಎನಿಸು ಕಾಲ ನಿಮ್ಮ  ಪೂಜಿಸಿ ಏವೇನಯ್ಯಾ
ಮನದಲ್ಲಿ ಧೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿರ್ದ ಬೆಂತರನಂತೆ?
ಅದರ ವಿಧಿಯೆನಗಾಯಿತ್ತು
ಕೂಡಲ ಸಂಗಮದೇವ

ಬಸವಣ್ಣನವರ ಮೇಲಿನ ವಚನ ಕಾಲದ ಬಗ್ಗೆ ಅರ್ಥಗರ್ಭಿತವಾದ ಸಂದೇಶ ಸಾರುತ್ತದೆ ಬಹಳಷ್ಟು ದಿನಗಳ ಕಾಲ ಕಲ್ಲನ್ನು ನೀರಿನಲ್ಲಿ ಇಟ್ಟರೆ ಮೃದುವಾಗುತ್ತದೆಯಾ ಮನಸಿನಲ್ಲಿ ಧೃಢತೆ ಇಲ್ಲದೆ ಎಷ್ಟು ಕಾಲ ಪೂಜಿಸದರೇನು ಎನ್ನುತ್ತಾ ಇಲ್ಲಿ ಕಾಲ ಮತ್ತು ವ್ಯಕ್ತಿಯ ಗುಣದ ಬಗ್ಗೆ ಬಣ್ಣಿಸಿದ್ದಾರೆ. ಒಬ್ಬ ವ್ಯಕ್ತಿ ಮನಸು ಕಲ್ಲಿನಂತಿದ್ದರೆ ಎಷ್ಟು ಕಾಲ ಸರಿದರೂ ಬದಲಾಗನು ಎಂಬುದನ್ನು ಹೇಳುತ್ತದೆ ಅಂದರೆ ಇಲ್ಲಿ ಕಾಲ ಮುಖ್ಯವಲ್ಲ ಮನುಜನ ಮನಸ್ಸು ಬಹು ಮುಖ್ಯವೆಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಕಾಲವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳು

1.ಯಾವುದೇ ಕಾರ್ಯವು ಅಂದುಕೊಂಡ ಸಮಯಕ್ಕೆ ಸಮಾಪ್ತಿಗೊಳಿಸಿ ಯಶಸ್ಸು ಸಾಧಿಸಬಹುದು
2.ಜಾಯಮಾನಕ್ಕೆ ತಕ್ಕಂತೆ ವಿನೂತನ ವಿಷಯಗಳ ಕಲಿಕೆಗೆ ಪ್ರೇರಕವಾಗುತ್ತದೆ.
3.ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಸೇವೆಯಲ್ಲಿ ನಿರತರಾಗಲು ಕಾಲವು ನೆರವಾಗುತ್ತದೆ
4.ಕಾಲಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಿಂದ ಸೂಕ್ತ ಕೆಲಸ ಗಿಟ್ಟಿಸಿಕೊಳ್ಳಲು ಸಹಾಯಕ
5.ಕಾಲಾವಕಾಶ ಉಪಯೋಗಿಸಿಕೊಂಡು ಅಪಾರ ಜ್ಞಾನವನ್ನು ಗಳಿಸಲು ಪುಷ್ಟಿ ನೀಡುತ್ತದೆ
6.ವೈಯುಕ್ತಿಕವಾಗಿ ಸಧೃಢವಾಗಿರಲು ಬಲ ತುಂಬುತ್ತದೆ
7.ಕುಟುಂಬ ಮತ್ತು ಸ್ನೇಹಿತರಿಗೆ ಸಮಯವನ್ನು ಮೀಸಲಿಡುವುದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ
8.ಕಾಲಕ್ಕೆ ತಕ್ಕಂತೆ ಕ್ರಿಯಾ ಯೋಜನೆಗಳನ್ನು ಹಾಕಿ ಕೊಳ್ಳುವ ಮೂಲಕ ಯೋಜನೆ ಕೈಗೊಂಡರೆ ನಿಗದಿತ ಕಾಲಕ್ಕೆ ಪೂರ್ಣಗೊಳ್ಳುತ್ತದೆ
9.ಕಾಲವನ್ನು ಸರಿಯಾಗಿ ವಿನಿಯೋಗಿಸಿಕೊಂಡದ್ದೆ ಆದಲ್ಲಿ ಜೀವನವು ಸಂತೋಷದಿಂದ ಕೂಡಿರುತ್ತದೆ ಜೊತೆಗೆ ಸದಾ ಚೈತ್ಯನ್ಯಶೀಲರನ್ನಾಗಿಸುತ್ತದೆ
10.ಕಾಲದ ಇತಿ ಮಿತಿಯಿಂದಲೇ ಸಮತೋಲಿತ ಬದುಕನ್ನು ಕಟ್ಟಿಕೊಳ್ಳಲು ಕೂಡ ಕಾಲದ ಪಾತ್ರವೂ ಅಗಮ್ಯ.

ಈ ಮೇಲಿನ ಅಂಶಗಳನ್ನು ಅರಿತಿದ್ದೆಯಾದರೆ ಜೀವನವು ಸಮೃದ್ಧವಾಗುತ್ತದೆ.ಕಾಲವೇ ಎಲ್ಲದಕ್ಕೂ ಮೂಲವಲ್ಲ ಸಾಧಿಸುವ ಮನಸ್ಸು ಕೂಡ ಅಷ್ಟೇ ಮುಖ್ಯ ಆಯಾ ಕಾಲಕ್ಕೆ ತಕ್ಕಂತೆ ಜೀವನದ ಪ್ರತಿ ಹಂತಗಳನ್ನು ಸಕಲ ರೀತಿಯಲ್ಲಿ ಸರಿಯಾಗಿ ನಿಭಾಯಿಸಿ ಯಶಸ್ವಿಯಾಗುತ್ತಲಿದ್ದರೆ ಸಂತೃಪ್ತ ಜೀವನ ನಮ್ಮದಾಗುತ್ತದೆ.ಕಾಲವನ್ನು ಪ್ರಾಮಾಣಿಕವಾಗಿ ವ್ಯರ್ಥಗೊಳಿಸದೆ ಅರಿತರೆ ಸಾರ್ಥಕ ಬದುಕನ್ನು ರೂಪಿಸಿಕೊಳ್ಳಬಹುದು ಇಲ್ಲದಿರೆ ಪಶ್ಚಾತ್ತಾಪ ಪಡುತ ನಿರರ್ಥಕ ಬದುಕು ಸಾಗಿಸಬೇಕಾಗುತ್ತದೆ ಹಾಗಾಗಿ ಕಾಲವನ್ನು ಅರಿತು ಸದುಪಯೋಗ ಪಡಿಸಿಕೊಳ್ಳಿ
ಬುದ್ದಿವಂತರಾಗಿ ಕಾಲಕ್ಕೆ ದಾಸರಾಗುತ ಅರ್ಥಪೂರ್ಣ ಜೀವನ ರೂಪಿಸಿಕೊಳ್ಳೋಣ ಇತರರಿಗೆ ಕಾಲದ ಅರಿವನು ತಿಳಿಸೋಣ.ಅರಿಯೋಣ ಕಾಲದ ಮಹತ್ವ ಆಗಲೇ ಬದುಕಿಗೂ ಸತ್ವ.

ಅವಿನಾಶ ಸೆರೆಮನಿ
ಬೈಲಹೊಂಗಲ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ