ಕವನಗಳು

ಸ್ವಪ್ನ ಲೋಕದಲ್ಲಿ

Jan 10, 2026

ಕಣ್ಣಮುಚ್ಚಿದೊಡನೆ ಕನಸು ಬೀಳತೊಡಗಿದೆ
ಬಣ್ಣ ಬಣ್ಣ ರೆಕ್ಕೆ ಕಟ್ಟಿ ಹಾರತೊಡಗಿದೆ
ನಾಳೆಯೆಂಬ ದಿನದ ಮೆಲುಕು
ಬಾಳದಾರಿಯಲ್ಲಿ ಬಳುಕು
ಹೇಳದಂತೆ ಬಳಿಗೆ ಅದೋ ಸಾರಿ ಬರುತಿದೆ
ಕಣ್ಣಮುಚ್ಚಿದೊಡನೆ ಕನಸು ಬೀಳತೊಡಗಿದೆ

ಇರುಳ ಪರದೆಯನ್ನು ಸರಿಸಿ ನಿತ್ಯ ಕಾಡಿದೆ
ಮರಳಿ ಮರಳಿ ಬರುತಲೆನ್ನ ನಿದಿರೆ ಕೆಡಿಸಿದೆ
ಹೊಸತು ಬದುಕ ಕಟ್ಟಿಕೊಂಡು
ಜಸದ ಪಥದಿ ನಡೆದುಕೊಂಡು
ಬೆಸೆದ ಬಂಧ ಬಿಗಿದುಕೊಂಡು ಇರಲು ಹೇಳಿದೆ
ಬೆರಗಿನಿಂದ ನೋಡಲದನು ಅಣಕವಾಡಿದೆ

ಅತ್ತಲೊಮ್ಮೆ ಇತ್ತಲೊಮ್ಮೆ ಪಯಣ ಬೆಳೆಸಿದೆ
ಗತ್ತಿನಿಂದ ಎದೆಯ ಸೆಟೆದು ನಡೆಯತೊಡಗಿದೆ
ಅವನ ನೆನಪ ಹೊತ್ತು ತಂದು
ಕವನವಾಗಲೆಂದು ಕಾದು
ಸವೆದ ಹಾದಿಯಲ್ಲಿ ಮತ್ತೆ ಹೆಜ್ಜೆಯಿರಿಸಿದೆ
ನಲ್ಲನನ್ನು ಕಂಡು ಮಾತನಾಡಬಯಸಿದೆ

ಅಲ್ಲಿ ನನ್ನ ಭಾವವನ್ನು ಅರುಹತೊಡಗಿದೆ
ಇಲ್ಲಿ ಬಂದು ಗಮನವನ್ನು ಸೆಳೆಯತೊಡಗಿದೆ
ಮೊಗದ ಸನಿಹ ಹಸ್ತ ಚಾಚಿ
ನಗುವ ತುಟಿಯ ಕಂಡು ನಾಚಿ
ಬಗಲಿನಲ್ಲಿ ಕುಳಿತುಕೊಂಡು ಅಂಟತೊಡಗಿದೆ
ಸೂರ್ಯ ಬರದೆ ಇರಲು ಧ್ಯಾನ ಮಾಡತೊಡಗಿದೆ

ಬಾನಿನಿಂದ ಬುವಿಗೆ ಶಶಿಯ ಬೆಳಕು ಹರಡಿದೆ
ಸೋನೆ ಮಳೆಯು ಹನಿದು ತಂಪ ನೀಡತೊಡಗಿದೆ
ತಂಪು ಗಾಳಿ ಬೀಸುತಿರಲು
ಜೊಂಪು ಹತ್ತಿ ಮಲಗುತಿರಲು
ರಂಪ ಮಾಡಲೆಂದು ಸ್ವಪ್ನ ಪುನಹ ಬಂದಿದೆ
ಇನಿಯ ದನಿಯ ಮಾಡಿದಂತೆ ಕರೆಯತೊಡಗಿದೆ 

ಬೆಂಗದಿರನ ಕಿರಣ ಭೂಮಿಯನ್ನು ಸೋಕಿದೆ
ಅಂಗಳದಲಿ ಮೊಗ್ಗು ಬಿರಿದು ಕಂಪು ಬೀರಿದೆ
ಮಬ್ಬು ಸೀಳಿ ಇತ್ತ ಬರುತ
ಇಬ್ಬನಿಯನು ಕರಗಿಸುತ್ತ
ತಬ್ಬಿಕೊಂಡು ಭೂಮಿಯನ್ನು ಮುತ್ತತೊಡಗಿದೆ
ಸರಸ ಕಂಡು ಕನಸು ದೂರ ಓಡತೊಡಗಿದೆ

✍️ಲತಾ ಧನು ಸೀತಾಂಗೋಳಿ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ