ನಿರೂಪಣಾ ಕವನ
ಸಂಕ್ರಾಂತಿ ಸಂಭ್ರಮ
Jan 12, 2026
ಸಂಕ್ರಮಣ
ಬಂದನಾ ದಿನಕರ.. ಶುಭ ಕರ
ಪಯಣದ ದಿಕ್ಕನು ಬದಲಿಸಿ
ಉತ್ತರಾಯಣ ಪುಣ್ಯ ಬಯಸಿ
ಪ್ರೀತಿ ವಿಶ್ವಾಸದ ಜ್ಯೋತಿ ಬೆಳಗಿಸಿ!
ಆಷಾಢದವರೆಗೆ ದೀರ್ಘ ಫಲ
ಮಂಗಳಕರವೀ ಪವಿತ್ರ ಪ್ರಕಾಶ
ಹರಿಯಿಂದ ಅಸುರರ ಮರ್ಧನ
ಮಂದಾರ ಪರ್ವತದಿ ಶಿರಧಮನ!
ಭಗೀರಥನ ಫಲಪ್ರದ ಪ್ರಯತ್ನ
ಗಂಗಾಮಾತೆಯ ಭೂಪಯಣ
ಪೂರ್ವಜರಿಗೆ ಸ್ವರ್ಗ ಗಮನ
ಭಕ್ತಿ ಸಿಂಚನ ಶ್ರಾದ್ಧ ತರ್ಪಣ!
ಎಳ್ಳು-ಬೆಲ್ಲವು ದೇಹಕೆ ಪೋಷಣ
ಶಕ್ತಿ-ಬಿಸಿ ಸಂಚಯ ಮಹಾಪೂರಣ
ಸುಗ್ಗಿಯ ಹಿಗ್ಗದು ರೈತನ ಸೊಲ್ಲು
ಗೋವಿನ ಹಾಡದು ಸತ್ಯದ ಕೊಳಲು!
ಭೀಷ್ಮರ ಶರಪಂಜರಕೆ ಸಿಕ್ಕಿತು ಮುಕ್ತಿ
ಪುನರ್ಜನ್ಮವಿಲ್ಲದ ಸಾಧನಾ ಭಕ್ತಿ
ಮಕರ ಜ್ಯೋತಿಯ ಆಧ್ಯಾತ್ಮ ದಾರಿ
ಶಕ್ತಿ ಚೈತನ್ಯವೇ ಪ್ರಜ್ಞಾ ಸಿದ್ಧಿಯ ಪರಿ!
ಮನೆಯ ಮುಂದೆ ರಂಗವಲ್ಲಿ ಚಿತ್ತಾರ
ಮನೆಮಂದಿಯ ಸಂಭ್ರಮ ಸಡಗರ
ಮನದ ಕಿಚ್ಚನು ಬಿಡದೆ ಹಾಯಿಸುವ
ಪೂರ್ಣತೆಯಲಿ ಸಂಸ್ಕೃತಿ ಉಳಿಸುವ..
ಅಕ್ಷರ-ಕ್ಷೀರ-ಹಸಿರು ಕ್ರಾಂತಿಯ ಕನಸು
ಮೌಲ್ಯದ ದಿರಿಸಲಿ ಮೌಢ್ಯವನು ಸರಿಸಿ
ಭಕ್ತಿಯಲಿ ಮನವನು ಮಣಿಸಿ ಧ್ಯಾನಿಸಿ
ಆಗಲಿ ಸಂಸ್ಕೃತಿ ಸಂಸ್ಕಾರಗಳ ನನಸು
✍️ ಎಸ್.ಶ್ರೀಧರಮೂರ್ತಿ ಶಿವಜಯಸುತ
ಇತ್ತೀಚಿನ ಕಾಮೆಂಟ್‌ಗಳು