ನಿರೂಪಣಾ ಕವನ

ಆತ್ಮ ಸಂಗಾತಿ

Mar 02, 2026

ನಿನ್ನ ಇರುವಿಕೆಯೇ ನನ್ನ ಬದುಕಿನ ಲಯ.

ಆತ್ಮದ ಜೊತೆ ಬೆಸೆದ ನಂಟು,

ಕನಸು ಮನಸಲ್ಲೂ ಆವರಿಸಿದೆ;
ಜೊತೆಯಾಗಿ ಸಾಗಿದ ಕಥೆಯೆಲ್ಲಾ
ದೃಶ್ಯ ರೂಪಕವಾಗಿ ಮರುಕಳಿಸಿದೆ.

ದಿನದ ಬೆಳಗಲ್ಲಿ — ನಿನ್ನ ಮುಖದರ್ಶನದ ಬಯಕೆ ಮೂಡಿದೆ;
ಗುಂಪಿನೊಳಗಿದ್ದರೂ, ಒಂಟಿ ಎನ್ನುವ ಭಾವ ಕೆಣಕಿದೆ.
ಒಂಟಿಯಾಗಿದ್ದರೂ, ನಿನ್ನ ಮಾತುಗಳೇ ಗುನುಗುನುತಿವೆ;
ನೆನೆಯುವ ಪ್ರತಿ ನಿಮಿಷವು, ಕಣ್ಣು ಕಾಂತಿಯಿಂದ ಮಿನುಗುತ್ತಿದೆ.

ಜಗಳದಲ್ಲಿ ಕಾಣುವ ಪ್ರೀತಿ — ಚಂದ;
ಮುನಿಸಲ್ಲೇ ಕಾಡುವ ನೋಟ — ಚಂದ.
ಆಲಂಗಿಸಿ “ನಾನಿರುವೆ” ಎನ್ನುವ ಪರಿ — ಚಂದ;
ಕುಗ್ಗಲು ಬಿಡದೆ, ಎತ್ತಿ ಹಿಡಿದು ನಡೆಸುವ ಪ್ರೀತಿ — ಚಂದ.

ಮುದ್ದಿಕ್ಕುವ ನಿನ್ನ ಮಾತಿನ ಮೋಡಿಗೆ,
ದುಗುಡವೆಲ್ಲ ಮರೆತು ಮನ ಹಾಡುವುದು.
ಕೆಲವು ಸಮಯದ ನಿನ್ನ ಅಗಲಿಕೆಯ ನೋವಿಗೆಲೇ,
ದಿನರಾತ್ರಿ ಒಂದಾಗಿ ಮೌನಗೀತೆ ಮೊಳಗುವುದು.

ಭವದಾಚೆಗೂ ಬೇಕೆನಿಸುವ ಆತ್ಮ ಸಂಗಾತಿ ನೀನು;
ಬಿಡದಂತೆ ಕಾಪಿಡಬೇಕಿದೆ ಸಂಬಂಧವ — ಹಾಲು-ಜೇನಿನಂತೆ.

ನಿನ್ನ ನೆರಳಾಗಿ ಜೊತೆಯೇ ನಡೆವ ಪ್ರತಿಜ್ಞೆ ನನ್ನದು;
ಉಸಿರು ಇರುವವರೆಗೂ, ಈ ನಂಟು ಅಮರವಾಗಿರಲಿ ಎಂದೇ ಮನದ ಪ್ರಾರ್ಥನೆ.

     ✍️ಸ್ಮಿತಾ 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ