ಪುಸ್ತಕ ವಿಮರ್ಶೆ
ನವಿಲುಗರಿ _ ಪುಸ್ತಕ ವಿಮರ್ಶೆ
Mar 02, 2026
ಪುಸ್ತಕದ ಹೆಸರು _ ನವಿಲುಗರಿ
ಲೇಖಕರು _ ಎ.ಆರ್. ಮಣಿಕಾಂತ್
ಪ್ರಕಾಶಕರು _ ನೀಲಿಮಾ ಪ್ರಕಾಶನ
ಪುಟಗಳ ಸಂಖ್ಯೆ _162
ಬೆಲೆ _ 150ರೂ
ಎ.ಆರ್. ಮಣಿಕಾಂತ್ ಅವರು ಬರೆದಿರುವ ನವಿಲುಗರಿ ಎಂಬ ಪುಸ್ತಕದಲ್ಲಿ ಒಟ್ಟು 32 ನೈಜ ಜೀವನಾಧಾರಿತ ಕಥೆಗಳಿವೆ. ಪ್ರತಿಯೊಂದು ಕಥೆಯೂ ಜೀವನದ ಮೌಲ್ಯಗಳನ್ನು ಸಾರುತ್ತವೆ. ಹಲವು ಕಥೆಗಳನ್ನು ಓದಿದಾಗ ಇದು ನಮ್ಮ ದೈನಂದಿನ ಬದುಕಿನಲ್ಲಿಯೂ ನಡೆಯುತ್ತಿರುವ ಘಟನೆಗಳೇ ಎಂಬ ಭಾವವನ್ನು ಮೂಡಿಸುತ್ತವೆ ಆದರೆ ನಾವು ಒಂದು ವಿಷಯವನ್ನು ಒಂದೇ ದೃಷ್ಟಿಯಿಂದ ನೋಡದೇ ವಿಭಿನ್ನ ದೃಷ್ಟಿಯಿಂದ ನೋಡಿದಾಗ ಹೀಗೂ ನಡೆಯಬಹುದು ಎಂಬ ಅರಿವನ್ನು ಮೂಡಿಸುತ್ತದೆ ಹಾಗೂ ಒಂದೊಂದು ಕಥೆಯಲ್ಲಿಯೂ ನಾವು ಕಲಿಯಬೇಕಾದ ಅನೇಕ ಜೀವನ ಪಾಠಗಳಿವೆ. ಹಲವು ಸಾಧಕರ ಯಶೋಗಾಥೆಗಳನ್ನು, ಅವರು ಮುಳ್ಳಿನ ಹಾದಿಯಲ್ಲಿ ನಡೆದು ಬಂದು ಕೊನೆಗೆ ಹೇಗೆ ಗೆಲುವನ್ನು ಸಾಧಿಸಿದರು ಎಂಬಿತ್ಯಾದಿ ನೈಜ ಜೀವನದ ಚಿತ್ರವನ್ನು ಬಹಳ ಮನೋಜ್ಞವಾಗಿ ಹಾಗೂ ಸ್ಪೂರ್ತಿದಾಯಕವಾಗಿ ಓದುಗರ ಮುಂದಿಡುವಲ್ಲಿ ಲೇಖಕರು ಸಫಲರಾಗಿದ್ದಾರೆ.
"ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರು" ಎಂಬ ಮೊದಲನೆಯ ಕಥೆಯು ಹಲವರ ಮನೆಯಲ್ಲಿ ನಡೆಯಬಹುದಾದ ನಿದರ್ಶನವನ್ನು ಎತ್ತಿ ಹಿಡಿಯುತ್ತದೆ. ಈ ಕಥೆಯಲ್ಲಿ ರಂಗಸ್ವಾಮಿ ಎಂಬವರ ಯಶೋಗಾಥೆ ಇದೆ. ಸ್ಟ್ಯಾಂಡರ್ಡ್ ಮೆಕ್ಯಾನಿಕಲ್ ವರ್ಕ್ಸ್ ಎಂಬ ಫ್ಯಾಕ್ಟರಿ
ಯ ಮಾಲೀಕರಾದ ರಂಗಸ್ವಾಮಿ ಅವರು ನಡೆದು ಬಂದಿರುವ ಹಾದಿಯನ್ನು ಈ ಕಥೆಯು ಬಲು ಭಾವುಕವಾಗಿ ಹಾಗೂ ಮನೋಜ್ಞವಾಗಿ ವಿವರಿಸುತ್ತದೆ. ಮಡದಿಯನ್ನು ಕಳೆದುಕೊಂಡ ರಂಗಸ್ವಾಮಿ ಮಗ ಏಳನೇ ತರಗತಿಗೆ ಬಂದಿದ್ದಾನೆ ಇನ್ನು ಎರಡನೆಯ ಮದುವೆಯಾಗುವುದು ಸರಿಯಲ್ಲ ಒಂದು ವೇಳೆ ಇನ್ನೊಂದು ಮದುವೆಯಾದರೆ ಬಂದ ಹೆಣ್ಣು, ಮಗನನ್ನು ಸರಿಯಾಗಿ ನೋಡಿಕೊಳ್ಳಲಾರಳು ಎಂದು ಮರು ಮದುವೆಯಾಗದೇ ಮಗನನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಮದುವೆಯ ವಯಸ್ಸಿಗೆ ಬಂದ ಮಗ, ನಾನು ಒಂದು ಹುಡುಗಿಯನ್ನು ಪ್ರೀತಿಸಿದ್ದೇನೆ ಅವಳನ್ನೇ ಮದುವೆಯಾಗುತ್ತೇನೆ ಎಂದಾಗ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದರು ರಂಗಸ್ವಾಮಿ. ಮಗ ಮದುವೆಯಾದ ನಂತರ ರಂಗಸ್ವಾಮಿ ಅವರ ಹೆಸರಲ್ಲಿದ್ದ ಎಲ್ಲಾ ಆಸ್ತಿಗಳನ್ನು ಮಗನ ಹೆಸರಿಗೆ ಬರೆದು ಫ್ಯಾಕ್ಟರಿಯ ಜವಾಬ್ದಾರಿಗಳನ್ನು ಕೂಡ ಮಗನ ಹೆಗಲಿಗೆ ಹಾಕಿದ್ದರು ಆದರೆ ಮಗನಿಗೆ ಮಾತ್ರ ತನ್ನ ಪ್ರೀತಿಯ ಅಪ್ಪ ನಿರಾಳರಾದಂತೆ ಅನ್ನಿಸಿರಲಿಲ್ಲ ಕಾರಣ ತನ್ನ ಮಡದಿ ವಯಸ್ಸಾದ ತಂದೆಯಲ್ಲಿ ನಡೆದುಕೊಳ್ಳುವ ರೀತಿ, ಮಾಡುತ್ತಿದ್ದ ಬೇಧ ಭಾವ ಹಾಗೂ ತಂದೆಯ ಬಗೆಗೆ ಆಕೆಗಿದ್ದ ನಿರ್ಲಕ್ಷ್ಯದ ಮನೋಭಾವ ಎಲ್ಲವೂ ಮಗನಿಗೆ ನಿಧಾನವಾಗಿ ಅರಿವಾದಾಗ ಮಗ ಮುಂದೇನು ಮಾಡುತ್ತಾನೆ, ಅಪ್ಪನನ್ನು ಸಮಾಧಾನ ಪಡಿಸುತ್ತಾನ ಅಥವಾ ಹೆಂಡತಿಗೆ ಭಯ ಪಟ್ಟುಕೊಳ್ಳುತ್ತಾನ, ಕೊನೆಗೆ ಯಾವ ನಿರ್ಧಾರವನ್ನು ತೆಗೆದುಕೊಂಡು ತನ್ನ ಜೀವನವನ್ನು ಸಾಗಿಸುತ್ತಾನೆ ಎಂಬ ನೈಜ ಜೀವನಾಧಾರಿತ ಚಿತ್ರವನ್ನು ಬಹಳ ಭಾವುಕವಾಗಿ ಹಾಗೂ ಮನೋಜ್ಞವಾಗಿ ವಿವರಿಸಿದ್ದಾರೆ ಲೇಖಕರು.
"ರೌಡಿ ಆಗಿದ್ದವನು ರಿಯಲ್ ಹೀರೋ ಆಗಿಬಿಟ್ಟ...!" ಎಂಬ ಕಥೆಯಲ್ಲಿ ಅಖಿಲೇಶ್ ಎಂಬವರ ಯಶೋಗಾಥೆಯಿದೆ. ಅಖಿಲೇಶ್ ರ ಹೆತ್ತವರು ಅವಿದ್ಯಾವಂತರು ಆಗಿದ್ದ ಕಾರಣ ಮಗನಿಗೆ ಜೀವನದ ಮೌಲ್ಯ, ಸಂಸ್ಕಾರಗಳನ್ನು ಕಲಿಸುವಲ್ಲಿ ಎಡವಿದ್ದರಿಂದ ಅಖಿಲೇಶ್ ಕೆಟ್ಟವರ ಸಂಗ ಮಾಡಿ ರೌಡಿಯಾಗಿದ್ದ ನಂತರ ಆತ ಹೇಗೆ ಒಳ್ಳೆಯ ಹಾದಿ ತುಳಿದ, ಆತನೇ ಪೊಲೀಸ್ ರಿಗೆ ಹೋಗಿ ಶರಣಾಗಲು ಕಾರಣವೇನು ಆತನಲ್ಲಿ ಇಷ್ಟೊಂದು ಮನಪರಿವರ್ತನೆಯಾಗಲು ಕಾರಣಗಳೇನು, ಸತ್ಪ್ರಜೆಯಾಗಿ ಬದಲಾದ ನಂತರ ಆತ ಮಾಡಿದ ಸತ್ಕಾರ್ಯಗಳೇನು ಎಂಬುದನ್ನು ತಿಳಿದುಕೊಳ್ಳಲು ನೀವು ಈ ಪುಸ್ತಕವನ್ನು ಓದಲೇಬೇಕು.
"ಅಪ್ಪ ಕನಸಿಗೆ ಬಂದಾಗ ನನ್ನನ್ನೂ ಎಬ್ಬಿಸಮ್ಮಾ" ಎಂಬ ಕಥೆಯು ಶಫೀಕ್ ಮೊಹಮ್ಮದ್ ಖಾನ್ ಎಂಬ ಯೋಧನ ಜೀವನ ಚರಿತ್ರೆಯ ಕಥೆಯಾಗಿದೆ. ಶಫೀಕ್ ರ ಮಡದಿ ಸಲ್ಮಾ ಹಂಚಿಕೊಂಡ ಕಥೆಯಿದು.
ಸಲ್ಮಾ ಮದುವೆಯಾಗಿ 15 ದಿನಗಳು ಕಳೆಯುವುದರೊಳಗೆ ಶಫೀಕ್ ಗೆ ಕರ್ತವ್ಯದ ಕರೆ ಬಂದಾಗ ಶಫೀಕ್ ಗೆ ಸೇನೆಗೆ ಹೋಗಲೇಬೇಕಿತ್ತು. ಹೆಚ್ಚಾಗಿ ಎಸ್ಟಿಡಿ ಫೋನಿನಲ್ಲಿ ಮಾತನಾಡುತ್ತಾ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ಶಫೀಕ್ ಮನೆಗೆ ಬರುತ್ತಿದ್ದದ್ದು ಅಪರೂಪವೇ. ಬಾರ್ಡರ್ ನಲ್ಲಿ ಆಪರೇಷನ್ ರಕ್ಷಕ್ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಉಗ್ರರನ್ನು ಹೊಡೆದು ಹಾಕಿದ್ದ ಶಫೀಕ್ ಉಗ್ರರ ಗುಂಡಿಗೆ ಬಲಿಯಾಗಿ ಶವವಾಗಿ ಮನೆಗೆ ಮರಳಿದಾದ ಪತ್ನಿ ಸಲ್ಮಾ ಅನುಭವಿಸಿದ ನೋವಿನ ದಿನಗಳು, ಮಕ್ಕಳನ್ನು ಸಾಕಿದ ಪರಿ, ಮಕ್ಕಳಲ್ಲಿ ಸತ್ಯವನ್ನು ಹೇಳಲಾಗದೇ ಒದ್ದಾಡಿದ ಪರಿಸ್ಥಿತಿ, ಮಕ್ಕಳು ಅಪ್ಪನನ್ನು ನೋಡಬೇಕೆಂದು ಹಠ ಹಿಡಿದಾಗ ಸಮಾಧಾನಿಸಿದ ಪರಿ ಹಾಗೂ ಶಫೀಕ್ ಧರಿಸಿದ ಬಟ್ಟೆಗಳಲ್ಲಿ ಅವರ ಜೀವಂತಿಕೆಯನ್ನು ಕಂಡು ಅವರು ಹಾಕಿದ್ದ ಬಟ್ಟೆಗಳನ್ನು ಒಗೆಯದೇ ಆ ಭಾವವನ್ನು
ಸಲ್ಮಾ ಅನುಭವಿಸಿದ ಪರಿ ಎಲ್ಲವನ್ನೂ ಓದಿದಾಗ ಭಾವುಕದಿಂದ ಕಣ್ಣು ಮಂಜಾಗುತ್ತವೆ.
ಭೈರವಿ ಒಲಿದರೂ ಭೈರಾಗಿಯಾಗಿಯೇ ಉಳಿದುಹೋದರು ಎಂಬ ಕಥೆಯಲ್ಲಿ ಭೈರವಿ ರಾಗದ ಕೀರ್ತನೆಗಳನ್ನು ಬಹಳ ಅಮೋಘವಾಗಿ ಹಾಡುತ್ತಿದ್ದ ಕೆಂಪೇಗೌಡರ ಬದುಕಿನ ಚಿತ್ರಣಗಳಿವೆ. ಸಣ್ಣ ವಯಸ್ಸಿನಿಂದಲೇ ಸಂಗೀತದ ಮೇಲೆ ಅಪಾರ ಒಲವನ್ನು ಇಟ್ಟುಕೊಂಡಿದ್ದ ಕೆಂಪೇಗೌಡರಿಗೆ ಮನೆಯಲ್ಲಿ ಪ್ರೋತ್ಸಾಹ ಸಿಗದೇ ಇದ್ದಾಗ ತಾನಿದ್ದ ಊರನ್ನು ಬಿಟ್ಟು ಪರವೂರಿಗೆ ಬಂದು ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಎಂಬವರ ಬಳಿ ಸಂಗೀತ ಪಾಠವನ್ನು ಹೇಳಿಸಿಕೊಳ್ಳಲೆಂದು ಬಂದಾಗ ಗುರುಗಳು ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಸಂಗೀತವನ್ನು ಹೇಳಿ ಕೊಡುವುದಾಗಿಯೂ ಒಕ್ಕಲಿಗ ಕುಟುಂಬದ ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುವುದಿಲ್ಲ ಎಂದು ತಿಳಿದು ಬೇಸರಗೊಂಡು ಕೆಂಪೇಗೌಡರು ಮುಂದೇನು ಮಾಡುತ್ತಾರೆ, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಬಳಿಯೇ ಸಂಗೀತವನ್ನು ಹೇಗೆ ಕಲಿಯುತ್ತಾರೆ ಕೊನೆಗೆ ಗುರುಗಳನ್ನೂ ಮೀರಿಸಿ ಭೈರವಿ ವಿದ್ಯೆಯನ್ನೇ ಹೇಗೆ ಕರಗತ ಮಾಡಿಕೊಳ್ಳುತ್ತಾರೆ ಎಂಬಿತ್ಯಾದಿ ಕಥೆಗಳ ಜೊತೆಗೆ ಭೈರವಿ ಒಲಿದರೂ ಜೀವನದ ಕೊನೆಯ ಹಂತದಲ್ಲಿ ಕೆಂಪೇಗೌಡರು ಅನುಭವಿಸಿದ ನೋವುಗಳೇನು, ಭೈರವಿ ಕೆಂಪೇಗೌಡ ಎಂದು ಪ್ರಸಿದ್ಧರಾದರೂ ಅವರನ್ನೇಕೆ ಯಾರೂ ಗುರುತಿಸಲಿಲ್ಲ, ಅಪರಿಚಿತ ಕುಟುಂಬಕ್ಕೆ ಧನ ಸಹಾಯಕ್ಕಾಗಿ ತಮ್ಮ ಬಳಿ ಕೊಡಲು ಅಷ್ಟೊಂದು ಹಣವಿಲ್ಲದಿದ್ದಾಗ ಕೆಂಪೇಗೌಡರಿಗೆ ಒಲಿದಿದ್ದ ಭೈರವಿ ರಾಗವನ್ನೇ ಅಡವಿಟ್ಟು ಧನಸಹಾಯ ಮಾಡಿದ ಕೆಂಪೇಗೌಡರು ಕೊನೆಗೆ ಅನಾಥರಾಗಿ ಏಕೆ ಹೋದರು ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿಗೆ ನೋವನ್ನು ತರುತ್ತವೆ.
ನಾನಿಲ್ಲಿ ಹಂಚಿಕೊಂಡದ್ದು ನಾಲ್ಕೈದು ಕಥೆಗಳ ವಿಮರ್ಶೆಯಷ್ಟೇ ಆದರೆ 3 ನೇ ಕ್ಲಾಸ್ ಗೆ ಶಾಲೆ ಬಿಟ್ಟರೂ ಪದ್ಮಶ್ರೀ ಪಡೆದು ಕವಿರತ್ನ ಎನಿಸಿಕೊಂಡವರು ಯಾರು, ಜಗ ಮೆಚ್ಚಿದ ಕಣ್ಣಪ್ಪ ಯಾರು, ಕಣ್ಣಿಲ್ಲದವ ಕೋಟಿ ವೀರನಾದ ಕಥೆ, ಸುದ್ದಿ ಹಂಚುತ್ತಿದ್ದ ಶಿವೂ ಗೂ ಸಿದ್ಧಿಸಿತು ಎಂ ಡಿ ಪದವಿ, ರೂಪಾಯಿ ಹರಿದು ಬಿತ್ತನೆ ಮಾಡಿದಾತ 300 ಕೋಟಿಗೆ ಒಡೆಯ ಮುಂತಾದ ಅದ್ಭುತ ಸಾಧಕರು ಯಾರೆಂಬುದನ್ನು ತಿಳಿಯಲು ನೀವು ಈ ಪುಸ್ತಕವನ್ನು ಓದಲೇಬೇಕು.
ನವಿಲುಗರಿ ಪುಸ್ತಕವು ಓದುಗರಿಗೆ ಹಲವು ಸಾಧಕರ ಪರಿಚಯವನ್ನು ಮಾಡಿಕೊಡುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಕಷ್ಟಗಳನ್ನು ಯಾವ ರೀತಿ ಎದುರಿಸಿ ನಮ್ಮ ಗುರಿಯನ್ನು ತಲುಪಿ ಸಾಧಕರಾಗಬಹುದು ಎಂಬ ಅದ್ಭುತವಾದ ವಿಚಾರಧಾರೆಗಳ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯವನ್ನು ತುಂಬುವುದು ಮಾತ್ರವಲ್ಲದೇ
ಜೀವನದ ಮೌಲ್ಯ ಹಾಗೂ ಹಲವು ಜೀವನ ಪಾಠಗಳನ್ನೂ ಕಲಿಸುತ್ತದೆ ಎಂಬುದು ನಿಸ್ಸಂಶಯ ಎಂದು ನನ್ನ ಅಭಿಪ್ರಾಯ.
ಧನ್ಯವಾದಗಳು
✍️ ಪ್ರಜ್ಞಾ ರವೀಶ್.
ಇತ್ತೀಚಿನ ಕಾಮೆಂಟ್‌ಗಳು