ಕಥೆಯಾದಳು ಶಾರದೆ- ೫
ಕಥೆಯಾದವಳು
ವಿವೇಕ ದೂರದ ಊರಿಗೆ ಕೆಲಸಕ್ಕೆಂದು ಹೋದವನು ಅಲ್ಲೇ ಉಳಿದುಕೊಂಡ. ಮನೆಗೆ ಬರುವುದು ತಿಂಗಳಿಗೊಮ್ಮೆಯೋ ಎರಡು ಮೂರು ತಿಂಗಳಿಗೊಮ್ಮೆಯೋ ಆಗಿತ್ತು. ಮದ್ಯ ಸೇವನೆಯ ಚಟವನ್ನು ಬಿಡಲಾಗದ ಕೃಷ್ಣಪ್ಪನವರು ಅದೊಂದು ರಾತ್ರಿ ಸದ್ದಿಲ್ಲದೆ ಕೊನೆಯುಸಿರೆಳೆದು ಸುದ್ದಿಯಾಗಿದ್ದರು. ವಿಧಿಯ ಲಿಖಿತವನ್ನು ಅಳಿಸುವುದು ಯಾರಿಂದಲೂ ಸಾಧ್ಯವಿಲ್ಲ ಅಲ್ವಾ? ಅತ್ತ ಶಾರದೆಯ ಅತ್ತೆಯೂ ತೀರಿಹೋದರು. ಆ ಸಮಯಕ್ಕೆ ಸರಿಯಾಗಿ ಶಾಲೆಗೆ ವಾರ್ಷಿಕ ರಜೆಯೂ ಸಿಕ್ಕಿತ್ತು. ರಜೆಯಲ್ಲಿ ತವರಿಗೆ ಬಂದ ಶಾರದೆ ಮತ್ತೆಂದೂ ಗಂಡನ ಮನೆಗೆ ಹೋಗಲೇ ಇಲ್ಲ. ಶೇಖರನೂ ಜೊತೆಗೇ ಇದ್ದನು.
ಲೀಲಾವತಿ ಗರ್ಭಿಣಿಯಾಗಿರುವ ವಿಷಯ ಅಕ್ಕಪಕ್ಕದಲ್ಲೆಲ್ಲಾ ಒಂದು ಗಂಭೀರ ವಿಷಯವೆಂಬಂತೆ ಹಬ್ಬಿತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಲೀಲಾವತಿಗೆ ಮದುವೆಯಾದ ಆ ಒಂದು ತಿಂಗಳೂ ಶಂಕರ ಮಲಗಿದಲ್ಲೇ ಇದ್ದು ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದೇ ಎಲ್ಲರ ಚಿಂತೆ. ಕೆಲವರು ಲೀಲಾವತಿಯ ಮಗುವಿನ ತಂದೆ ಶಂಕರ ಎಂದು ಕಷ್ಟಪಟ್ಟಾದರೂ ನಂಬಿದರೆ ಇನ್ನೂ ಕೆಲವರು ಆ ಹಸುಳೆಯ ನಿಜವಾದ ವಾರಸುದಾರ ಯಾರು ಎನ್ನುವ ಶೋಧನೆಯಲ್ಲಿ ತೊಡಗಿದ್ದರು. ಇಂಥ ವಿಷಯಗಳಲ್ಲೆಲ್ಲ ಆಸಕ್ತಿ ಇರುವುದು ಲಕ್ಷ್ಮಿಯ ಮನೆಯ ಹತ್ತಿರವಿರುವ ಮೂರನೆಯ ಮನೆಯ ಯುವಕನೊಬ್ಬನಿಗೆ. ಆಗಿನ್ನೂ ಅವನಿಗೆ ಮದುವೆಯಾಗಿರದಿದ್ದರೂ ಕೆಲ ಅಪರಾಧಳನ್ನು ಕಂಡು ಹಿಡಿಯುವುದರಲ್ಲಿ ಅವನು ಅತೀ ಬುದ್ಧಿವಂತನಾಗಿದ್ದನು.
ಕೆಲವೇ ದಿನಗಳಲ್ಲಿ ಲೀಲಾವತಿಯ ಮಗುವಿನ ತಂದೆಯ ಗುರುತು ಹಿಡಿದು ಎಲ್ಲರೆದುರಿಗೆ ತಂದು ನಿಲ್ಲಿಸಿದ್ದನು ಯುವಕ. ಅಪರಾಧ ಮಾಡಿದವರು ಬೇರೆ ಯಾರೂ ಅಲ್ಲ. ಐದನೆಯ ಮನೆಯ ಯಜಮಾನನೇ ಇಂಥದೊಂದು ಪ್ರಸಂಗದಲ್ಲಿ ಸಿಕ್ಕಿ ಬಿದ್ದಿದ್ದನು. ಮೂರು ಮಕ್ಕಳ ತಂದೆ ತಪ್ಪನ್ನು ಒಪ್ಪಿಕೊಂಡಾಗ ಅವನ ಹೆಂಡತಿ ಮನೆ ಬಿಟ್ಟು ಹೋಗುವವಳನ್ನು ತಡೆದು ನಿಲ್ಲಿಸಿದ್ದು ಊರವರೇ ಆಗಿದ್ದರು. ಆಗಿದ್ದಾಯಿತು ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಬೇಕು ಎಂದು ಇಬ್ಬರಿಗೂ ಬುದ್ಧಿ ಹೇಳಿದಾಗ ಲೀಲಾವತಿ ಇನ್ನೂ ಗೊಂದಲದಲ್ಲೇ ಇದ್ದಳು. ಮಗುವಿಗೆ ಜನ್ಮ ನೀಡುವುದೋ ಅಥವಾ ಇನ್ನೇನು ಮಾಡಲಿ ಎಂದು. ಅದಕ್ಕೂ ಊರವರೇ ಪರಿಹಾರ ತಿಳಿಸಿದ್ದರೆನ್ನಿ. “ಗಂಡನಿಲ್ಲದ ನೀನು ಒಂದು ಮಗುವಿನ ತಾಯಿಯಾದರೆ ಜನ ಇನ್ನಷ್ಟು ಹೇಳಿ ನಗಬಹುದು. ನೀನು ಅದನ್ನು ಯಾರಿಗೂ ತಿಳಿಯದಂತೆ ತೆಗೆಸಿಬಿಡು” ಎಂದದ್ದೇ ತಡ ಲೀಲಾವತಿಯೂ ಆ ಪಾಪದ ಕೆಲಸಕ್ಕೆ ಸಿದ್ಧಳಾದಳು. ಅಂತೂ ಅದೊಂದು ವಿಷಯಕ್ಕೆ ಪೂರ್ಣ ವಿರಾಮ ಸಿಕ್ಕಂತಾಯಿತು. ಇದರಲ್ಲಿ ಲೀಲಾವತಿಯ ತಪ್ಪೋ ಅಥವಾ ಆ ಐದನೆಯ ಮನೆಯವನದ್ದು ತಪ್ಪೋ ಎಂದು ಓದುಗರೇ ನಿರ್ಧರಿಸಬೇಕು.
ಹೀಗಿರುವಾಗಲೇ ಲಕ್ಷ್ಮಿಯ ಮನೆಯ ಹತ್ತಿರವಿರುವ ಖಾಲಿ ಜಾಗದಲ್ಲಿ ಗಂಡ ಹೆಂಡಿರಿಬ್ಬರು ಮನೆ ಕಟ್ಟಿ ವಾಸ ಮಾಡಲು ಬಂದಿದ್ದರು. ಮನೆ ಕಟ್ಟಿದ ಸ್ಥಳ ಇಕ್ಕಟ್ಟಾಗಿ ಅವರ ಛಾವಣಿ ಲಕ್ಷ್ಮಿಯ ಮನೆಯ ಛಾವಣಿಯ ಒಳಗೆ ನಿಂತಿದ್ದು ಈ ಬಗ್ಗೆ ತಿಳಿಸಿದರೂ ಅದರಿಂದೇನೂ ತೊಂದರೆಯಾಗದೆಂದು ಎರಡೂ ಮನೆಯವರು ಒಂದು ಒಪ್ಪಂದಕ್ಕೆ ಬಂದಿದ್ದರು. ಆದರೂ ರಾಘವೇಂದ್ರರಿಗೆ ಇದರಲ್ಲಿ ಅಸಮಾಧಾನ ಇದ್ದೇ ಇತ್ತು. ಲಕ್ಷ್ಮಿ ಶಾಲೆಗೆ ಹೋಗುತ್ತಿರುವಾಗ ಆ ಹೆಂಗಸನ್ನು ನೋಡಿ ಪರಿಚಯವಿದ್ದ ಕಾರಣ ಮತ್ತು ಮನೆಯವರಿಗೆಲ್ಲರಿಗೂ ಗೊತ್ತಿರುವ ಕಾರಣ ಎರಡೂ ಮನೆಯಲ್ಲಿ ಆತ್ಮೀಯತೆ ಹೆಚ್ಚಿತ್ತು. ಹಾಗೆಂದು ಲಕ್ಷ್ಮಿ ಶಾರದೆಯನ್ನಾಗಲೀ ಅವಳ ಮಕ್ಕಳನ್ನಾಗಲೀ ದೂರ ಮಾಡಿದವಳೇ ಅಲ್ಲ. ಪಕ್ಕದ ಮನೆಗೆ ಬಂದವರ ಹೆಸರು ಪರಿಮಳ ಮತ್ತು ಬಾಲಕೃಷ್ಣ. ಮದುವೆಯಾಗಿ ಐದಾರು ವರುಷಗಳು ಕಳೆದಿದ್ದರೂ ಆ ದಂಪತಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಸುತ್ತಮುತ್ತಲಿನ ಮಕ್ಕಳನ್ನು ಕಂಡರೆ ಅತೀ ಪ್ರೀತಿ (?!) ಅವರಿಗೆ.
ಜೀವನೋಪಾಯಕ್ಕಾಗಿ ಬಾಲಕೃಷ್ಣರು ಹತ್ತಿರದ ಸಿರಿವಂತರ ಮನೆಗೆ ಕೆಲಸಕ್ಕೆ ಹೋದರೆ ಪರಿಮಳ ಮನೆಯಲ್ಲೇ ಬೀಡಿ ಕಟ್ಟಿ ಸುಧಾರಿಸುತ್ತಿದ್ದರು. ಇಬ್ಬರೇ ಇರುವುದೆಂದಮೇಲೆ ಬಾಲಕೃಷ್ಣರು ಮಾತ್ರ ದುಡಿದರೂ ಸಾಕಾಗುತ್ತಿತ್ತು. ಪರಿಮಳ ಹೆಸರಿಕೆ ತಕ್ಕ ಹಾಗೆ ಸು (ದುರ್)ಗಂಧ ಬೀರಿ ಎಲ್ಲರನ್ನೂ ತನ್ನೆಡೆಗೆ ಸೆಳೆದುಕೊಳ್ಳುವಳೆಂಬ ವಿಷಯ ಲಕ್ಷ್ಮಿಯ ಮನೆಯವರಿಗೆ ಗೊತ್ತಾದದ್ದೇ ಆ ಒಂದು ಘಟನೆ ಸಂಭವಿಸಿದಾಗಲೇ.
ಏನಾಯಿತು ಅಲ್ಲಿ? ಪರಿಮಳಳ ಸ್ವಭಾವ ನಿಜವಾಗಿಯೂ ಹೇಗಿರಬಹುದು? ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಮುಂದಿನ ಸಂಚಿಕೆಗಾಗಿ ನೀವು ಕಾಯಲೇಬೇಕು.
ಮುಂದುವರೆಯುವುದು..
✍️ಲತಾ ಧನು ಸೀತಾಂಗೋಳಿ