ನಿರೂಪಣಾ ಕವನ
ಇಂಚರೊಳಗಿರೆ ಆಲಾಪನೆ
Jan 11, 2026
ಪ್ರೇಮದ ಉಪಾಸನೆ
ನಿಶೆಯ ಮೌನ ಸರಿದು
ಬಂದ ಬೆಳಗಿನ ಇಂಚರ,
ಕೊಂಬೆಯ ತುದಿಯಲ್ಲಿ ಕುಳಿತ ಹಕ್ಕಿಗಳ
ಪ್ರೇಮದ ಸ್ವರ.
ಪಕ್ಷಿಯ ಕಂಠದೊಳಗಿಂದ ಹರಿದ ಒಲವು,
ಹೃದಯದೊಳಗೆ ಮೌನವಾಗಿ ನೆಲಸಿತು ಸವಿಯು.
ಇಂಚರದಲ್ಲಿನ ಸಾವಿರ ಅರ್ಥಗಳು,
ಕಣ್ಣುಗಳು ಕಣ್ಣಿಗೆ ಹೇಳುವ ಸನ್ನೆ ಮಾತುಗಳು.
ಪ್ರೇಮವೆಂದರೆ ಘೋಷಣೆ ಅಲ್ಲ
ಅದೊಂದು ಸುಂದರ ಉಪಾಸನೆ,
ಇಂಚರದೊಳಗಿನ ಇಂಪು
ಸಾಬೀತು ಮಾಡಿತು ನನಗೆ.
ರೆಕ್ಕೆ ತಟ್ಟಿದ ಗಾಳಿಯಲ್ಲೂ ಪ್ರೀತಿ,
ನಿನ್ನ ನೆನಪಿನಲ್ಲೂ ಅದೇ ಸಂಗತಿ.
ಪಕ್ಷಿಯ ಇಂಚರ–ಹೃದಯದ ಸ್ಪಂದನ,
ಪ್ರೇಮದೊಳಗಿನ ಒಲವಿನ ಸಣ್ಣ ಸಂಚಲನ.
ಜೋರಾಗಿರಬೇಕಿಲ್ಲ ಪ್ರೀತಿ ಸಲ್ಲಾಪ ,
ಇಂಚರದಷ್ಟು ಸಾಕು ಹೃದಯ ಕ್ಕೆ ಆಲಾಪ,
ಆ ಒಂದು ಸವಿ ಧ್ವನಿಯಲ್ಲೇ ಅಡಗಿದೆ,
ಎಂದೆಂದಿಗೂ ಮರೆಯಲಾಗದ ಪ್ರೇಮದ ಅರ್ಥ.
-ಆ.ಶೆ.
ಇತ್ತೀಚಿನ ಕಾಮೆಂಟ್‌ಗಳು