ಪರಿಸರ
ಆಷಾಢದ ಬೆಳಗು
Jul 04, 2025

ಪರಿಸರ
ಆಷಾಢದ ಬೆಳಗು.
ಮುಚ್ಚಿದ್ದ ಕಿಟಕಿಯಿಂದ ತೂರಿಬರುವ ಸುಳಿಗಾಳಿಗೆ ಮೈ ನಡುಗಿಸುವ ತಾಕತ್ತು! ಅಮ್ಮನಷ್ಟೇ ಮೃದುವಾದ ಅವರ ಹತ್ತಿಯ ಸೀರೆಗಳನ್ನು ಸೇರಿಸಿ ಹೊಲೆದ ಕೌದಿ, ಅದರಮೇಲೊಂದು ಕಂಬಳಿ ಹೊದ್ದು ಮಲಗಿದರೂ ಗದಗುಟ್ಟುವ ಚಳಿ. "ತಲೆಗೆ ಬಟ್ಟೆ ಕಟ್ಕೊಂಡು ಮಲ್ಕೋ ಮಾರಾಯ್ತಿ, ಈ ಥಂಡಿಗೆ ತಲೆನೋವು ಬಂದ್ಬಿಡ್ತದೆ" ಅಪ್ಪನ ಬಿಳಿಯ ಧೋತರದ ತುಂಡನ್ನೇ ಸ್ಕಾರ್ಫ್ ನಂತೆ ಮಡಚಿಕೊಟ್ಟು ಹೇಳಿದ್ದರು ಅಮ್ಮ. ಆ ಬಟ್ಟೆಯೋ ಹತ್ತಿಗಿಂತ ಮೃದು! ತಲೆಗೆ ಕಟ್ಟಿಕೊಂಡರೆ...ಅಪ್ಪನೇ ಹಿತವಾಗಿ ತಲೆ ಸವರಿದಂತೆ.
ಅಮ್ಮ ಮಾಡಿ ಬಡಿಸಿದ್ದ ಅಕ್ಕಿ ರೊಟ್ಟಿ, ಮಳೆಗಾಲದ ಅತಿಥಿ, ಕಳಲೆ ಪಲ್ಯವನ್ನು ಇನ್ನೂ ಕೆಂಡವನ್ನುಳಿಸಿಕೊಂಡು ಹಿತವಾದ ಶಾಖ ಕೊಡುತ್ತಿದ್ದ ಒಲೆಯ ಮುಂದೆ ಕುಳಿತು.... ತುಸು ಹೆಚ್ಚೇ ತಿಂದಿದ್ದೆ. ತಂಬೂರಿ ಮಿಡಿಯುವ ಮಂದ್ರ ಸ್ಥಾಯಿಯ ನಾದ ಹೊಮ್ಮಿಸುವಂತಿದ್ದ ಹಂಚಿನ ಮಾಡಿನ ಮೇಲೆ ಬೀಳುತ್ತಿದ್ದ ಮಳೆ ಜೋಗುಳ ಹಾಡಿತ್ತು.
ಚಳಿಯನ್ನು ಎದುರಿಸಲು ಸರ್ವಸನ್ನದ್ಧಳಾಗಿ......ನಾನೇನೂ ನಿನಗೆ ಅಂಜುವುದಿಲ್ಲ ಎಂದು ಪಣ ತೊಟ್ಟು ದಿಂಬಿನಮೇಲೆ ತಲೆ ಇಟ್ಟಿದ್ದೊಂದೇ ನೆನಪು. ನಿದ್ರಾದೇವಿಯ ವಶಳಾಗಿಬಿಟ್ಟೆ. ಆ ನಿದ್ರಾದೇವಿಯ ಆಲಿಂಗನವಾದರೂ ಎಂಥದ್ದು! ಭರ್ತಿ ಏಳು ತಾಸಿನತನಕ....ನನಗೆ ಮಗ್ಗಲು ಬದಲಿಸಲು ಸಹ ಅವಕಾಶ ಕೊಡಲಿಲ್ಲ ಅವಳು!
'ಬೆಳಗಾಯ್ತಾ?' ಎಂದುಕೊಂಡು ಇನ್ನೂ ತೆರೆಯಲು ತಯಾರಿಲ್ಲದ ರೆಪ್ಪೆಗಳನ್ನು ಒತ್ತಾಯದಿಂದಲೇ ತೆರೆದು....ನೋಡಿದೆ. ಸುತ್ತಲೂ ಇನ್ನೂ ಮಬ್ಬುಗತ್ತಲೆ. ಇನ್ನೂ ರಾತ್ರಿಯೇ ಕಳೆದಿಲ್ಲವಾ? ಎಂದುಕೊಂಡು ಮತ್ತೆ ಮಲಗಲು ಯತ್ನಿಸಿದೆ. ನಿದ್ರಾದೇವಿಗೂ ಇತರ ಕರ್ತವ್ಯಗಳಿದ್ದವೇನೋ, ನನ್ನ ಮೇಲೆ ಕೃಪೆ ತೋರಲಿಲ್ಲ. ಮತ್ತೆ ಮತ್ತೆ ಮಲಗಲು ಯತ್ನಿಸಿದರೂ ಊಹೂಂ ನಿದ್ದೆ ಹತ್ತಿರ ಸುಳಿಯಲಿಲ್ಲ. ತಂಬೂರಿ ನಾದದ ಜೋಗುಳವೂ ನಿಂತಿತ್ತು.
ಹಗಲೋ, ಇರುಳೋ ನಿರ್ಧರಿಸಲಾಗದ ಅಯೋಮಯ ಸ್ಥಿತಿ ನನ್ನದು. ಇಷ್ಟೆಲ್ಲ ಗೊಂದಲ ಯಾಕೆ? 'ಗಡಿಯಾರ ನೋಡಿದ್ರೆ ಪ್ರಶ್ನೆಗೆ ಉತ್ತರ ಸಿಗೋದು ಗ್ಯಾರಂಟಿ' ಎಂದುಕೊಂಡು ಅದರತ್ತ ತಿರುಗಿದರೆ....ಸಣ್ಣ ಮುಳ್ಳು ಏಳಕ್ಕೆ ಹತ್ತಿರ, ದೊಡ್ಡ ಮುಳ್ಳು ಒಂಭತ್ತರ ಮೇಲಿತ್ತು. ಹೊರಗಿನ ವಾತಾವರಣಕ್ಕೂ, ಗಡಿಯಾರಕ್ಕೂ ತಾಳೆಯೇ ಆಗುತ್ತಿಲ್ಲ. ಗೊಂದಲದಲ್ಲೇ ...ಇಷ್ಟವಿಲ್ಲದಿದ್ದರೂ ಹೊದಿಕೆಯನ್ನು ಸರಿಸಿ, ತಲೆಗೆ ಕಟ್ಟಿಕೊಂಡಿದ್ದ ಸ್ಕಾರ್ಫ್ ಬಿಚ್ಚಿಟ್ಟು..ಕೋಣೆಯಿಂದ ಹೊರಗೆ ಬಂದೆ.
ಒಣ ಶುಂಠಿ, ಸೋಂಪು ಇತರ ಅಡುಗೆಯ ಸಾಮಗ್ರಿ, ಗಿಡಮೂಲಿಕೆಗಳನ್ನು ಬಳಸಿ ಮಾಡುವ ಕಷಾಯದ ಪರಿಮಳ ಮೂಗಿಗೆ ಬಡಿಯಿತು. 'ಓಹ್, ಅಮ್ಮ ಎದ್ದಿದ್ದಾರೆ' ಎಂದುಕೊಂಡು ಎರಡು ಮೆಟ್ಟಿಲನ್ನಿಳಿದು ಅಡುಗೆಮನೆಗೆ ಬಂದರೆ ರಾತ್ರಿ ಒಲೆಯಮೇಲೆ ಪೇರಿಸಿಟ್ಟ ಸೌದೆಗಳನ್ನು ಬದಿಯಲ್ಲಿ ಎತ್ತಿಟ್ಟು, ಕಷಾಯ ಮಾಡಿಳಿಸಿ, ಆಗಲೇ ಮೊನ್ನೆಯಷ್ಟೇ ಹಗ್ಗ ಕಟ್ಟಿ ಇಳಿಸಿದ ತಿಳುವೆ ಹಲಸಿನ ಹಣ್ಣಿನ ಮುಳಕ ಮಾಡುತ್ತಿದ್ದರು ಅಮ್ಮ.
"ಹೋಗಿ, ಸ್ನಾನ ಮಾಡ್ಕೊಂಡು ಬಾ, ತಿಂಡಿ ತಿನ್ನುವೆಯಂತೆ" ಅಮ್ಮನ ಮಾತನ್ನು ಪಾಲಿಸಲೇಬೇಕಲ್ಲ.
ಬಚ್ಚಲುಮನೆಯಲ್ಲಿ ಧಗಧಗನೇ ಉರಿಯುತ್ತಿದ್ದ ನೀರೊಲೆಯ ಮೇಲಿದ್ದ ಹಂಡೆಯಲ್ಲಿ ನೀರು ಹಬೆಯಾಡುತ್ತಿತ್ತು. ಹಾಗೆಯೇ ಹಿತ್ತಿಲಿಗೆ ಹೋದೆ. ಮಳೆ ನಿಂತು ....ಮರಗಳಿಂದ ಟಪಟಪನೇ ಹನಿಗಳುದುರುತ್ತಿದ್ದವು. ಹಿತ್ತಿಲ ತುಂಬ ಅಚ್ಚಹಸಿರಿನ ತರಕಾರಿ ಚಪ್ಪರ, ಅರಿಶಿಣದ ಓಳಿಗಳು, ತೆಂಗು, ಬಾಳೆ, ಹಲಸು, ಮಾವು ಮತ್ತು ಹಲವಾರು ಹಣ್ಣಿನ ಮರಗಳು ಎಲ್ಲವೂ ಒಂದೊಂದೇ ಎಲೆಯನ್ನು ಜಾಗ್ರತೆವಹಿಸಿ ತೊಳೆದಂತೆ....ಲಕಲಕ ಹೊಳೆಯುತ್ತಿದ್ದವು.
ಮನೆಯ ಮಾಡಿನಿಂದ ಅಡುಗೆಮನೆಯ ಮತ್ತು ನೀರೊಲೆಯ ಚಿಮಣಿಗಳಿಂದ ಹೊರಬರುತ್ತಿದ್ದ ಹೊಗೆ....ಮಂಜು ಕವಿದಂತಿದ್ದ ಗಾಳಿಯಲ್ಲಿ ಬೆರೆಯಲು ಯತ್ನಿಸುತ್ತಾ.....ಕ್ಷಣಕ್ಕೊಂದು ಬಗೆಯ ಚಿತ್ತಾರ ಬಿಡಿಸತೊಡಗಿತ್ತು.
ಹಂಡೆಯಲ್ಲಿ ಕಾದಿದ್ದ ಹಬೆಯಾಡುವ ನೀರಿನಲ್ಲಿ ಸ್ನಾನ ಮಾಡುತ್ತಾ....ಹಿತಾನುಭವದಲ್ಲಿ ತೇಲಿ ಹೋದಂತಿರುವಾಗ....ಹಂಡೆಯ ನೀರು ತಳ ಕಾಣುತ್ತಿದ್ದುದನ್ನು ನೋಡಿ....ಒಲ್ಲದ ಮನಸ್ಸಿನಿಂದಲೇ ಸ್ನಾನ ಮುಗಿಸಿ ಹೊರಗೆ ಬಂದೆ.
ಪೂಜೆಗೆ ಹೂವು ಕೊಯ್ಯಲು ಅಂಗಳಕ್ಕಿಳಿದೆ. ಮಳೆ ನಿಂತು ಮಂಜು ಕವಿದಿದ್ದ ಅಂಗಳದಲ್ಲಿ... ಗಂಟೆ ಎಂಟಾದರೂ ನೇಸರನ ಗೈರುಹಾಜರಿಯಿಂದ...ಆಲಸ್ಯದಿಂದಲೇ ನಸು ಅರಳಿ,ಮಳೆಯಲ್ಲಿ ಮಿಂದು ಕೆಳಗೆ ಬಾಗಿದ್ದ ಹೂಗಳನ್ನು ಮೆಲ್ಲಗೇ ಕೊಡವಿದಾಗ...ಅವುಗಳ ಒಳಗಿದ್ದ ಮಂಜಿನಂತಾಗಿದ್ದ ಮಳೆನೀರಿನ ಹನಿಗಳ ತಣ್ಣನೆಯ ಸ್ಪರ್ಶದಿಂದ ಕಚಗುಳಿಯಿಟ್ಟಂತಾಯಿತು.
ಪೂಜೆ ಮುಗಿಸಿ ಬಂದರೆ....ಅಡುಗೆಮನೆಯಲ್ಲಿ ಮಣೆ ಇಟ್ಟು ಅಮ್ಮ ಕಾಯುತ್ತಿದ್ದರು. ಅಷ್ಟರಲ್ಲಿ ಹಿತ್ತಿಲ ಬೇಲಿಯ ಕಿಂಡಿಗಳನ್ನು ಮುಚ್ಚಲು ಗೊಬ್ಬರದ ಗಿಡದ ಗೂಟಗಳನ್ನು ಊರಿ, ಬೇಲಿಯನ್ನು ಸರಿಪಡಿಸುತ್ತಿದ್ದ ಅಪ್ಪನೂ ಸ್ನಾನ ಮಾಡಿ ತಿಂಡಿಗೆ ಬಂದಿದ್ದರು.
ಬಿಸಿ ಬಿಸಿ ಹಲಸಿನ ಹಣ್ಣಿನ ಮುಳಕದ ಘಮಲು ಇಡೀ ಮನೆಯನ್ನೇ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆಷಾಢದ ನೆಪದಲ್ಲಿ ತವರಿಗೆ ಬಂದಿದ್ದ ನನಗೆ, ಅಮ್ಮನ "ಇನ್ನೊಂದು ತೊಗೊ", "ಚೆನ್ನಾಗಿ ತಿನ್ನು" ಇಂಥ ಉಪಚಾರದಲ್ಲಿ ಎರಡು ಮುಳಕ ಹೆಚ್ಚೇ ತಿಂದು, ಬಿಸಿ ಕಷಾಯ ಕುಡಿದಾಗ....ಸ್ವರ್ಗಕ್ಕೆ ಮೂರೇ ಗೇಣು!
ನನ್ನ ಗೆಳತಿಯನ್ನು ಕಾಣುವ ಹಂಬಲದಲ್ಲಿ ಅಪ್ಪ ಅಮ್ಮನಿಗೆ, " ಇಲ್ಲೇ ಶಾರದಾ ಮನೆಗೆ ಹೋಗಿಬರ್ತೇನೆ" ಎನ್ನುತ್ತಾ ಅಂಗಳಕ್ಕಿಳಿದೆ. ಒಳಗಿಂದ ಅಮ್ಮ ಓಡೋಡಿಬಂದವರೇ, " ಮಳೆ ಯಾವಾಗ ಮತ್ತೆ ಶುರುವಾಗ್ತದೋ ಹೇಳ್ಲಿಕ್ಕೆ ಬರೋದಿಲ್ಲಾ" ಎನ್ನುತ್ತಾ ಕೊಡೆಯೊಂದನ್ನು ಕೊಟ್ಟರು.
ಅಂಗಳದಲ್ಲಿ ಕಾಲು ಜಾರದಿರಲೆಂದು ಹಾಸಿದ್ದ ಅಡಿಕೆ ಸೋಗೆಯಮೇಲೆ ಜಾಗ್ರತೆಯಿಂದ ನಡೆಯುತ್ತಾ ಉಣುಗೋಲು ಸರಿಸಿ ರಸ್ತೆಗಿಳಿದೆ.
ರಸ್ತೆಯ ಇಕ್ಕೆಲಗಳಲ್ಲಿ ತಾನಾಗಿ ಬೆಳೆದಿದ್ದ ಚಗಟೆ ಗಿಡಗಳು, ರಸ್ತೆಬದಿಯ ಕಾಲುವೆಗುಂಟ ಇದ್ದ ಕೆಸುವಿನ ಎಲೆಗಳು ಹಾದಿಬದಿಯಲ್ಲಿದ್ದ ಪಾಚಿಗಟ್ಟಿದ ಮರದ ತುದಿಯಲ್ಲಿ ಗಾಳಿಗೆ ತೂಗುತ್ತಿದ್ದ ಸಿತಾಳೆ ದಂಡೆ ಹೂಗಳು....ಬೆಳಗಿನತನಕ ಸುರಿದ ಮಳೆನೀರು ಹರಿಯುತ್ತಿದ್ದ ಕೆಂಪು ನೀರಿನ ಝರಿ, ಅದರ ಬದಿಯಲ್ಲಿ...ಹಸಿರು ನೆಲಹಾಸು ಹಾಸಿದಂತಿದ್ದ ಹುಲ್ಲು, ಪಾಚಿಗಳ ನಡುವೆ ಅರಳಿದ್ದ ಹೆಸರಿಲ್ಲದ ಪುಟ್ಟ ಪುಟ್ಟ ನಕ್ಷತ್ರದಂಥ ಬಣ್ಣ ಬಣ್ಣದ ಹೂಗಳು ನೆಲದಮೇಲೆ ಚಿತ್ತಾರ ಬಿಡಿಸಿದ್ದವು.
ಈಗ ನೇಸರನಿಗೆ ಭುವಿಯ ನೆನಪಾಗಿರಬೇಕು.....ಮೋಡಗಳ ಮರೆಯಿಂದ....ಮೆಲ್ಲಗೇ ಭುವಿಯತ್ತ ಇಣುಕಿ ನೋಡಿ, ಮತ್ತೆ ಮರೆಯಾಗುವ ಆಟವಾಡುತ್ತಾ....ಚೆಲುವು ಮೈಗೂಡಿಸಿಕೊಂಡು ತಾರುಣ್ಯದ ಸೊಬಗಿನಿಂದ ಕಂಗೊಳಿಸುವ ತರುಣಿಯಂತೆ ಕಾಣುತ್ತಿದ್ದ ಭುವಿಯ ಸೌಂದರ್ಯವನ್ನು ಮನದಣಿಯೆ ಸವಿಯಲೇಬೇಕೆಂದು ಹಟ ಮಾಡುವ ಪ್ರೇಮಿಯಂತೆ ...ಮೋಡಗಳ ಬಂಧನದಿಂದ ಬಿಡಿಸಿಕೊಂಡು...ಮೆಲ್ಲಗೇ ಬೆಚ್ಚನೆಯ ಎಳೆಬಿಸಿಲಿಂದ ಭುವಿಯನ್ನು ಅಪ್ಪಿದ.
ಅವನ ಅಪ್ಪುಗೆಯಲ್ಲಿ ಪ್ರೇಮಪರವಶಳಾದ ಭುವಿಯು ನಕ್ಕಿದ್ದು ನನಗೂ ಕಾಣಿಸಿತು.
ಶೋಭಾ ಮೂರ್ತಿ.
ಇತ್ತೀಚಿನ ಕಾಮೆಂಟ್‌ಗಳು