ನಿರೂಪಣಾ ಕವನ
ಅವನು ಮತ್ತು ಆರೋಗ್ಯ
Apr 07, 2026
ಪೂರ್ಣ ಚಂದಿರನಾಗೆ
ಸಾಗಿಬಿಟ್ಟು
ಬದುಕಿನುದ್ದಕ್ಕೂ,
ಅರೆಗಳಿಗೆ ನಿಲ್ಲದೆ
ಬಂದವರಿಗೆ ಹಾಲ್ನೊರೆಯ
ಬೆಳದಿಂಗಳ ಸುರಿದು
ಅವನು ನಡೆದಿದ್ದು ಕಡಿಮೆ
ಓಡಿದ್ದೆ ಹೆಚ್ಚು
ಅವನಿಗೆ ಆದಾವುದೋ
ಕಾಣದ ಕಡಲಿಗೆ ಕೂಡುವ
ತವಕ
ಹುಣ್ಣಿಮೆಯ ದಿನಗಳು
ಐಸ್ನಂತೆ ಕರಗಿದವು
ಚಂದಿರ ಕ್ಷಿಣೀಸುತ್ತಲೆ ಸಾಗಿದ
ಜೋತೆ ಜೋತೆಗೆ
ಅವನ ಆಯಸ್ಸು, ಆರೋಗ್ಯವು ಕೂಡಾ
ಇಂದು ಅಮವಾಸೆ
ನಿತ್ಯ ಅವನೊಡನೆ ಮೂಡಿ
ಕಿಲಕಿಲ ನುಗುತ್ತಿದ್ದ ನಕ್ಷತ್ರಗಳು
ಮತ್ತಷ್ಟು ರಂಗು ಧರಿಸಿವೆ
ಇತ್ತ ಚಂದಿರ ಮೂಡಲೆ ಇಲ್ಲ
ನಕ್ಷತ್ರಗಳು ಕಾಯಲು ಇಲ್ಲ
ಅವನು ಸತ್ತ ದಿನ
ಬಂದವರು ನಾಲ್ಕಾರು ಹನಿ
ಸುರಿಸಿದರು
ಕೊಯ್ಲು ಮಾಡಿ ಕಾಲಿ ಬಿದ್ದ ಭುವಿಗೆ ವರುಣ ಕೃಪೆಗೈದಂತೆ
ಬೆಳೆ ಬಾಡುವಾಗ
ವರುಣ ಒಂದ್ಹನಿ ಸುರಿಯಲಿಲ್ಲ
ಅವನು ಕರಗುವಾಗ
ಒಬ್ಬರು ಸುಳಿಯಲಿಲ್ಲ
ಅವನ ರಕ್ತ ಪಡೆದವರು,
ಬೇವರು ಕುಡಿದವರು
ಪ್ರತಿ ತಿಥಿ, ಪುಣ್ಯತಿಥಿಗೆ
ಸಿಹಿ ಹಂಚುತ್ತಾರೆ
ದುಃಖಕ್ಕೊ.. ಖುಷಿಗೊ..
ಎಲ್ಲಾ ಇಲ್ಲಿ ಮೌನ
ಬಂದವರು ಉಸುರುವ
ಹುಸಿ ಮಾತುಗಳ ಆಲಿಸುತ್ತಾ
ಸೋತ ಆರೋಗ್ಯ, ಸತ್ತ ಕನಸುಗಳು
ಸವೆಸದೆ ಉಳಿದ ಹಾದಿಯ ನೆನೆದು
ಗೋಡೆಯ ಭಾವಚಿತ್ರ ನಗುತ್ತದೆ
ಅಯ್ಯನಗೌಡ ಸಂಗನಾಳ
ಇತ್ತೀಚಿನ ಕಾಮೆಂಟ್ಗಳು