ಮಕ್ಕಳ ಪಾಲನೆ/ಪೋಷಣೆ

ಕ್ಷಮೆ ಎಂಬ ಶಕ್ತಿ

Sep 02, 2025
star 5.0  (106 ಓದು) share ಹಂಚಿಕೊಳ್ಳಿ

ಕ್ಷಮಿಸುವುದು ದೌರ್ಬಲ್ಯವಲ್ಲ

ಕ್ಷಮೆ ಎನ್ನುವ ಪದವೇ ಅತ್ಯಂತ ಶ್ರೇಷ್ಠವಾದುದು.ಇಡೀ ಜೀವಸಂಕುಲವನ್ನು ಬೆಸೆದಿಡುವ ಶಕ್ತಿಯಿದು.ದ್ವೇಷ,ಹಿಂಸೆ,
ಮತ್ಸರಗಳಿಂದ ಹೊತ್ತಿ ಉರಿಯುವ ಜಗತ್ತಿನಲ್ಲಿ ಶಾಂತಿಯ
ತಂಗಾಳಿ ಬೀಸಬೇಕೆಂದರೆ ಕ್ಷಮಾಗುಣ ಪ್ರತಿ ಹೃದಯಗಳಲ್ಲಿ ಬೆಳಗಬೇಕು.ಅದರಲ್ಲೂ ಇಂದಿನ ಯುವಜನತೆಯಲ್ಲಿ ಕ್ಷಮಾಗುಣವನ್ನು ಒಂದು ಮೌಲ್ಯವಾಗಿ ಬಿತ್ತುವ ಜವಾಬ್ದಾರಿ ಸಮಾಜದ ಮೇಲಿದೆ.
ಚಿಕ್ಕ ಮಕ್ಕಳಲ್ಲಿಯೇ ಇಂದು ಸಣ್ಣ ಪುಟ್ಟ ವಿಷಯಗಳಿಗೆ
ಜಗಳ,ಹೊಡೆದಾಟ ನಡೆಯುವುದು,ಅದೇ ವಿಷಯವನ್ನು
ಮನದಲ್ಲಿ ಇಟ್ಟುಕೊಂಡು ಬಹಳ ಕಾಲದವರೆಗೆ ವೈಷಮ್ಯ
ಸಾಧಿಸುವ ಪ್ರವೃತ್ತಿ ಬೆಳೆಯುತ್ತಿರುವುದನ್ನು
ಕಾಣುತ್ತಿದ್ದೇವೆ .ಯುವಕರಲ್ಲಿ ಬೆಳೆಯುತ್ತಿರುವ ಅಸಹನೆ,
ಸೇಡು,ಪ್ರತೀಕಾರದ ಭಾವಗಳಿಂದ ಅವರು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯವನ್ನೇ ಕತ್ತಲಾಗಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸುತ್ತಿದೆ.

ಕ್ಷಮೆ ಕೇಳುವುದು ಮತ್ತು ಕ್ಷಮಿಸುವುದು ನಮ್ಮ ಅಹಂಗೆ
ಹಿಡಿಸದ ವಿಷಯಗಳು.ಎಲ್ಲಿಯವರೆಗೆ ನಾವು ಈ ಅಹಂ
ನಿಂದ ಹೊರಬರಲಾರೆವೋ ಅಲ್ಲಿಯವರೆಗೆ ಕ್ಷಮಾಗುಣ
ನಮಗೆ ಒಲಿಯಲಾರದು.ಕ್ಷಮೆ ಎಂದಾಕ್ಷಣ ನೆನಪಾಗುವುದು ಬುದ್ಧ.ಅವನ ಪ್ರೇಮ ಮತ್ತು ಕ್ಷಮೆಯ
ಪ್ರಖರತೆಯಿಂದ ಅಂಗುಲೀಮಾಲನಂತಹ ರಕ್ಕಸ ಹೃದಯದಲ್ಲಿಯೂ ಮಾನವೀಯಗುಣ ಪುನರುಜ್ಜೀವನಗೊಂಡಿತು.ಕ್ಷಮೆ ನೀಡುವವರಲ್ಲಿ ಮಾತೃಹೃದಯವಿರುತ್ತದೆ.ಮಾತೆ ತನ್ನ ಒಡಲ ಕುಡಿಗಳ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಅವರನ್ನು ಪ್ರೀತಿಸಬಲ್ಲಳು.
ಅವಳು ಧರಣಿಯಂತೆ ಸಹನಶೀಲಳು.ಅವಳನ್ನು ಕ್ಷಮಯಾಧರಿತ್ರಿ ಎನ್ನುತ್ತೇವೆ.ಇದು ಅವಳ ಬಹುದೊಡ್ಡ
ಶಕ್ತಿಯೇ ಹೊರತು ದೌರ್ಬಲ್ಯವಲ್ಲವೇ ಅಲ್ಲ.

ಒಂದು ಊರಿನಲ್ಲಿ ಎರಡು ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು.ಆ ಎರಡು ಕುಟುಂಬಗಳ
ನಡುವೆ ಮುತ್ತಜ್ಜನ ಕಾಲದಲ್ಲಿ ನಡೆದ ವ್ಯಾಜ್ಯದಿಂದ
ಪರಸ್ಪರ ವೈಷಮ್ಯ ಬೆಳೆದಿತ್ತು.ಅಲ್ಲಿಂದ ಇಲ್ಲಿಯವರೆಗೆ
ಕುಟುಂಬಗಳ ಸದಸ್ಯರು ಪರಸ್ಪರ ಮಾತನಾಡುತ್ತಿರಲಿಲ್ಲ.
ಯಾರದೋ ತಪ್ಪು, ಇನ್ನಾರದೋ ಪ್ರತೀಕಾರ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಲೇ
ಮುಂದುವರಿದು ಬಂದಿತ್ತು.ಒಮ್ಮೆ ಆ ಕುಟುಂಬದ ಹಿರಿಯ
ವ್ಯಕ್ತಿಗೆ ಅಪಘಾತವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.ಅವರಿಗೆ ಅತ್ಯಗತ್ಯವಾದ ರಕ್ತದ ಗುಂಪಿಗಾಗಿ ಆ ಕುಟುಂಬದ ಸದಸ್ಯರು ಹುಡುಕಾಡುತ್ತ
ಇರುವಾಗ ಒಬ್ಬ ಯುವಕ ತಾನಾಗಿಯೇ ಬಂದು ರಕ್ತದಾನ
ಮಾಡಿ ಅವರ ಜೀವ ಉಳಿಸಿದನು.ಅವನು ಹೊರಡುವಾಗ
ತನ್ನ ವಿಳಾಸ ಬರೆಸುತ್ತಿದ್ದನು.ಅದನ್ನು ಹಿರಿಯ ವ್ಯಕ್ತಿಯ
ಮಗ ಕೇಳಿಸಿಕೊಂಡನು.ಅವನು ತಮ್ಮೊಂದಿಗೆ ಮಾತು
ನಿಲ್ಲಿಸಿದ್ದ ಕುಟುಂಬದ ಮನೆಯವನು ಎಂದು ತಿಳಿದು
ಮನ ಕರಗಿತು.ಮರುದಿನವೇ ಅವರ ಮನೆಗೆ ಹೋದ
ಆತ ಹಿಂದೆ ಎಂದೋ ನಡೆದ ನಮ್ಮ ಕುಟುಂಬದ ತಪ್ಪಿಗೆ
ಅವರೆಲ್ಲರ ಪರವಾಗಿ ನಾನು ತಮ್ಮ ಬಳಿ ಕ್ಷಮೆ ಕೇಳುತ್ತಿದ್ದೇನೆ.ಈ ದ್ವೇಷ ನಮ್ಮ ಮಕ್ಕಳ ಮನದಲ್ಲಿ ಮತ್ತೆ
ಬಿತ್ತಿ ಬೆಳೆಯುವುದನ್ನು ನಿಲ್ಲಿಸೋಣವೆಂದರು.ಆ ಕುಟುಂಬದವರೂ ಆಗಲಿ ನಾವೆಲ್ಲರೂ ಮುಂದೆ ಹೊಂದಾಣಿಕೆಯಿಂದ ಬದುಕೋಣ ಎಂದು ನಗುತ್ತಾ
ಸಮ್ಮತಿಸಿದರು.ಮುಂದೆ ಆ ಎರಡೂ ಕುಟುಂಬಗಳ
ಮಕ್ಕಳು ಸಾಮರಸ್ಯದ ಬದುಕು ನಡೆಸಿದರು.

ಕ್ಷಮೆ ನೀಡುವವರ ವ್ಯಕ್ತಿತ್ವ ಪ್ರಬಲವಾಗಿರುತ್ತದೆ.ಆದರೆ
ದ್ವೇಷ ಕಾರುವವರಿಗೆ ಅದು ಒಂದು ಮನೋದೌರ್ಬಲ್ಯವೇ
ಆಗಿರುತ್ತದೆ.ಪ್ರತೀಕಾರದ ಹಿಂದೆ ಹೊರಟವರ ಬದುಕು
ದುರಂತದಲ್ಲಿ ಅಂತ್ಯಗೊಳ್ಳುವುದು ಸತ್ಯ ಎಂಬುದಕ್ಕೆ
ಮಹಾಭಾರತದ ದುರ್ಯೋಧನನ ಪಾತ್ರವೇ ಸಾಕ್ಷಿ.
ಕರ್ಣನ ಕ್ಷಮಾ ಗುಣ ಅವನನ್ನು ಉದಾತ್ತ ವ್ಯಕ್ತಿತ್ವವನ್ನಾಗಿ
ಪ್ರಜ್ವಲಿಸುವಂತೆ ಮಾಡುತ್ತದೆ.

ತಪ್ಪುಗಳನ್ನು ಕ್ಷಮಿಸುತ್ತಾ ಬದುಕನ್ನು ಸಹನೀಯಗೊಳಿಸುವುದು ಎಷ್ಟು ಮುಖ್ಯವೋ,ನಮ್ಮ
ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ಸಹ
ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಅಷ್ಟೇ ಮುಖ್ಯವಾಗುತ್ತದೆ.
ಎಡವುತ್ತಾ ನಡೆಯುವುದು ನಮ್ಮೆಲ್ಲರ ಜೀವನದಲ್ಲಿ
ಸರ್ವೇಸಾಮಾನ್ಯ. ಆದರೆ ಎಡವಿದಾಗ ಅದನ್ನು ತಿದ್ದಿಕೊಳ್ಳಲು ಕ್ಷಮೆಯ ಯಾಚನೆ ಮತ್ತು ಕ್ಷಮಾದಾನ
ಎರಡೂ ಪ್ರಮುಖ ಪಾತ್ರ ವಹಿಸುತ್ತವೆ.

ಕ್ಷಮೆ ಕೇಳುವುದರಿಂದ ಒಂದು ಒಡೆದ ಮನಸ್ಸಿಗೆ ಸಾಂತ್ವನ
ಲಭಿಸಿದರೆ,ಒಂದು ಕದಡಿದ ಸಂಬಂಧಕ್ಕೆ ಮರುಜೀವ
ಬಂದರೆ,ಎಷ್ಟೋ ಜನರ ಸಮಸ್ಯೆಗಳು ಕ್ಷಣಮಾತ್ರದಲ್ಲಿ
ಪರಿಹಾರವಾಗುವಂತಿದ್ದರೆ ಅದು ಬಹಳ ಅರ್ಥಪೂರ್ಣ
ವೆನಿಸುತ್ತದೆ.ಹೇಗೂ ಕ್ಷಮಿಸುತ್ತಾರೆ ಎಂಬ ಕಾರಣಕ್ಕೆ ತಪ್ಪು ಗಳನ್ನು ಮುಂದುವರೆಸುವುದು ನಮ್ಮನ್ನು ನಾವೇ ಘಾಸಿ
ಗೊಳಿಸುತ್ತಾ ಹೋದಂತೆ.ಕ್ಷಮೆಯ ಅರ್ಹತೆ ಮೀರಿದ
ಅಪರಾಧಗಳು ನಡೆದಾಗ ಖಂಡಿಸಲೇಬೇಕಾಗುತ್ತದೆ.

ಕ್ಷಮೆ ಎಂಬುದು ನಮ್ಮ ವಿವೇಚನೆಗೆ ಸಂಬಂಧಿಸಿದ್ದು.ಅದು ದುರ್ಬಳಕೆಯಾಗಬಾರದು.ಕ್ಷಮಿಸುವುದು ದೊಡ್ಡ
ಗುಣ.ಕ್ಷಮೆ ಪಡೆದ ನಂತರ ಆ ತಪ್ಪು ಮತ್ತೊಮ್ಮೆ ನಡೆಯದಂತೆ ನಂಬಿಕೆ ಉಳಿಸಿಕೊಂಡು ನಡೆಯುವುದು
ಸುಂದರ ಬದುಕಿಗೆ ಅತ್ಯಗತ್ಯ.

ಭವ್ಯ ಟಿ.ಎಸ್.


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ