ಜೀವನ ಪಾಠಗಳು
ಕಾಲಚಕ್ರ
Dec 01, 2025
ಸಾಮಾನ್ಯವಾಗಿ ಯಾವುದೇ ವಸ್ತು, ವಿಷಯ, ಜೀವನ, ಜೀವಿ ಮತ್ತು ಮನದ ಭಾವಗಳು ಏನೇ ಇರಲಿ, ಅಲ್ಲಿ ಸಮಯದ ನಿರಂತರ ಬದಲಾವಣೆ, ಹುಟ್ಟು, ಬೆಳವಣಿಗೆ, ಸಾವು ಮತ್ತು ಪುನರ್ಜನ್ಮ ಅನಿವಾರ್ಯವಾಗಿರುತ್ತದೆ. ಇದನ್ನು ಕಾಲಚಕ್ರ ಅಥವಾ ವಿಧಿನಿಯಮ ಎಂದೂ ಕರೆಯಬಹುದು. ಇದು ಕೇವಲ ಮಾನವನ ಜೀವನಚಕ್ರಕ್ಕೆ ಸಂಬಂಧಿಸದೆ, ಬ್ರಹ್ಮಾಂಡದ ಎಲ್ಲ ಜೀವ ಜಂತುಗಳು ಈ ಕಾಲಚಕ್ರದ ಅರಿವನ್ನು ಪಡೆಯುತ್ತವೆ.
ಮಾನವ ಸೃಷ್ಟಿಯ ಯಾವುದೇ ವಸ್ತುಗಳನ್ನು ಪರಿಗಣನೆಗೆ ತೆಗೆದುಕೊಂಡರೂ ಅಲ್ಲಿ ಹುಟ್ಟು, ಸಾವು ಮತ್ತು ಆ ವಸ್ತುವಿನ ಪುನರ್ಜನ್ಮ ಬೇರೊಂದು ರೀತಿಯಲ್ಲಿ ಆಗಿರುತ್ತದೆ.
ಪ್ರತಿಯೊಬ್ಬರಿಗೂ ಬದುಕಿನಲ್ಲಿ ದಿನವೂ ಸಂತೋಷ, ಸಂಕಟಗಳು ಇದ್ದದ್ದೇ. ಕಾಲಚಕ್ರ ತಿರುಗಿದಂತೆ ಅವೂ ನಮ್ಮೊಂದಿಗೆ ತಿರುಗುತ್ತಲೇ ಇರುತ್ತವೆ. ಕೆಲವೊಮ್ಮೆ ನೆಮ್ಮದಿ, ಸಂತಸದಾಯಕ ದಿನಗಳು ನಮ್ಮೊಂದಿಗೆ ಇದ್ದರೆ, ಕೆಲವು ಸಾರಿ ದುಃಖದ ಸಂಧರ್ಭಗಳು ಹಿಂದೆಯೇ ಬರುತ್ತವೆ.
ಕಷ್ಟಗಳು ಒಂದಾದ ಮೇಲೊಂದರಂತೆ ಮೇಲೆರಗಿ ಬಂದು, ಕೆಲ ದಿನಗಳ ಕಾಲ ನಮ್ಮನ್ನು ಕಾಡಿ, ಕೆಲ ದಿನಗಳ ಕಾಲ ಮರೆಯಾಗಿ, ಇನ್ನೇನು ನೆಮ್ಮದಿ ಜೀವನ ಬಂತೆನ್ನುವ ವೇಳೆಗೆ ಮತ್ತೊಮ್ಮೆ ಬೇರೊಂದು ರೂಪದಲ್ಲಿ ಬಂದೆರಗುತ್ತವೆ. ಇದೇ ಜೀವನದ ಕಾಲಚಕ್ರದ ಆಟ. ಎಲ್ಲದಕ್ಕೂ ಹೊಂದಿಕೆ ಮಾಡಿಕೊಂಡು ಹೋಗುವುದೊಂದೇ ಮಾರ್ಗ ನಮ್ಮಲ್ಲಿ ಉಳಿದಿರುವುದು.
ಕಾಲನ ಚಕ್ರದ ಉರುಳಿಗೆ ಸಿಲುಕದವರು ಯಾರಿದ್ದಾರೆ? ಒಂದಲ್ಲ ಒಂದು ಸನ್ನಿವೇಶದಲ್ಲಿ ಎಲ್ಲರೂ ಚಕ್ರಕ್ಕೆ ಸಿಲುಕಿ ನಲುಗುವವರೇ. ಅದಕ್ಕೆ ಬಡವ ಬಲ್ಲಿದ ಮೇಲುಕೀಳೆಂಬ ಭೇದಭಾವವಿರುವುದಿಲ್ಲ. ಕಾಲಚಕ್ರದ ಆಟದಲ್ಲಿ ನಮ್ಮೊಡನೆ ಯಾರೂ ಬರುವುದಿಲ್ಲ. ಏನೇ ಬಂದರೂ ನಾವೇ ಎದುರಿಸಬೇಕಾಗುತ್ತದೆ. ನಮ್ಮ ಏಳು ಬೀಳಿಗೆ ನಾವೇ ಹೊಣೆಗಾರರಾಗುತ್ತೇವೆಯೇ ಹೊರತು, ಇದರಲ್ಲಿ ಬೇರೊಬ್ಬರನ್ನು ದೂಷಿಸುವುದು ನ್ಯಾಯವಲ್ಲ.
ಕಾಲನ ಉರುಳಿಗೆ ಸಿಲುಕಿದವರು ಹೇಗೆ ಹೊರಗೆ ಬರಬೇಕೆಂಬ ದಾರಿಯನ್ನು ಅವರೇ ತಮ್ಮ ಜೀವನಾನುಭವ ಹಾಗೂ ಬುದ್ಧಿವಂತಿಕೆಯಿಂದ ತಿಳಿದುಕೊಳ್ಳಬೇಕು. ಇಲ್ಲದೇ ಹೋದರೆ ಅದರ ಸುಳಿಗೆ ಸಿಕ್ಕಿ ನಲುಗಿಹೋಗುವುದಂತೂ ಸತ್ಯ.
ಯಾವುದೇ ಸಂಕಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಾಲವೇ ನಮಗೆ ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ನಾವು ಸಂಯಮದಿಂದ ಕಾಯಬೇಕಿದೆ. ಆದರೆ ಅದನ್ನು ನಾವು ಅರಿಯದೇ ಆದಷ್ಟು ಬೇಗನೆ ಬಿಡಿಸಿಕೊಳ್ಳಲು ಪ್ರಯತ್ನಿಸಿ ಸೋತು ಒದ್ದಾಡಬೇಕಾಗುತ್ತದೆ. ಯಾವುದೇ ಸಮಸ್ಯೆಗಳು ಬಂದಾಗ ಅವು ಕಗ್ಗಂಟಾಗುವುದಕ್ಕೂ ಮುಂಚೆಯೇ ತಾಳ್ಮೆಯಿಂದ ಅದಕ್ಕೆ ತಕ್ಕನಾದ ಪರಿಹಾರಗಳನ್ನು ಕಂಡುಹಿಡಿದುಕೊಳ್ಳಬೇಕು. ಇಲ್ಲದೇ ಹೋದರೆ ಕಗ್ಗಂಟನ್ನು ಬಿಡಿಸುವುದರಲ್ಲೇ ಜೀವನದ ಸತ್ವ ಕಳೆದುಹೋಗುತ್ತದೆ. ಇದೂ ಕಾಲಚಕ್ರದ ಒಂದು ನಿಯಮವೇ ಅಲ್ಲವೇ...?!
✍️ಧನು
ಇತ್ತೀಚಿನ ಕಾಮೆಂಟ್‌ಗಳು