ನಿರೂಪಣಾ ಕವನ
ಮಂಜು ಮುಸುಕಿದ ಸಂಜೆಯಲೂ
Mar 04, 2026
ಮಿಂಚಂತೆ ನಿನ್ನ ಒಲವಿನ ಬೆಳಕು
ನೀನಿರಲು ಜೊತೆಯಲ್ಲಿ
ಜೀವನದ ಪಥದಲಿ
ಮಂಜು ಮುಸುಕಿದರು
ರವಿಯು ಕರಿಮೋಡದ ಬೆನ್ನ ಹಿಂದೆ ಅವಿತು ಕುಳಿತರು ನಾನಂಜುವುದಿಲ್ಲ..!!
ನೀನಿರಲು ಬಳಿಯಲ್ಲಿ
ಹಗಲು ಇರುಳೆಂಬ ಲೆಕ್ಕಹಾಕುವುದಿಲ್ಲ ..!!
ನಿನ್ನೊಂದಿಗಿನ ಬದುಕು
ಹೊನ್ನ ಹೊಂಗಿರಣದಂತೆ
ಕಂಡ ಕನಸುಗಳು ಗರಿಕೆದರಿ
ನನಸಾಗುವುದು ಇನ್ನೇಕೆ ಚಿಂತೆ ..!?
ಹಿಡಿಯಷ್ಟು ಅನ್ನ ನಾ ಉಂಡರು
ಅದು ನಿನ್ನ ಕೈಸೇರಿ ಬಂದಿದ್ದು
ಮೃಷ್ಟಾನವೆಂದೆ ನಾ ನಂಬುವೆ ..!!
ಉಸಿರಾಟಕ್ಕೆ ಆಮ್ಲಜನಕವೆ ನೀನೆಂದು
ನಾನಿನ್ನ ನೆರಳಿನಲೆ ಉಸಿರಾಡುವೆ ..!!
ಇಳಿ ಸಂಜೆಯ ಹಾದಿಯಲು
ಮಂಜು ಮುಸಿಕಿದ್ದರೂ
ನಿನ್ನ ಒಲವಿನ ಕಂಗಳ ಬೆಳಕಿನಲಿ
ನಾ ನಡೆಯುವೆ ...!!
ಈ ಜಗದ ಋಣವನು ನಾ ತೊರೆಯುವೆ
ನೀ ನನ್ನ ಬದುಕಿನಾಸ್ತಮದ
ಓಕುಳಿಯ ಹೊನ್ನ ಬೆಳಕು
ನನ್ನೆದೆಯ ಆಗಸದಲಿ
ಚಿತ್ತಾರ ಮೂಡಿಸುವುದು ನಾ ಬಲ್ಲೆ ..!!
ಮಂಜಾದ ಮಬ್ಬಿನಲ್ಲೂ
ಮಿಂಚಂತೆ ನೀನನ್ನ ಬಾಳಿನಲ್ಲಿ
ಎಂದೆ ನಾ ಬಯಸುವೆ ..!!
ನೀನಿರಲು ಜೊತೆಯಾಗಿ
ಜೀವನದ ಪ್ರಯಾಣದಲಿ
ನಾ ಪ್ರತಿ ನಿಲ್ದಾಣದಲು
ಸುಧಾರಿಸುವೆ
ಸಂಭಾಳಿಸುವೆ
ಮಂಜು ಮುಸುಕಿದ್ದರು
ಆ ಸಂಜೆಯ ನಾ ಆಸ್ವಾದಿಸುವೆ...!!
ಒಡತಿಯೇ
ಒಲಿದು ಉಳಿದುಬಿಡು
ಪ್ರಯಾಣ ಬಹಳಷ್ಟಿದೆ
ಬೆದರದೆ ಬೆಸೆದು ಬಂಧವ
ಬದುಕಿನ ಬಂಡಿಯನು ಎಳೆದುಸಾಗಿಸುವ...!!
-ಆ.ಶೆ.
ಇತ್ತೀಚಿನ ಕಾಮೆಂಟ್‌ಗಳು