ಪ್ರೇಮ ಕಥೆ

ಜೋಯಿಸರ ಮಗಳು

Dec 02, 2025

ಅವತ್ತು ಎಕಾದಶಿ..,
ಜೋಯಿಸರ ಮನೆಯೊಳಗೆ ಪೂರ್ತಿ ದಿನ ಉಪವಾಸ.. ದೇವರ ನಾಮಸ್ಮರಣೆ ಮತ್ತು ಪೂಜೆಗಳಿಂದಲೇ ಆ ದಿನ ಮಧ್ಯಾಹ್ನದವರಗೆ ಬಂದಿತ್ತು. ಜೋಯಿಸರ ಮನೆ ಮಾತ್ರ ಅಲ್ಲಾ.. ಇಡೀ ಅಗ್ರಹಾರದ ಬ್ರಾಹ್ಮಣ ಕೇರಿಯೊಳಗೆ ಇರುವುದೆಲ್ಲಾ ಬ್ರಾಹ್ಮಣ ಕುಟುಂಬವೇ.. ಒಂದು ಮನೆಯಲ್ಲಿ ಪೂಜೆ ಇತ್ತಂದರೇ ಆ ಆಗ್ರಹಾರದ ಬ್ರಾಹ್ಮಣರೆಲ್ಲಾ ಮಧ್ಯಾಹ್ನದ ಅಡುಗೆಗೆ ರಜೆ ಹಾಕಿ ಅಲ್ಲೇ ಹಾಜರಾಗುತ್ತಿದ್ದರೂ.. ಯಾರ ಮನೆಯಲ್ಲಿ ಪೂಜೆ.., ತಿಥಿ.., ಸತ್ಯ ನಾರಾಯಣ ಪೂಜೆ ಎನೇ ಇರಲಿ ಕೇರಿಯ ಸುತ್ತ ಇರುವ ಬ್ರಾಹ್ಮಣರನ್ನೆಲ್ಲಾ ಕರೆದು ಊಟಕ್ಕೆ ಹಾಕುವುದು
ಅಲಿಖಿತ ಷರತ್ತು.. ಹಾಗೆ ಕರೆಯದೆ ಹೋದರೆ  ಆ ಬ್ರಾಹ್ಮಣರ ಮನೆ ಅಲಿಖಿತ ನಿಷೇಧ.. ಹಾಗಾಗಿ ಯಾರೇ ಮನೆಯಲ್ಲಿ ಎನೇ ಪೂಜೆ.., ತಿಥಿ..ಇದ್ದರೂ ಕೇರಿಯ ಬ್ರಾಹ್ಮಣ ಮನೆಗಳಿಗೆ ಕುಂಕುಮ ಇಟ್ಟು ಕರೆಯುವುದು ವಾಡಿಕೆ..
ಎಕಾದಶಿ ಮನೆಯಲ್ಲಿ ಜೋಯಿಸರು ಪೂಜೆ ಪುನಸ್ಕಾರ ಮುಗಿಸಿ ಸಂಧ್ಯಾವಂದನೆ ಮಾಡಿ ಮಧ್ಯಾಹ್ನದ ಹುರಿ ಬಿಸಲಲ್ಲಿ ಅಡುಗೆ ಮನೆಯಲ್ಲಿ ಇದ್ದ ಅವರ ಹೆಂಡತಿ ಅನುಸುಯಾಮ್ಮ ಹಳೆ ಮನೆಯ ಮಾಳಿಗೆ ಕೋಣೆಯನ್ನು ಸ್ವಚ್ಛ ಮಾಡುವಲ್ಲಿ ನಿರತವಾಗಿದ್ದಳು.. ಅನುಸುಯಾಮ್ಮ ಹಾಗೆನೇ ಅವಳು ಒಂದು ಕ್ಷಣವೂ ಖಾಲಿಯಾಗಿ ಕುಳಿತಿದನ್ನ ನೋಡಿಲ್ಲ.. ಬೆಳಗಿನ ಜಾವ ಆರಕ್ಕೆ ಎದ್ದರೇ ರಾತ್ರಿ ಎಂಟರ ತನಕ ಅಡುಗೆ.., ಮನೆಗೆಲಸ.., ದೇವರ ಹಾಡು.., ಪೂಜೆ ಸಾಮಾಗ್ರಿಯನ್ನ ತೊಳೆದು ಜೋಡಿಸುವುದರಲ್ಲೆ ನಿರತ..ಅವರಿಗೆ ದೇವರಲ್ಲಿ ಅತೀವ ನಂಬಿಕೆ.. ಅದರಲ್ಲೂ ಮನೆಯ ದೇವತೆ ಮಾಹಾಮಾಯಿ ಅಂದರೇ ಕಣ್ಣ ಮುಚ್ಚಿ ಒಂದು ಕ್ಷಣ ನೆನೆಯದ ದಿನಗಳೆಯಿಲ್ಲಾ.. ಎನೂ ಕೆಲಸವಿಲ್ಲದಿದ್ದರೆ ಹತ್ತಿಯ ಬಿಡಿಸಿ ಬತ್ತಿ.., ಹೂಬತ್ತಿ.., ತುಪ್ಪದ ದೀಪದ ಬತ್ತಿ..,ಮಾಡುತ್ತಾ ದೇವರ ಹಾಡು ಹಾಡುತ್ತಾ.. ತನ್ನ ಕೆಲಸದಲ್ಲಿ ಮಗ್ನವಾಗಿದ್ದಳು.. ವಯಸ್ಸು ನಲವತ್ತೖದು ಆದರೂ ಕೆಲಸದ ಮಟ್ಟಿಗೆ ಅನುಸೂಯಮ್ಮ ಪುಟ್ಟ ಹುಡುಗಿ.. ಜೋಯಿಸರ ಮದ್ವೆ ಆಗಿ ಬರೋಬ್ಬರಿ ಇಪತ್ತು ವರ್ಷ.., ಒಂದಿನವೂ ಜೋಯಿಸರ ವಿರುದ್ಧ ಧ್ವನಿ ಎತ್ತಿಲ್ಲಾ..
ಜೋಯಿಸರ ಬಿರಿಸು ಮಾತಿಗೆ ಮುಸಿ ಮುಸಿ ಅಳುತ್ತಾ ಒಮ್ಮೆಯೂ ಮೂಲೆಯಲ್ಲಿ ಕುಳಿತಿಲ್ಲಾ.. ತನ್ನ ಗಂಡ ದೇವರ ಸ್ವರೂಪ ಅಂತಾ ನಂಬಿದ ಅನುಸೂಯಮ್ಮ ಗಂಡನಿಗೆ ಜೋರು ಧ್ವನಿಯಿಂದ ಒಮ್ಮೆಯೂ ಕೂಗಿಲ್ಲ.. ಕೇರಿಯ ನಡುವೆ ಜೋಯಿಸರಿಗೆ ಇರುವ ಒಂದು ಗತ್ತು.., ಅವರ ಮಾತಿಗೆ ಇರುವ ತೂಕ.., ಎದುರು ಮಾತನಾಡಲಾಗದ ಭಯ ಒಂದೆಡೆಯಾದರೆ.. ಅನುಸೂಯಮ್ಮನೆಡೆಗೆ ಇರುವ ಒಂದು ಸಲುಗೆ.., ಒಂದು ಗೌರವದ.., ಸಲೀಸಾಗಿ ಬಾಯಿ ತುಂಬ ಹುರುಳ ಸುರಿದಂತೆ ಮಾತನಾಡುವ ಆ ಹಿರಿಮೆಯೇ ಬೇರೆ.. ಸುಶ್ರಾವ್ಯವಾಗಿ ದೇವರ ದಾಸಪದಗಳನ್ನ ನಾಲಿಗೆ ಅಂಟಿವೆಯೊನೋ ಎಂಬಂತೆ ರಾಗ ಹಿಡಿದು ಹಾಡುತ್ತಿದ್ದರೆ..
ಸುತ್ತ ನೆರೆದವರೆಲ್ಲಾ ಕಿವಿ ಕಣ್ಣು ಅಗಲಿಸಿ ಹಾಡನಲ್ಲಿ ಮಗ್ನರಾಗುತ್ತಿದ್ದರೂ..
ಜೋಯಿಸರು ಮಧ್ಯಾಹ್ನದ ಪೂಜೆಯಲ್ಲಾ ಮುಗಿಸಿ ಬರೀ ಹೊಟ್ಟೆಯಲ್ಲೆ ತೋಟದ ಕೆಲಸಕ್ಕೆ ಹೋಗುತ್ತಿದ್ದರೆ.. ಅನುಸೂಯಮ್ಮ ಒಂದು ಕ್ಷಣ ಲೊಚಗೂಡಿ ಮತ್ತದು ಹಾಗೆ ಲೊಚಗೂಡಿದ್ದೂ ದೇವರಿಗೆ ಮಾಡುವ ಅಪಪ್ರಚಾರವೇನೋ ಎಂಬಂತೆ ಮನೆಯ ದೇವತೆ ಮಾಹಾಮಾಯಿಯನ್ನ ನೆನೆದು ಒಂದು ಕ್ಷಣ ನೆನಸಿಕೊಂಡು ಮೌನವಾದಳು.
ಜಗುಲಿಯ ಕೋಣೆಯಲ್ಲಾ ಸ್ವಚ್ಛ ಮಾಡಿ ತನ್ನ ಒಬ್ಬಳೆ ಮಗಳು ಶ್ರಾವಣಿ ಕಾಲೇಜು ಮುಗಿಸಿ ಬರುವ ಹೊತ್ತು ಆಯ್ತು ಎಂದು.. ಬೆಳಿಗ್ಗೆ ಒಂದು ಲೋಟ ಕುಡಿದು ಹೋದ ಮಗಳು ಮನೆಗೆ ಬಂದರೆ ಕೊಡಲಿಕ್ಕೆ ಸ್ವಲ್ಪ ಬೆಲ್ಲ ಮತ್ತು ಶೆಂಗಾವನ್ನ ತೆಗೆದಿಟ್ಪು.. ಬಟ್ಟಲಲ್ಲಿ ಇಡುವುದಕ್ಕೂ.. ಹದಿನೆಂಟು ವಯಸ್ಸಿನ ಶ್ರಾವಣಿ ಗೇಟು ತೆಗೆದು ಮನೆಯ ಬಾವಿಯಿಂದ ಜೋಯಿಸರು ನೀರು ಸೇದಿ ಹಂಡೆಯಲ್ಲಿ ತುಂಬಿಟ್ಟ ನೀರನ್ನೂ ತ್ರಾಮದ ತಂಬಿಗೆಯಿಂದ ತುಂಬಿಕೊಂಡು ಲಂಗ ಚೂರು ಎತ್ತಿ ಎರಡು ಕಾಲಿಗೆ ಸಮವಾಗಿ ಹಾಕಿಕೊಳ್ಳಲಿಕ್ಕೆ ಸರಿಯಾಗಿತು..
ತೆಂಗಿನ ಎತ್ತರದಂತೆ ಬೆಳೆದು ನಿಂತ ಜೋಯಿಸರ ಹಾಗೂ ಅನುಸೂಯಮ್ಮರ ಒಬ್ಬಳೇ ಮಗಳು ಶ್ರಾವಣಿ.. ಮುಖದಲ್ಲಿ ಪೂರ್ಣಚಂದಿರನ ಹೊಳಪು.. ಕೇರಿಯಿಂದ ಒಂದು ಪಲ್ಗಾಂಗದ ದೂರ ಇರುವ ಸರಕಾರಿ ಕಾಲೇಜಿನಲ್ಲಿ   ದ್ವಿತೀಯ ಪಿಯುಸಿ ಒದುತ್ತಿರುವ ಶ್ರಾವಣಿಗೆ ಕೈ ತುಂಬಾ ಅಂಕಗಳು.. ಓದಿನಲ್ಲಿ ಜಾಣೆ.., ಹಿರಿಯರೆಂದರೆ ವಿನಯ..
ಅಮ್ಮನಂತೆ ದೇವರ ದಾಸಪದಗಳಲ್ಲಿ ಸುಶ್ರಾವ್ಯ ಹಾಡುಗಾರ್ತಿ..
ಮನೆಗೆ ಒಳಗೆ ಕಾಲಿಡುವ ಮುಂಚೆ ತಂದೆ ಇರಬಹುದು ಎಂದು ಬಿಗಿಯುಸಿರು ಹಿಡಿದು ಅಂಗಳದಲ್ಲಿ ಜೋಯಿಸರ ಜೋಡುಗಳನ್ನ ಕಣ್ಣಂಚಲ್ಲಿ ಹುಡುಕಾಡಿದಳು.. ತಂದೆಯವರ ಜೋಡುಗಳು ಇಲ್ಲದನ್ನ ಮನಸಿನಲ್ಲಿ ಒಂದು ರೀತಿ ಬಿಗಿ ಹಿಡಿದ ಉಸಿರನ್ನು ನಿರಾಳಗೊಳಿಸಿತು.. ಅಮ್ಮ ಮಾತ್ರ ಇರೋದು ಎಂದು ಸಮಾಧಾನಗೊಂಡು ತನ್ನ ಕಾಲೇಜಿನ ಕಪ್ಪು ಬೂಟಗಳನ್ನ ಅಂಗಳದಲ್ಲಿ ಬಿಟ್ಟು ಬಾವಿಯ ನೀರಿನಿಂದ ಕಾಲು ತೊಳೆದು..'ಅಮ್ಮಾ.. ಹಸಿವು..' ಎಂದು ಗೋಳು ಹೊಡೆಯುತ್ತಲೇ ಒಳಗೆ ಹೆಜ್ಜೆ ಇಟ್ಟಳು.
'ಶ್ರಾವಣಿ ಮೊದಲು ದೇವರಿಗೆ ಕೈ ಮುಗಿ'ಎಂದು ಅಡುಗೆ ಮನೆಯಿಂದಲೇ ಅನುಸೂಯಮ್ಮ ಗೊಣಗಿದಳು.. ಅಮ್ಮನ ಮಾತಿನಂತೆ ದೇವರಿಗೆ ಕೈ ಮುಗಿದು.. ಅಮ್ಮ ಕೊಟ್ಟ ಬೆಲ್ಲು ಮತ್ತು ಶೇಂಗಾವನ್ನ ಆಸೆಬರಿತ ಕಣ್ಣುಗಳಿಂದ ತುಂಬಿ ಕೊಂಡು ಲಗುಬಗೆಯಿಂದ ಬಟ್ಟಲ ಹಿಡಿದುಕೊಂಡು ಒಂದು ಹಿಡಿಕೆ ಬೆಲ್ಲ ತಿಂದು ಅಷ್ಟೇ ಅವಸರದಲ್ಲಿ ಶೇಂಗಾವನ್ನ ಹಿಡಿದು ಬಾಯಿಗೆ ಹಾಕಿಕೊಂಡು ನುಂಗಿದಳು.. ಹಸಿದ ಹೊಟ್ಟೆಗೆ ಬಂಗಾರದಂತೆ ಸೇರಿತು..

     (ಮುಂದುವರೆಯುವುದು)

                                 ರಾಘವೇಂದ್ರ. ಕೆ


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ