ಕವನಗಳು

ಮುಂದಿನ ನಿಲ್ದಾಣ

Feb 04, 2026

ಬದುಕೊಂದು ಶಕಟವಾಹನದ ಹಾಗೆ
ಇದಿರಿರಲು ನಿಲ್ದಾಣ ಇಳಿಯದಿರೆ ಹೇಗೆ
ವಿಧಿ ನಿಯಮ ಮೀರುವುದು ತಿಳಿದವರು ಇಲ್ಲ
ಕದ ತಟ್ಟಿ ಎಂದಿಗೂ ಬಳಿ ಬರುವುದಿಲ್ಲ

ಸುತ್ತಲಿರುವವರೆಲ್ಲ ನಮ್ಮಂತೆ ಅಂತೆ
ಎತ್ತಕಡೆ ಹೋದರೂ ಬಿಡದಲ್ಲ ಚಿಂತೆ
ಕತ್ತು ಹೊರಳಿಸಿ ನೋಡಿ ಕಾಣುವುದು ದಾರಿ
ಹತ್ತಿ ಇಳಿಯುತ ನಡೆದು ಗುರಿಯನ್ನು ಸೇರಿ

ಮುಂದಿರುವ ನಿಲ್ಮನೆಯು ಕೊನೆಯದೇ ಎಂದು
ಮಂದಿ ತಿಳಿದಿಲ್ಲ ನಿಜವಾಗಿಯೂ ಇಂದು
ಎಂದಾದರೂ ಮರಣ ಸಂಭವಿಸುದಿಹುದು 
ಒಂದು ಹನಿಯೂ ಬಳಿಕ ಸೇರುವುದು ಸಿಂಧು

ಸಾವಕಾಶದಿ ಹೆಜ್ಜೆ ಇಡಬೇಕು ಇಲ್ಲಿ
ನೋವೆಂದರೇನೆಂದು ಅರಿತು ಮನದಲ್ಲಿ
ಯಾವ ಹುತ್ತದಿ ಯಾವ ಹಾವು ಅಡಗಿದೆಯೊ
ದೇವನೂ ಕೈ ಹಿಡಿಯಲಾರ ನೀ ತಿಳಿಯೊ 

ಬರುವುದೇನೇ ಬರಲಿ ಎದುರಿಸುವ ನಿತ್ಯ 
ಬರೆದಿಹನು ಬೊಮ್ಮ ಹಣೆಬರಹ ಇದು ಸತ್ಯ
ಕರೆದಾಗ ಓಗೊಡದೆ ಇರಲಾಗಬಹುದೆ
ಆರೆಘಳಿಗೆ ಯೋಚಿಸದೆ ಸಾಗೋಣ ಮುಂದೆ

✍️ ಲತಾ ಧನು ಸೀತಾಂಗೋಳಿ
೦೪-೦೩-೨೦೨೬


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ