ಬನ್ನಿ ಸೋದರ ಸೋದರಿಯರೇ..

ಬನ್ನಿ ಸೋದರ- ಸೋದರಿಯರೇ
ಒಗ್ಗಟ್ಟಿನ ಮಂತ್ರವ ಜಪಿಸೋಣ|
ಭುವಿಯ ಉಳಿಸಿ,ಅರಿವನು ಬೆಳೆಸಿ
ಸಮತೆಯ ಸಾಧಿಸಿ ತೋರೋಣ||
ಸ್ವಚ್ಛತೆ ಪಠಿಸಿ,ರೋಗಗಳೋಡಿಸಿ
ಸ್ವೇಚ್ಛಾಚಾರವ ಅಳಿಸೋಣ|
ಜ್ಞಾನದ ಉಸಿರಲಿ,ಶ್ರಮದ ಬೆಳಕಲಿ
ನೆಮ್ಮದಿ ಬದುಕನು ಬಿತ್ತೋಣ||
ಮೊಬೈಲ್ ಬಿಟ್ಟು ಪುಸ್ತಕ ಓದುತ
ನಲಿಯುತ ಕುಣಿಯುತ ಕಲಿಯೋಣ
ಶಾಲೆಗೆ ಹೋಗುತ ಚೆಂದದಿ ಕಲಿತು
ತಾಯ್ತಂದೆ ಕೀರ್ತಿಯ ಬೆಳಗೋಣ
ತಾಯ್ನುಡಿ ಪ್ರೇಮವ ಮನದಿ ತುಂಬುತ
ಬಳಸುತ ಬೆಳೆಸುತ ಉಳಿಸೋಣ
ವಿದ್ಯಾವಂತರಾಗಿ ಸೇವೆಯ ಮಾಡುತ
'ಜೈ ಹಿಂದ್' ನಾದವ ಮೊಳಗಿಸೋಣ
ಕಷ್ಟಗಳಿಗೆಂದೂ ಹೆದರದೆ ಎದುರಿಸುತ
ಹೆಣ್ಣನು ಗೌರವಿಸಿ ಆದರಿಸಿ ಬಾಳೋಣ
ಗೆಳೆತನದ ಬೆಂಬಲ ಪ್ರೋತ್ಸಾಹ ಪಡೆದು
ನಾವು ದುಶ್ಚಟಗಳ ದಾಸರಾಗದಿರೋಣ
ಪರಿಸರ ಪ್ರೀತಿ ಇನ್ನಿಲ್ಲವು ಭೀತಿಯು
ಅನೀತಿಯನೋಡಿಸಿ ಬದುಕೋಣ|
ಕರ್ಮದ ಬೆಳಕಲಿ,ಧರ್ಮದ ಸೆರೆಯಲಿ
ಭೋಗಕೆ ಅಂಕುಶವನು ಹಾಕೋಣ||
ಸೋದರ ತತ್ವವೇ ಜೀವನ ಸತ್ಯವು
ಅದುವೇ ತಥ್ಯವು ತಿಳಿಯೋಣ|
ಅದುವೇ ಕನಸು,ಅದುವೇ ನನಸು
ಉಳಿದೆಲ್ಲವು ಮಿಥ್ಯವು ಸಾರೋಣ||
ಸತ್ಯ,ಶಾಂತಿ,ಸಮತೆಯ ತತ್ವದಿ
ಕ್ರೂರ ದಾನವತೆಯ ಅಳಿಸೋಣ|
ಸಹಬಾಳ್ವೆಯ ಕಾಂತಿಯ ಮೆರೆಸಿ
ವಿಶ್ವ ಮಾನವತೆಯ ಉಳಿಸೋಣ||
✍️ಎಸ್.ಶ್ರೀಧರಮೂರ್ತಿ(ಶಿವಜಯಸುತ), ಮಂಡ್ಯ.