ಸಣ್ಣ ಕಥೆಗಳು
ಮಲೆನಾಡ ಮುಂಗಾರು
Jul 06, 2025

ಆಗ ತಾನೇ ನಿಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಮೊದಲನೇ ಅವಧಿ ಬೆಲ್ ಮುಗಿದು ಎರಡನೇ ಅವಧಿ ಶುರುವಾಗಿತ್ತು. ಅಧ್ಯಾಪಕ ರಮೇಶ ಎಂಟನೇ ತರಗತಿ ಪಾಠ ತೆಗೆದುಕೊಳ್ಳಲು ಮುಂದಾಗಿದ್ದ. 85 ಮಕ್ಕಳ ಸಮೂಹವನ್ನು ಹೊಂದಿದ್ದ ನಿಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿಗೆ ಈ ವರ್ಷ ದಾಖಲಾಗಿದ್ದು 30 ಮಕ್ಕಳು. ರಮೇಶ ಭೂಗೋಳಶಾಸ್ತ್ರದ ಅಧ್ಯಾಪಕನಾಗಿದ್ದ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಭಾಗವಾಗಿದ್ದ ನಿಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದ್ದದ್ದು ಮೂವರು ಅಧ್ಯಾಪಕರು.
ರಮೇಶ ತನ್ನ ಊರಿನ ಮಕ್ಕಳನ್ನು ವಿದ್ಯಾ ಅರ್ಹತರನ್ನಾಗಿ ಮಾಡಲು ತಾನು ಓದಿದ್ದ ಶಾಲೆಗೆ ಅಧ್ಯಾಪಕನಾಗಿದ್ದ. ಅಂದು ಮಕ್ಕಳಿಗೆ ಮುಂಗಾರು ಮಳೆಯ ಪ್ರಾಮುಖ್ಯತೆ ಮತ್ತು ಅದರ ಹುಟ್ಟುವಿಕೆಯ ಬಗ್ಗೆ ತಿಳಿಸಿದ್ದ. ದಕ್ಷಿಣ ಗೋಳಾರ್ಧದಿಂದ ಬೀಸುವ ವ್ಯಾಪಾರ ಮಾರುತಗಳು ಅರಬಿ ಸಮುದ್ರದಿಂದ ಹಾದು ಕೇರಳ, ಪಶ್ಚಿಮ ಘಟ್ಟಗಳ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಭಾರತ ತನ್ನ ಶೇಕಡ 80ರಷ್ಟು ಮಳೆಯನ್ನು ಈ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಪಡೆಯುತ್ತದೆ. ಮುಂಗಾರು ಭಾರತದ ಕೃಷಿಗಾರಿಕೆಯ ಮುಖ್ಯ ಅಂಗವಾಗಿದೆ. ಭಾರತಾದ್ಯಂತ ಈ ಸಮಯದಲ್ಲಿ ಕಡಿಮೆ ತಾಪಮಾನ ಸೃಷ್ಟಿಯಾಗುತ್ತದೆ. ದಟ್ಟ ಮೋಡಗಳು, ಹೆಚ್ಚಿನ ಮಳೆ ಈ ಮಳೆಯ ಲಕ್ಷಣಗಳು ಎಂದು ಅಧ್ಯಾಪಕ ರಮೇಶ ಮಕ್ಕಳಿಗೆ ವಿಸ್ತಾರವಾಗಿ ಭಾರತದ ನಕ್ಷೆಯ ಮೂಲಕ ವಿವರಿಸಿದ್ದ.
ಮುಂಗಾರಿನ ಪ್ರಾಮುಖ್ಯತೆಯ ಬಗ್ಗೆ ಪಾಠ ಮಾಡಿದ್ದ ರಮೇಶನ ಮನಸ್ಸಿನ ಪಾಲಿಗೆ ಮುಂಗಾರು ಎಂದರೆ ನೆನಪು. ದಟ್ಟ ಕಾಡುಗಳ ಮಧ್ಯೆ ತನ್ನ ಬೇರುಗಳನ್ನು ಸಾಧಿಸಿರುವ ನಿಟ್ಟೂರು ಪಶ್ಚಿಮ ಘಟ್ಟಗಳ ಭಾಗವಾಗಿದೆ. ಕೊಡಚಾದ್ರಿ ಜಲಪಾತವನ್ನು ತೋಳ್ಬಂದಿಯಲ್ಲಿ ಇರಿಸಿಕೊಂಡಿರುವ ನಿಟ್ಟೂರಿನಿಂದ ಕೊಲ್ಲೂರು ಸಿಗಂಧೂರಿಗೆ ಒಂದು ಗಂಟೆಯ ಪ್ರಯಾಣ. ಮುಂಗಾರು ಮಳೆ ಅಡಿಕೆ ತೋಟಗಳ ಕೃಷಿ ಭೂಮಿಯಾದ ನಿಟ್ಟೂರಿಗೆ ಜೀವಮಾನವಾಗಿತ್ತು ಹಾಗೂ ರಮೇಶನ ನೆನಪಿನ ಬುತ್ತಿಯ ಬೀಗದ ಕೀಲಿ ಕೈಯಾಗಿತ್ತು. ಮುಂಗಾರಿನ ಮಳೆ ಎಂದರೆ ರಮೇಶನಿಗೆ ನೆನಪಾಗುತ್ತಿತ್ತು ಅವನ ತಂದೆ ಅಣ್ಣಯ್ಯ. ಅಣ್ಣಯ್ಯನಿಗೆ ಮುಂಗಾರಿನ ಸಮಯವೆಂದರೆ ಅಚ್ಚುಮೆಚ್ಚು, ದಟ್ಟ ಕಾಡುಗಳ ಮಧ್ಯೆ ಸ್ಥಾಪಿತವಾಗಿದ್ದ ತನ್ನ ಹೆಂಚಿನ ಮನೆಯ ಅಂಗಳದಲ್ಲಿ ಕಾಫಿ ಕುಡಿಯುತ್ತಾ, ಸಂಗೀತವನ್ನು ಆಲಿಸುತ್ತಾ, ಹೆಂಡತಿ ಮಾಡಿದ ತಿಂಡಿ ತಿನಿಸುಗಳನ್ನು ಸವಿಯುತ್ತಾ, ಮಳೆ ಸುರಿವ ಪರಿ ನೋಡುತ್ತಾ ಸುಖವನ್ನು ಆಲಿಸುತ್ತಿದ್ದರು.
ಹೀಗೊಂದು ದಿನ ಮುಂಗಾರಿನ ಚಿತ್ರಣ ಸವಿಯುತ್ತ ಕುಳಿತಿದ್ದ ಅಣ್ಣಯ್ಯನಿಗೆ ಸಪ್ಪೆ ಮುಖ ಹಾಕಿ ಕುಳಿತಿದ್ದ ರಮೇಶನನ್ನು ಕಂಡು ಕಸಿವಿಸಿಯಾಯಿತು, ಪ್ರಶ್ನಿಸಿದರು.
“ಯಾಕೋ ರಮೇಶ ಹೀಗೆ ಕೂತಿದ್ದಿ, ಬಾ ಜೋರು ಮಳೆ ಬರ್ತಾ ಉಂಟು ನೋಡಿ ಖುಷಿ ಪಡೋಣ”
“ಥೂ, ಹಾಳು ಮಳೆ ಬೆಳಗ್ಗಿಂದ ಹೂಯ್ತಾ ಉಂಟು, ನಂಗೆ ಆಟ ಆಡಲಿಕ್ಕೆ ಹೊರಗೆ ಹೋಗಲು ಅಮ್ಮ ಬಿಡ್ತಿಲ್ಲ ಹಾಳು ಮಳೆ ಸಾಯಲಿ” ಎಂದಿದ್ದ ರಮೇಶ.
ಅಣ್ಣಯ್ಯ ನಗುವಿನಿಂದ ರಮೇಶನನ್ನು ಕರೆದುಕೊಂಡು ವರಂಡಾದಲ್ಲಿ ನಿಲ್ಲಿಸಿ, ನೋಡು ರಮೇಶ ಈ ಮುಂಗಾರಿನ ಸೊಬಗಿನಲ್ಲಿ ನಿನ್ನ ಊರನ್ನು ನಿನ್ನ ಜಗತ್ತನ್ನು ನೋಡು. ಅದರ ಸೌಂದರ್ಯವನ್ನು ಆಲಿಸು. ಎಲ್ಲೂ ಸಿಗದ ಕಪ್ಪು ಹತ್ತಿಯ ಸಮೂಹದಂತೆ ಕಾಣುವ ದಟ್ಟನೆಯ ಮೋಡಗಳು, ತಾನು ಬಂದನೆಂದು ಹಾಜರಾತಿ ತಿಳಿಸಲು ಮಳೆ ಮಾಡುವ ಗುಡುಗಿನ ಆರ್ಭಟ, ಕಪ್ಪಾದ ವಾತಾವರಣಕ್ಕೆ ಬೆಳಕಿನ ಪರದೆ ಚೆಲ್ಲುವ ಮಿಂಚು, ಹಸಿರು ಗಿಡಗಳನ್ನು ಮರೆಮಾಚಲು ಸುರಿಯುವ ಮಳೆ ಹನಿಗಳು. ಈ ಚಿತ್ರಣಗಳನ್ನು ಕಂಡಾಗಲೇ ಮನುಷ್ಯ ಬದುಕಿದ್ದಾನೆಂಬ ಅನುಭವವಾಗುವುದು. ಮಳೆ ಎಂದರೆ ಕೆಲವರಿಗೆ ಸಂಭ್ರಮ, ಕೆಲವರಿಗೆ ಉಪದ್ರ, ಕೆಲವರಿಗೆ ಪ್ರೀತಿ, ಕೆಲವರಿಗೆ ನೆನಪು, ಇನ್ನೂ ಕೆಲವರಿಗೆ ಅದು ಜೀವನ. ಪ್ರಕೃತಿ ನಮಗಾಗಿ ಸೃಷ್ಟಿಸುವ ಸುಂದರ ದೃಶ್ಯ ಈ ಮಳೆ ಇದನ್ನು ಖುಷಿಯಿಂದ ಅನುಭವಿಸು. ಅಪ್ಪನ ಮಾತುಗಳು ರಮೇಶನ ಮನಸ್ಸನ್ನು ನಾಟಿತ್ತು ಅಂದಿನಿಂದ ರಮೇಶನ ದೃಷ್ಟಿಕೋನ ಬದಲಾಗಿತ್ತು ಅವನು ಮುಂಗಾರಿನ ಮಳೆಯನ್ನು ಸಂಭ್ರಮಿಸಲು ಶುರು ಮಾಡಿದ್ದ.
ರಮೇಶನ ಜೀವನದಲ್ಲಿ ಮುಂಗಾರಿನ ಮಳೆ ಜೊತೆ ಮಾಡಿದ್ದು ಅವನ ಹೆಂಡತಿ ವಸಂತಾಳನ್ನು. ಎದುರು ಮನೆಯಲ್ಲಿ ವಾಸವಿದ್ದ ವಸಂತ ಮಳೆ ಬಂದರೆ ತಾರಿಸಿಗೆ ಬಂದು ಕುಣಿಯುವ ಪರಿಯನ್ನೇ ನೋಡಿ ಅವಳಿಗೆ ಮನಸ್ಸೋ ತಿದ್ದ ರಮೇಶನಿಗೆ ಅವಳೊಂದಿಗೆ ಒಲವಾಗಿತ್ತು. ಈಗ ಅದೇ ಅವಳನ್ನು ಅವನ ಮಡದಿಯನ್ನಾಗಿ ಮಾಡಿದೆ.
ಮುಂಗಾರು ಮಳೆ ರಮೇಶನ ಜೀವನದಲ್ಲಿ ನೆನಪಿನ ಭಾಗವಾಗಿ ಉಳಿದಿದೆ, ಹೀಗೆ ಮಳೆ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ವಿಷಯದ ಭಾಗವಾಗಿಯೇ ಉಳಿದುಬಿಡುತ್ತದೆ. ಪ್ರಕೃತಿ ನಮಗಾಗಿ ಸೃಷ್ಟಿಸುವ ಈ ಸುಂದರ ಮುಂಗಾರಿನ ಸಮಯವನ್ನು ಕಣ್ತುಂಬುತ್ತಾ ಜೀವಿಸುವುದನ್ನು ನಾವು ರೂಢಿಸಿಕೊಳ್ಳಬೇಕು. ಅದನ್ನು ಸಂಭ್ರಮಿಸುವ ಪರಿಯನ್ನು ಕಲಿಯಬೇಕು.
ಇತ್ತೀಚಿನ ಕಾಮೆಂಟ್‌ಗಳು