ಕವನಗಳು

ಬಣ್ಣದ ಬುಗುರಿ

Dec 01, 2025
star 5.0  (42 ಓದು) share ಹಂಚಿಕೊಳ್ಳಿ

ದಿನದ ಪದ

ಬಣ್ಣದ ಬುಗುರಿ
ಕೈಯಲಿ ಹಿಡಿದು
ದಿಟ್ಟಿಸಿ ನೋಡಿದೆ
ಎಂತಹ ವಿಸ್ಮಯ

ಚಾಟಿಯ ಸುತ್ತುತ
ಬೀಸಲು ಅದನು
ಗಿರ್ರನೆ ತಿರುಗಿ
ಖುಷಿಯ ನಗುವು

ಸುತ್ತುತ ಸತತ
ಸಮಯ ಮುಗಿಯೆ
ಬೀಳುತ ಕೆಳಗೆ
ಅಂತ್ಯವ ಹಾಡಿತು

ಹೀಗೆಯೇ ಅಲ್ಲವೆ
ನಮ್ಮಯ ಜೀವನ
ದೇವರೆ ಚಾಟಿಯು
ನಾವೆಯೇ ಬುಗುರಿ

ಕೂಸಿಗೆ ಬಳಿವ
ಮುಗ್ಧತೆ ಬಿಳುಪು
ಬಾಲ್ಯದಿ ಹಚ್ಚುವ
ನಿಗೂಢ ಶಾಮಲ

ಪ್ರಾಯದಿ ಕೊಡುವ
ಕೇಸರಿ ಹುಮ್ಮಸ್ಸು
ಬೆಳೆದು ಮೆರೆಯೆ
ಸಮೃದ್ಧಿ ಹಸಿರು

ಬೀಳುವ ಸಮಯ
ಆಧ್ಯಾತ್ಮ ನೇರಳೆ
ದೇವರ ಲೀಲೆಯು
ಬಣ್ಣದ ಬದುಕು

ಆಡುತ ಬೀಳಲು
ಸಂತಸ ದುಃಖವು
ಜೊತೆಯೇ ಕೊಡುವ
ದೇವರು ನಮಗೆ

ಇದುವೇ ಸತ್ಯವು
ಮಾನವ ಕುಲವು
ದೇವರ ಆಟದಿ
ಬಣ್ಣದ ಬುಗುರಿ

- ಗಿರೀಶ್

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ