ಸಣ್ಣ ಕಥೆಗಳು
ಬೆಸುಗೆ
Jan 10, 2026
ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಬಿಡುವ ಯೋಚನೆಯನ್ನು ಮಾಡುತ್ತಾ ಮಲಗಿದ್ದಾಳೆ ದಿವ್ಯಾ. ಮರುದಿನ ಬೆಳಗ್ಗೆ ತನ್ನ ಪ್ರಿಯತಮ ಮನೀಷ್ ಊರ ದೇವಸ್ಥಾನಕ್ಕೆ ಬರುವೆನೆಂದು ಹೇಳಿದ್ದು ಅವಳಿಗೆ ಅತೀವ ಸಂತೋಷವನ್ನು ತಂದುಕೊಟ್ಟಿತ್ತು. ಅದಕ್ಕೆ ಕಾರಣ ಈ ಮೊದಲು ಆತನನ್ನು ಅವಳು ಮುಖತಃ ಭೇಟಿಯಾಗದೇ ಇದ್ದದ್ದು. ಮಗ್ಗುಲು ಬದಲಾಯಿಸಿ ಮಲಗಿದರೂ ದಿವ್ಯಾಳಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ತಮ್ಮಿಬ್ಬರೊಳಗೆ ಪ್ರೀತಿ ಹುಟ್ಟಿಕೊಂಡದ್ದು ಹೇಗೆ ಎನ್ನುವುದನ್ನು ಯೋಚಿಸುತ್ತಾ ಕಣ್ಣು ಮುಚ್ಚಿದಳು ಅವಳು. ನೆನಪುಗಳು ಅಲೆಅಲೆಯಾಗಿ ಕಣ್ಣಮುಂದೆ ತೇಲಿಬಂದವು.
“ದಿವ್ಯಾಳ ಗೆಳತಿ ಮಾಧುರಿ ಭರತನಾಟ್ಯ ಪ್ರವೀಣೆ. ಎಲ್ಲಿ ಕಾರ್ಯಕ್ರಮವಿದ್ದರೂ ತಾನೂ ಅವಳೊಂದಿಗೆ ಹೋಗುತ್ತಿದ್ದಳು ದಿವ್ಯಾ ವೀಕ್ಷಕಳಾಗಿ. ಅವರಿಬ್ಬರದ್ದು ಬಿಡಿಸಲಾಗದ ಬಂಧವೆಂಬಂತೆ ಬಿಡಿಸಲಾಗದ ಗೆಳೆತನ. ಬಾಲ್ಯದಿಂದಲೇ ಅದು ನಡೆದುಕೊಂಡು ಬಂದದ್ದೇ ಆಗಿದೆ. ನೋವು, ದುಃಖ, ನಲಿವು ಏನೇ ಇದ್ದರೂ ಪರಸ್ಪರ ಹಂಚಿಕೊಳ್ಳುತ್ತಿದ್ದರು ಇಬ್ಬರೂ. ಅವರಿಬ್ಬರ ಮಧ್ಯೆ ಯಾವುದೇ ಗುಟ್ಟು ಉಳಿದುಕೊಳ್ಳುತ್ತಿರಲಿಲ್ಲ.
ಅದೊಂದು ದಿನ ದೂರದ ಊರಿನಲ್ಲೊಂದು ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯವನ್ನೂ ಹಮ್ಮಿಕೊಂಡಿದ್ದರು. ಮಾಧುರಿಯನ್ನು ಭರತನಾಟ್ಯದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ಅವಳು ಆ ಕಾರ್ಯಕ್ರಮಕ್ಕೆ ಒಬ್ಬಳೇ ಹೋದಳು. ಕಾರಣಾಂತರಗಳಿಂದ ದಿವ್ಯಾಳಿಗೆ ಅಂದು ಜೊತೆಗೆ ಹೋಗುವುದಕ್ಕೆ ಸಾಧ್ಯವಾಗಿರಲಿಲ್ಲ.
ಮಾಧುರಿಯ ನೃತ್ಯದೊಂದಿಗೆ ವೇದಿಕೆಯಲ್ಲಿ ಜೊತೆಯಾದವರು ಅಂದು ಮನೀಷ್ ಎನ್ನುವ ಯುವಕನೊಬ್ಬ. ಯಾವುದೋ ಒಂದು ಕಥೆಯನ್ನಾಧರಿಸಿದ ನೃತ್ಯ ಅಂದಾಗಿತ್ತು. ಮನೀಷ್ ಬಹಳ ಚೆನ್ನಾಗಿ ನಾಟ್ಯವಾಡುತ್ತಿದ್ದನು. ಕಾರ್ಯಕ್ರಮ ಮುಗಿದ ಕೂಡಲೇ ಮನೀಷ್ ಮಾಧುರಿಯನ್ನು ಮಾತನಾಡಿಸಿದ್ದನು. ಕೆಲವೇ ಕ್ಷಣಗಳಲ್ಲಿ ಅವರಿಬ್ಬರೂ ಆತ್ಮೀಯರಾಗಿ ಬಿಟ್ಟರು.
ಆತ್ಮೀಯತೆ ಮೊಬೈಲ್ ಸಂಭಾಷಣೆಯವರೆಗೂ ಬಂದಿತ್ತು. ಆದರೆ ಅದು ಪರಿಶುದ್ಧ ಸ್ನೇಹವಷ್ಟೇ. ಪ್ರೀತಿಗೆ ಅಲ್ಲಿ ಅವಕಾಶವಿರಲಿಲ್ಲ. ಆ ಅವಕಾಶ ಒದಗಿ ಬಂದದ್ದು ಮಾತ್ರ ದಿವ್ಯಾಳ ಪಾಲಿಗೆ ಆಗಿತ್ತು. ಮನೀಷ್ ನ ವಿಷಯ ಮಾಧುರಿ ದಿವ್ಯಾಳಿಗೆ ಅಂದೇ ಹೇಳಿದ್ದಳು. ಮನೀಷ್ ದೂರದ ಊರಿನವನಾದ ಕಾರಣ ಮತ್ತೆಂದೂ ಮಾಧುರಿ ಅವನನ್ನು ಭೇಟಿಯಾಗಿರಲಿಲ್ಲ. ಮೊಬೈಲ್ ಸಂಭಾಷಣೆ ಮಾತ್ರ ನಿರಂತರವಿತ್ತು. ಅಂದೊಮ್ಮೆ ದಿವ್ಯಾ ಅವನೊಂದಿಗೆ ಮಾತನಾಡಿದ್ದಳು. ಮೊದಲ ಧ್ವನಿಗೇ ಮಾರು ಹೋದ ದಿವ್ಯಾಳ ಮನದಲ್ಲಿ ಅದೇನೋ ಹೇಳಲಾಗದ ತಳಮಳ. “ಮಾಧೂ, ನಿನ್ನ ಗೆಳೆಯ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ? ನಿಂಗ್ಯಾಕೆ ಅವರ ಮೇಲೆ ಪ್ರೀತಿ ಹುಟ್ಟಲಿಲ್ಲ?” ಎಂದಾಗ “ನಮ್ಮದು ಸ್ನೇಹ ಮಾತ್ರ. ಈಗೇನು ನಿಂಗೆ ಅವನನ್ನು ಪ್ರೀತಿಸಬೇಕು ಎಂದಾಗುತ್ತಿದೆಯೇ?’ ಎಂದು ಮರುಪ್ರಶ್ನೆ ಮಾಧುರಿ ಕೇಳಿದಾಗ “ಹೌದು ಕಣೇ” ಎಂದು ನಾಚುತ್ತಾ ಹೇಳಿದ್ದಳು ದಿವ್ಯಾ. “ಧ್ವನಿ ಮಾತ್ರ ಕೇಳಿದೆ. ಸರಿ, ಅಂಥಾದ್ದೇನು ಮಾತಾಡಿದ್ರಿ ಅಂತ? ಪ್ರೀತಿ ಹುಟ್ಟುವಂಥದ್ದು..?” “ಅದೆಲ್ಲ ನಿಂಗೆ ಗೊತ್ತಗಲ್ಲ ಕಣೇ. ಒಂದು ಕೆಲಸ ಮಾಡು. ನೀನು ಮನೀಷ್ ಅವರ ಫೇಸ್ಬುಕ್ ಖಾತೆಯ ಹೆಸರನ್ನು ಕೇಳಿ ಹೇಳು ನಂಗೆ. ಮಿಕ್ಕಿದ್ದು ನಾನು ನೋಡ್ಕೋತೀನಿ” ಅಂದಾಗ ಮಾಧುರಿ ದಿವ್ಯಾಳಿಗೆ ಸಹಾಯ ಮಾಡಿದ್ದಳು.
ಅದೇ ದಿನ ದಿವ್ಯಾ ಮನೀಷ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಅವನು ಅದನ್ನು ಸ್ವೀಕರಿಸಿದ. ಪ್ರತಿನಿತ್ಯ ಚಾಟಿಂಗ್ ಸಾಗುತ್ತಾ ಮೊಬೈಲ್ ನಂಬರ್ ಪಡೆದುಕೊಳ್ಳುವಷ್ಟು ಮುಂದುವರಿದರೂ ಮನೀಷ್ ಮಾಧುರಿಯ ಸ್ನೇಹವನ್ನು ಮಾತ್ರ ಕೈಬಿಟ್ಟಿರಲಿಲ್ಲ. ದಿವ್ಯಳೂ ಅದಕ್ಕೇನೂ ಹೇಳುತ್ತಿರಲಿಲ್ಲ. ದಿವ್ಯಾ ತನ್ನ ಪ್ರೀತಿಯ ವಿಷಯವನ್ನು ತಾನಾಗಿಯೇ ಮೊದಲು ಮನೀಷ್ ಗೆ ಪ್ರಸ್ತಾಪ ಮಾಡಿದಳು. ಮಾಧುರಿಯನ್ನು ಕಂಡಾಗ ಪ್ರೀತಿಯ ಭಾವನೆ ಅರಳದೇ ಇದ್ದ ಮನೀಷ್ ಗೆ ದಿವ್ಯಾಳ ಭಾವಚಿತ್ರ ನೋಡಿ ಮತ್ತು ಅವಳೊಂದಿಗೆ ನಿತ್ಯವೂ ಮಾತನಾಡಿ ಪ್ರೀತಿ ತನಗರಿವಿಲ್ಲದೆ ಚಿಗುರತೊಡಗಿತ್ತು. ದಿವ್ಯಾಳೇ ಅದನ್ನು ಪ್ರಸ್ತಾಪ ಮಾಡಿದಾಗ ಅವನು ಆಗಬಹುದು ಎಂದು ಸಮ್ಮತಿ ಸೂಚಿಸಿದ್ದನು. ಗೆಳತಿ ಮಾಧುರಿ ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದಳೆಂದರೆ ತಪ್ಪಾಗಲಾರದು. ಊರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭರತನಾಟ್ಯ ಕಾರ್ಯಕ್ರಮದಲ್ಲಿ ದೂರದೂರಿನ ಮನೀಷ್ ಭಾಗವಹಿಸುವುದಿತ್ತು. ಅವನನ್ನು ಕರೆಯುವಂತೆ ಮಾಧುರಿಯೇ ದೇವಸ್ಥಾನದ ಪದಾಧಿಕಾರಿಗಳಲ್ಲಿ ಮಾತನಾಡಿದ್ದಳು ಗೆಳತಿ ಗೆಳೆಯನನ್ನು ಒಂದುಗೂಡಿಸಲು. ಆ ವಿಷಯ ಇಬ್ಬರಿಗೂ ತಿಳಿದಿರಲಿಲ್ಲ.”
“ದಿವ್ಯಾ ಎದ್ದೇಳೆ. ಗಂಟೆ ಆರಾಯ್ತು. ದೇವಸ್ಥಾನಕ್ಕೆ ಹೋಗೋದಿಲ್ವಾ ನೀನು? ನಿನ್ನ ಗೆಳತಿಯ ಭರತನಾಟ್ಯ ಇದೆಯಲ್ಲ?:” ಅಮ್ಮ ಕರೆದಾಗ ನೆನಪಿನ ಲೋಕದಿಂದ ವಾಸ್ತವದಾಚೆಗೆ ಜಾರಿದ್ದಳು ದಿವ್ಯಾ.
ಸ್ನಾನ ಮುಗಿಸಿ ತಿಂಡಿ ತಿಂದು ಗೆಳತಿಯ ಮನೆಗೆ ಹೋದಳು ದಿವ್ಯಾ. ನಿದಿರೆಯಿಲ್ಲದ ಅವಳ ಕಣ್ಣು ಕೆಂಪು ಕೆಂಪಾಗಿತ್ತು. ಮಾಧುರಿ ನೋಡಿದವಳೇ “ಏನೇ ನಿನ್ನೆ ರಾತ್ರಿ ನಿದ್ದೆ ಮಾಡಿಲ್ವಾ? ಅಲ್ಲಾ ಏನಾದರೂ ವಿಶೇಷ ಇದೆಯಾ?” ಅಂದಾಗ “ಮಾಧೂ ಇವತ್ತು ನಿನ್ನ ಫ್ರೆಂಡ್ ನನ್ನ ಕುಚುಕು ದೇವಸ್ಥಾನಕ್ಕೆ ಬರುವ ವಿಷಯ ನಿಂಗೆ ಗೊತ್ತಿಲ್ವಾ ನಿಜ ಹೇಳು” ಅಂದಾಗ “ಗೊತ್ತಿಲ್ಲದೆ ಏನು? ನಂಗೂ ಅವ್ನಿಗೂ ಭರತನಾಟ್ಯ ಇದೆ ಕಣೆ” ಎಂದು ಅವಳು ಹೇಳಿದ್ದಳು. “ಓಹೋ ಹಾಗಾದರೆ ಇದೆಲ್ಲಾ ನಿಂದೇನಾ ಪ್ಲ್ಯಾನ್?” ಎಂದಾಗ “ಅಯ್ಯೋ ನಂದಲ್ಲಪ್ಪ. ನಂಗೇನೂ ಗೊತ್ತಿಲ್ಲಪ್ಪ” ಎಂದು ಜೋರು ನಕ್ಕಿದ್ದಳು ಮಾಧುರಿ. “ನಂಗೆಲ್ಲ ಗೊತ್ತು. ನೀನೆಷ್ಟು ಒಳ್ಳೆಯವಳು ಕಣೇ. ನಾನೂ ಮನೀಷ್ ಇಬ್ಬರೂ ಒಂದಾಗ್ಬೇಕು ಅಂತ ನಿನ್ನಾಸೆ ಅಲ್ವಾ” ಎನ್ನುತ್ತಾ ಮಾಧುರಿಯನ್ನು ತಬ್ಬಿದ್ದಳು ದಿವ್ಯಾ. “ಹೌದು. ನೀವಿಬ್ಬರೂ ಒಂದುಗೂಡಿದ್ರೆ ಅದೇ ನನ್ನ ಸಂತೋಷ. ನನ್ನ ಗೆಳತಿ ನನ್ನ ಗೆಳೆಯ ಇಬ್ಬರೂ ನನ್ನ ಆತ್ಮೀಯರಾಗಿಯೇ ಇರ್ತೀರಾ ಅಲ್ವಾ” ಎಂದು ಮಾಧುರಿ ಕೇಳಿದ್ದಳು. “ನನ್ನ ಉಸಿರಿರುವವರೆಗೂ” ದಿವ್ಯಾಳ ಉತ್ತರ ಸಿದ್ಧವಾಗಿತ್ತು.
ಕೊನೆಗೂ ದೇವಸ್ಥಾನಕ್ಕೆ ಬಂದಿದ್ದರು ಇಬ್ಬರು ಜೊತೆಯಾಗಿ. ಮನೀಷ್ ಅದಾಗಲೇ ಬಂದು ದಿವ್ಯಾಳಿಗಾಗಿ ಕಾಯುತ್ತಾ ನಿಂತಿದ್ದನು. ಮಾಧುರಿ ದಿವ್ಯಾಳನ್ನು ಮನೀಷ್ ಗೆ ಪರಿಚಯಿಸಿ ಇಲ್ಲೇ ಮಾತಾಡ್ತಾ ಇರಿ ಎಂದು ಅವಳೆಲ್ಲೋ ಹೋದಳು ಒಂದಷ್ಟು ದೂರಕ್ಕೆ. ಪ್ರೇಮಿಗಳ ಮಧ್ಯೆ ಅವಳಲ್ಲಿರುವುದು ಮಾಧುರಿಗೆ ಇಷ್ಟವಿಲ್ಲವಾಗಿತ್ತು.
ಪುನಃ ಅವರಿದ್ದೆಡೆ ಬರುವಷ್ಟರಲ್ಲಿ ಇಬ್ಬರೂ ನಗುತ್ತಾ ಮಾತನಾಡುವುದನ್ನು ಕಂಡು ಮಾಧುರಿ ಕಣ್ಣುತುಂಬಿಕೊಂಡಳು. ಕೆಲವೇ ದಿನಗಳಲ್ಲಿ ಮನೀಷ್ ತನ್ನ ಮನೆಯಲ್ಲಿ ಪ್ರೀತಿಯ ವಿಷಯ ಪ್ರಸ್ತಾಪಿಸಿ ಅವರು ಒಪ್ಪಿಕೊಂಡಾಗ ದಿವ್ಯಾಳನ್ನು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸಿದ್ದನು. ಮಾಧುರಿಯ ಸ್ನೇಹದ ಸೇತುವೆಯಲ್ಲಿ ದಾಟಿ ಬಂದವನಿಗೆ ದಿವ್ಯಾಳ ಪ್ರೀತಿಯ ಸಿಂಚನ ದೊರಕಿತ್ತು. ಮದುವೆಯಾದರೂ ಅವರೊಳಗಿನ ಗೆಳೆತನವೆಂಬ ಬೆಲೆ ಕಟ್ಟಲಾಗದ ಅಮೂಲ್ಯ ಬಾಂಧವ್ಯದ ಬೆಸುಗೆಯ ಕೊಂಡಿ ಕಳಚದೆಯೇ ಬಿಗಿಯಾಗಿ ಬೆಸೆದುಕೊಂಡಿತ್ತು.
✍️ಲತಾ ಧನು ಸೀತಾಂಗೋಳಿ
ಇತ್ತೀಚಿನ ಕಾಮೆಂಟ್‌ಗಳು