ಆರೋಗ್ಯ ಮತ್ತು ಫಿಟ್ನೆಸ್

ಕ್ಯಾನ್ಸರ್

Feb 04, 2026

ಮಾರಕ ಕಾಯಿಲೆ



ಇಂದು ಕ್ಯಾನ್ಸರ್ ದಿನಾಚರಣೆ. ಕ್ಯಾನ್ಸರ್ ಎನ್ನುವುದು ಕೇಳಿದೊಡನೆ ಭಯ ಹುಟ್ಟಿಸುವ ಪದ. ಇದು ಕೇವಲ ಒಂದು ರೋಗವಲ್ಲ, ವ್ಯಕ್ತಿಯ ದೇಹ, ಮನಸ್ಸು ಹಾಗೂ ಕುಟುಂಬದ ಜೀವನವನ್ನೇ ಕದಲಿಸುವ ದೊಡ್ಡ ಸಂಕಟ. ದೇಹದ ಕೆಲವು ಕೋಶಗಳು ನಿಯಂತ್ರಣ ತಪ್ಪಿ ಅಸಹಜವಾಗಿ ಬೆಳೆಯುತ್ತಾ, ದೇಹದ ಆರೋಗ್ಯಕರ ಭಾಗಗಳನ್ನು ನಾಶಪಡಿಸುವುದೇ ಕ್ಯಾನ್ಸರ್.
ಕ್ಯಾನ್ಸರ್ ರೋಗಿಯಿಂದ ದೇಹದ ಶಕ್ತಿಯನ್ನಷ್ಟೇ ಅಲ್ಲ, ಆತ್ಮಸ್ಥೈರ್ಯವನ್ನೂ ಕಸಿದುಕೊಳ್ಳುತ್ತದೆ. ನಿರಂತರ ನೋವು, ದಣಿವು, ತೂಕ ಇಳಿಕೆ, ಊಟಕ್ಕೆ ಆಸಕ್ತಿ ಕಡಿಮೆಯಾಗುವುದು, ಕೂದಲು ಉದುರುವುದು, ನಿದ್ರಾಹೀನತೆ ಇಂತಹ ತೊಂದರೆಗಳು ರೋಗಿಯನ್ನು ಕಾಡುತ್ತವೆ. ಇದರ ಜೊತೆಗೆ “ನಾನು ಬದುಕುತ್ತೇನಾ?” ಎಂಬ ಭಯ, ಆತಂಕ, ಒಂಟಿತನದ ಭಾವನೆ ರೋಗಿಯ ಮನಸ್ಸನ್ನು ಇನ್ನಷ್ಟು ನೋಯಿಸುತ್ತದೆ. ಕುಟುಂಬದವರು ಕೂಡ ಈ ನೋವನ್ನು ಮೌನವಾಗಿ ಹೊತ್ತುಕೊಂಡು ಬದುಕಬೇಕಾಗುತ್ತದೆ.
ಆದರೆ ಕ್ಯಾನ್ಸರ್ ಎಂಬುದೇ ಅಂತ್ಯ ಅಲ್ಲ. ಇಂದಿನ ವೈದ್ಯಕೀಯ ಕ್ಷೇತ್ರ ಬಹಳಷ್ಟು ಮುನ್ನಡೆಗೊಂಡಿದೆ. ಕ್ಯಾನ್ಸರ್ ಅನ್ನು ಆರಂಭದ ಹಂತದಲ್ಲೇ ಪತ್ತೆ ಹಚ್ಚಿದರೆ, ಚಿಕಿತ್ಸೆ ಮೂಲಕ ಅದನ್ನು ಜಯಿಸುವ ಸಾಧ್ಯತೆ ಹೆಚ್ಚಿದೆ. ಅದಕ್ಕಾಗಿ ಅರಿವು ಮತ್ತು ಎಚ್ಚರಿಕೆ ಅತ್ಯಂತ ಮುಖ್ಯ.
ನಮ್ಮ ದೈನಂದಿನ ಜೀವನಶೈಲಿಯೇ ಹಲವಾರು ಬಾರಿ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತದೆ. ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ಜಂಕ್ ಫುಡ್ ಸೇವನೆ, ವ್ಯಾಯಾಮದ ಕೊರತೆ, ಮಾಲಿನ್ಯ, ಅತಿಯಾದ ಒತ್ತಡ ಇವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಜೊತೆಗೆ ದೇಹದ ಸಣ್ಣ ಲಕ್ಷಣಗಳನ್ನು ನಿರ್ಲಕ್ಷಿಸುವುದು ಕೂಡ ಅಪಾಯಕಾರಿಯಾಗಿದೆ.
ಕ್ಯಾನ್ಸರ್ ತಡೆಗಟ್ಟುವುದು ನಮ್ಮ ಕೈಯಲ್ಲೇ ಇದೆ.
ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಸೇವನೆ, ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದು, ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು, ಪ್ರತಿದಿನ ಸ್ವಲ್ಪವಾದರೂ ವ್ಯಾಯಾಮ ಮಾಡುವುದು, ಮನಸ್ಸಿಗೆ ಶಾಂತಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಅಗತ್ಯ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗವನ್ನು ಆರಂಭದಲ್ಲೇ ಗುರುತಿಸಬಹುದು.
ಇಂದು ಕ್ಯಾನ್ಸರ್ ದಿನಾಚರಣೆಯಂದು ನಾವು ಒಂದು ನಿರ್ಧಾರ ಮಾಡೋಣ.
ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳೋಣ. ಕ್ಯಾನ್ಸರ್ ರೋಗಿಗಳ ಬಗ್ಗೆ ಕರುಣೆ, ಪ್ರೀತಿ ಮತ್ತು ಬೆಂಬಲ ತೋರಿಸೋಣ. ಅವರಿಗೆ ಭಯವಲ್ಲ, ಧೈರ್ಯ ತುಂಬೋಣ. ಅರಿವೇ ಅತ್ಯುತ್ತಮ ಔಷಧಿ ಎಂಬುದನ್ನು ಎಲ್ಲರಿಗೂ ತಿಳಿಸೋಣ.

 ಆರೋಗ್ಯ ಇರುವವರೆಗೂ ಬದುಕು ಸುಂದರ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

ಶೈಲಾ ಭಟ್ಟ 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ