ಸ್ಪೂರ್ತಿದಾಯಕ

ಸೋಲಲ್ಲೂ ಕೈಹಿಡಿದವರು

Jan 11, 2026




ಸೋಲಲ್ಲೂ ಕೈಹಿಡಿದವರು
            ಶ್ರೇಯಾ ಎಂಬ ಹೆಣ್ಣುಮಗಳು ಚಿಕ್ಕ ನಗರವೊಂದರ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವಳು. ತಂದೆ - ತಾಯಿ ಇಬ್ಬರೂ ಶಿಕ್ಷಕರು. ಮಗಳ ಮೇಲೆ ಅವರಿಗೆ ಅಪಾರ ಮಮತೆ . ಅವಳ ಅಜ್ಜಿಗೆ ತನ್ನ ಕಣ್ಮುಂದೆ ಮೊಮ್ಮಗಳ ಮದುವೆ ನೋಡಬೇಕೆಂಬ ಆಸೆ.“ಹೆಣ್ಣುಮಕ್ಕಳಿಗೆ ಎಷ್ಟು ಓದಿದರೂ ಕೊನೆಗೆ ಮದುವೆಯೇ” ಎಂಬ ಮಾತುಗಳು ಅವಳ ಬದುಕಿನ ಸುತ್ತಲೂ ಸದಾ ಕೇಳಿಸುತ್ತಿದ್ದವು.

           ಆದರೆ ಶ್ರೇಯಾಳಿಗೆ ಓದಿನ ಮೇಲೆ ಅಪಾರ ಆಸಕ್ತಿ.  ಉನ್ನತ ಅಧಿಕಾರಿಯಾಗಬೇಕು  ಎಂಬ ಕನಸು ಅವಳದ್ದು. ಮನೆಯಲ್ಲಿ ಎಲ್ಲರೂ ಅವಳ ಕನಸಿಗೆ ಮೌನವಾಗಿ ಬೆಂಬಲ ನೀಡುತ್ತಿದ್ದರು. “ನೀನು ಓದು, ನಿನ್ನ ಕಾಲ ಮೇಲೆ ನಿಂತು ಬದುಕು” ಎಂದು ಯಾವಾಗಲೂ ಹೇಳುತ್ತಿದ್ದರು.
ಬಿ ಎಸ್ಸಿ ಪದವಿ ಮುಗಿಸಿದ ನಂತರ ಎಂ ಎಸ್ ಸಿ (ರಸಾಯನಶಾಸ್ತ್ರ) ಪದವಿ ಪಡೆಯುವ ಆಸಕ್ತಿಯಿಂದ ತನ್ನ ಗೆಳತಿಯರಾದ ರಕ್ಷಿತಾ ,ಕಾವ್ಯ ಅನುಷಾ ಮತ್ತು ಮಾನಸರೊಂದಿಗೆ ಪ್ರತಿಷ್ಠಿತ ಕಾಲೇಜಿಗೆ ದಾಖಲಾದಳು. ತಾನೊಂದು ಬಗೆದರೆ ದೈವ ಒಂದು ಬಗೆಯಿತು ಎಂಬ ನಾಣ್ಣುಡಿಯಂತೆ ಶ್ರೇಯಾಳ ಬದುಕಿನಲ್ಲಿ ವಾಳು ನಿರೀಕ್ಷಿಸದೆ ಇದ್ದ ಘಟನೆಯೊಂದು ನಡೆಯಿತು. ಅವಳಿಗೆ ಪದೇಪದೇ ಮಂಡಿ ನೋವು ಬರುತ್ತಿತ್ತು. ಕಾಲೇಜಿನ ಪ್ರಯೋಗಾಲಯದಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ ಆಕೆಯ ಮಂಡಿಯ ಲಿಗಮೆಂಟ್ ಹರಿದಿದೆ. ಸರ್ಜರಿ ಮಾಡಲೇಬೇಕು ಎಂದರು. ಅವಳಿಗೆ ಮತ್ತು ಆಕೆಯ ತಾಯಿ ತಂದೆಯರಿಗೆ ನಿಜಕ್ಕೂ ಶಾಕ್ ಆಯಿತು. ಅನಿವಾರ್ಯವಾಗಿ ಸರ್ಜರಿ ಮಾಡಿಸಬೇಕಾಯಿತು. ಬಳಿಕ ಚೇತರಿಸಿಕೊಳ್ಳಲು ಮೂರು ನಾಲ್ಕು ತಿಂಗಳು ಸಮಯ ನಷ್ಟವಾಯಿತು. ಹೀಗಾಗಿ ಅವಳಿಗೆ ಕಾಲೇಜಿನಲ್ಲಿ ಸರಾಸರಿ ಹಾಜರಾತಿ ಕೊರತೆ ಉಂಟಾಯಿತು. ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಸಿಗಲಿಲ್ಲ.ಈ ಸಮಯದಲ್ಲಿ ಆಕೆ ಬಹಳಷ್ಟು ನೊಂದುಕೊಂಡಳು. ಆಕೆಯ ಗೆಳತಿಯರೆಲ್ಲ ಎಂ ಎಸ್ ಸಿ ಪೂರ್ಣಗೊಳಿಸಿದರು .ಈಕೆಗೆ ತುಂಬಾ ನೋವಾಯಿತು. ಕೊನೆಗೂ ಹಠ ಬಿಡದೆ ತನ್ನ ಅಧ್ಯಾಪಕಿಯವರ ಸಲಹೆ ಮೇರೆಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಸಿ ಪ್ರಾಣಿಶಾಸ್ತ್ರ ವಿಷಯದಲ್ಲಿ ರಾಂಕ್ ಪಡೆದು ಉತ್ತೀರ್ಣಳಾದಳು.
            
           ಆಕೆಯ ಗೆಳತಿಯರೆಲ್ಲ ಈಗಾಗಲೇ ಹಲವು ಕೆಲಸಗಳಿಗೆ ಸೇರಿಕೊಂಡಿದ್ದರು. ಶ್ರೇಯಾ ಯುಪಿಎಸ್ಸಿ , ಕೆ ಸೆಟ್, ಎಸ್ ಡಿ ಎ  ಎಫ್ ಡಿ ಎ, ಪಿ ಡಿ ಓ ,ಕೆಎಎಸ್ .. ಇನ್ನು ಬೇರೆ ಬೇರೆ ಪರೀಕ್ಷೆಗೆ ತಯಾರಾಗತೊಡಗಿದಳು. ಪರೀಕ್ಷೆಗಳಿಗೆ ತಕ್ಕಮಟ್ಟಿಗೆ ತಯಾರಾದಳು. ಬೆಳಿಗ್ಗೆ -ರಾತ್ರಿ ಪರಿವೇ ಇಲ್ಲದೆ ಓದುತ್ತಿದ್ದಳು. ಸ್ಟಡಿ ಸೆಂಟರ್ ನಲ್ಲಿ ಓದು, ರಾತ್ರಿ ಮನೆಯಲ್ಲಿ ಓದು ... ಹೀಗೆ ಓದುವುದೇ ಅವಳ ಉಸಿರಾಗಿತ್ತು. ಅವಳ ದಿನಚರಿ ಕಠಿಣವಾಗಿತ್ತು. ರಾತ್ರಿ ಎಲ್ಲಾ ಎಚ್ಚರವಾಗಿದ್ದು ಓದಬೇಡ ಎಂದು ಅವಳಿಗೆ ಮನೆಯಲ್ಲಿ ಎಲ್ಲರೂ ಹೇಳುತ್ತಿದ್ದರು. ಆದರೂ ಹಠ ಬಿಡದೆ ಓದುತ್ತಿದ್ದಳು.ಮೊದಲ ಬಾರಿ ಪರೀಕ್ಷೆ ಬರೆಯುವಾಗ ಅವಳಿಗೆ ಬಹಳ ನಂಬಿಕೆ ಇತ್ತು. ಆದರೆ ಫಲಿತಾಂಶ ಬಂದಾಗ ಅವಳು ಅಸಫಲಳಾಗಿದ್ದಳು.ಆ ದಿನ ಅವಳು ತುಂಬಾ ಅತ್ತಳು.
“ನನ್ನಿಂದ ಆಗುವುದಿಲ್ಲವೇ?” ಎಂಬ ಅನುಮಾನ ಮೊದಲ ಬಾರಿ ಅವಳ ಮನಸ್ಸಿಗೆ ಬಂದಿತು. ನಾಲ್ಕಾರು ಪರೀಕ್ಷೆಗಳಿಗೆ ಹಾಜರಾದಳು, ಆದರೆ ಸಫಲತೆ ಸಿಗಲಿಲ್ಲ.ಸಂಬಂಧಿಕರು ಹೇಳಿದ ಮಾತುಗಳು ಅವಳನ್ನು ಇನ್ನಷ್ಟು ಕುಗ್ಗಿಸಿತು.
“ಇನ್ನೆಷ್ಟು ವರ್ಷ ಓದು? ಮದುವೆ ಮಾಡಿಬಿಡಿ” ಎಂದು ಕೆಲವರು ತಂದೆಗೆ ಸಲಹೆ ನೀಡಿದರು.
ತಂದೆಯೂ ಒಂದು ಕ್ಷಣ ಗೊಂದಲಕ್ಕೆ ಒಳಗಾದರು. ಆದರೆ ಅವರು ಮಗಳಿಗೆ ಹೇಳಿದರು —
" ಕೆಲವು ಪರೀಕ್ಷೆಗಳಲ್ಲಿ ನೀನು ಸೋತರೆ ಅದು ಖಂಡಿತವಾಗಿಯೂ ಸೋಲಲ್ಲ. ಆದರೆ ನೀನು ನಿನ್ನ ಗೆಲ್ಲುವ ಕನಸು ಬಿಟ್ಟರೆ ಅದು ನಿಜವಾದ ಸೋಲು.”
ಅದು ಶ್ರೇಯಾ ಬದುಕಿನಲ್ಲಿ ದೊಡ್ಡ ತಿರುವು ತಂದ ಮಾತು.ಮತ್ತೆ ಅವಳು ಓದಲು ಆರಂಭಿಸಿದಳು. ಆದರೆ ಎರಡನೇ ಬಾರಿ ಕೂಡ ಅವಳಿಗೆ ಯಶಸ್ಸು ಸಿಗಲಿಲ್ಲ. ಈ ಬಾರಿ ಅವಳು ಸಂಪೂರ್ಣ ಕುಸಿದಳು. ಮನೆಯೊಳಗೆ ಮೌನ ಆವರಿಸಿತು. ಅವಳು ಯಾರೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದಳು. 
               
            ಈ ನಡುವೆ ಗೆಳತಿಯರೊಂದಿಗೆ ಶ್ರೇಯಾ ಟ್ರಿಪ್ ಹೋಗಿ ಬಂದಳು. ಅವರೆಲ್ಲರೂ ಸಹಜ ಆತ್ಮವಿಶ್ವಾಸದಿಂದ ಇದ್ದರು. ಆದರೆ ಆ ಸಂತೋಷ ಆಕೆಗೆ ಶಾಶ್ವತವಾಗಿರಲಿಲ್ಲ. ಗೆಳತಿಯರ ಸಂತೋಷಕ್ಕೆ ಅವರು ಮಾಡುತ್ತಿದ್ದ ಉದ್ಯೋಗವೇ ಅದಕ್ಕೆ ಕಾರಣವಾಗಿತ್ತು.

              ಒಂದು ದಿನ ಮನೆಯಲ್ಲಿ ಎಲ್ಲರೂ ಚರ್ಚೆ ನಡೆಸಿದರು. ಒಳ್ಳೆಯ ಸಂಬಂಧ ಕೂಡಿಬಂದರೆ ಮದುವೆ ಮಾಡಿಬಿಡೋಣ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಕೆಲವು ಸಂಬಂಧಗಳು ಸಹ ಬಂದವು. ಶ್ರೇಯಾಗೆ ಮುಜುಗರ. ಉದ್ಯೋಗವಿಲ್ಲದಿದ್ದರೆ ಉತ್ತಮ ಸಂಬಂಧಗಳು ಕೈ ಹಿಡಿಯುವುದು ಅಪರೂಪ ಎಂಬುದು ಅವಳ ತಂದೆಯ ಭಾವನೆ.  ಶ್ರೇಯಾಳ ಸ್ಥಿತಿಯನ್ನು ತಿಳಿದು ಅವರು ಅವಳೊಂದಿಗೆ ದೀರ್ಘವಾಗಿ ಮಾತನಾಡಿದರು.
“ಸಮಾಜವು ಹೆಣ್ಣು ಮಕ್ಕಳಿಗೆ ಯಶಸ್ಸಿಗಿಂತ ಸಹನೆ ಹೆಚ್ಚು ಬೇಕು ಎಂದು ಕಲಿಸುತ್ತದೆ. ಆದರೆ ನಿಜವಾದ ಸಹನೆ ಎಂದರೆ ಕನಸನ್ನು ಬಿಡದೆ ಮುಂದುವರಿಯುವುದು.”
           ಆ ಮಾತುಗಳು ಶ್ರೇಯಾಳ ಮನಸ್ಸಿನಲ್ಲಿ ಹೊಸ ಧೈರ್ಯ ತುಂಬಿದವು.ಅವಳ ತಂದೆ ಅವಳಿಗೆ ಓದುವ ರೀತಿ ಬದಲಾಯಿಸಲು ಸಲಹೆ ನೀಡಿದರು. ಅವಳ ಬಲ ಮತ್ತು ದುರ್ಬಲತೆಗಳನ್ನು ಗುರುತಿಸಿದರು. ಪ್ರತಿದಿನ ಸ್ವಲ್ಪ ಓದಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದರು. ಮೊಬೈಲ್ ಬಳಕೆ ಮತ್ತು ಗೆಳತಿಯರ ಒಡನಾಟ ಸಾಧನೆಯ ಹಾದಿಯಲ್ಲಿ ಆದಷ್ಟು ಮಿತವಾಗಿರಲಿ .ನಿನ್ನ ಜೀವನ ನಿನಗೆ ಮುಖ್ಯ. ಸಾಧನೆ ಮಾತ್ರ ನಿನ್ನ ಉಸಿರಾಗಿರಲಿ ಎಂಬ ತಂದೆಯ ಮಾತು, ತಾಯಿಯ ಬೆಂಬಲ, ಅಜ್ಜಿ ಆಶೀರ್ವಾದ, ಚಿಕ್ಕಪ್ಪ ಚಿಕ್ಕಮ್ಮಂದಿರ ಶುಭ ಹಾರೈಕೆ ಅವಳಿಗೆ ಬೆಂಬಲವಾಗಿತ್ತು.“ನೀನು ಸೋತ ದಿನ ನಾವು ನಿನ್ನ ಕೈ ಬಿಡಲ್ಲ” ಎಂದು ಹೇಳಿದರು. 

           ಅವಳು ಈಗ ಪೂರ್ಣ ಆಸಕ್ತಿಯಿಂದ ಓದಿನ ವಿಚಾರದಲ್ಲಿ ಆಗುತ್ತಿದ್ದ ತನ್ನಲ್ಲಿನ ತಪ್ಪುಗಳನ್ನು ಗುರುತಿಸಿಕೊಂಡು ಅದನ್ನು ಸ್ವತಃ ತಿದ್ದಿಕೊಂಡಳು. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಲು ಶುರು ಮಾಡಿದಳು. ಯಾವುದೇ ಮಾನಸಿಕ ಒತ್ತಡಗಳನ್ನು ತೆಗೆದುಕೊಳ್ಳದೆ ಸಾಧನೆ ಒಂದೇ ತನ್ನ ಗುರಿ ಎಂದು ನಿರ್ಧಾರ ಮಾಡಿದಳು. ಈ ನಡುವೆ ಬಿ ಇಡಿ ಪದವಿಯಲ್ಲಿಯೂ ಸಹ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವಾಗ ಶ್ರೇಯಾ ಬೇರೆಯವಳಾಗಿದ್ದಳು. ಫಲಿತಾಂಶದ ಭಯಕ್ಕಿಂತ ಕಲಿಕೆಯ ಸಂತೋಷ ಅವಳಲ್ಲಿ ಹೆಚ್ಚಿತ್ತು. ಅವಳು ತನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಳು. ಪರೀಕ್ಷೆ ಮುಗಿದ ಮೇಲೆ ಫಲಿತಾಂಶ ಬರುವವರೆಗೂ ಅವಳು ಪಿಯು ಕಾಲೇಜ್ ಒಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡತೊಡಗಿದಳು. ಮಕ್ಕಳೊಂದಿಗೆ ಸಮಯ ಕಳೆಯುವುದು ಅವಳ ಕನಸಿಗೆ ಇನ್ನಷ್ಟು ಬಲ ನೀಡಿತು. ಫಲಿತಾಂಶ ಪ್ರಕಟವಾದ ದಿನ ಅವಳು ಉನ್ನತ ಅಧಿಕಾರಿಯಾಗಿ ಅರ್ಹತೆ ಪಡೆದು ಸಾಮಾನ್ಯ ವಿಭಾಗದಲ್ಲಿ ಆಯ್ಕೆ ಆಗಿದ್ದಳು.ಆ ಕ್ಷಣದಲ್ಲಿ ಅವಳು ಜೋರಾಗಿ ಕೂಗಲಿಲ್ಲ. ಮೌನವಾಗಿ ತಾಯಿ-ತಂದೆಯ ಕೈ ಹಿಡಿದು ಕಣ್ಣೀರಿಟ್ಟಳು. ಅದು ಸೋಲಿನ ಕಣ್ಣೀರು ಅಲ್ಲ — ಗೆಲುವಿನ ಕೃತಜ್ಞತೆ.
ಅವಳು ಅರಿತುಕೊಂಡಳು —
ಈ ಯಶಸ್ಸು ತನ್ನೊಬ್ಬಳದ್ದಲ್ಲ.
ತನ್ನ ತಾಯಿ ,ತಂದೆ, ಅಜ್ಜಿ ,ಚಿಕ್ಕಪ್ಪ ,ಚಿಕ್ಕಮ್ಮ— ಸೋಲಿನ ಸಮಯದಲ್ಲಿ ಕೈಹಿಡಿದವರು ಎಲ್ಲರೂ ಈ ಗೆಲುವಿನ ಭಾಗ.

            ನೇಮಕಾತಿಯ ಆದೇಶ ಸರ್ಕಾರದಿಂದ ಬರುವುದು ತಡವಾಯಿತು. ದಾಖಲೆಗಳ ಪರಿಶೀಲನೆ, ತಾತ್ಕಾಲಿಕ ಆಯ್ಕೆ ಪಟ್ಟಿ ,ಅಂತಿಮ ಆಯ್ಕೆ ಪಟ್ಟಿ ನೇಮಕಾತಿ ಆದೇಶ ವಿತರಣೆ.. ಹೀಗೆ ಕೆಲವು ತಿಂಗಳುಗಳು ಕಾಯಲೇ ಬೇಕಾಯಿತು. ಅವಳ ಕಾಲೇಜಿನಲ್ಲಿ ಒಂದು ಹುಡುಗಿ ಗಣಿತದಲ್ಲಿ ಹಿಂದುಳಿದಿದ್ದಳು. ಎಲ್ಲರೂ ಆ ಮಗುವನ್ನು ನಿರ್ಲಕ್ಷಿಸುತ್ತಿದ್ದರು.
ಒಂದು ದಿನ ಶ್ರೇಯಾ ಆ ಹುಡುಗಿಯ ಕೈ ಹಿಡಿದು ಹೇಳಿದಳು —
“ನೀನು ಸೋತಿದ್ದೀಯೆ, ಆದರೆ ನಿನ್ನ ಕಥೆ ಇಲ್ಲಿ ಮುಗಿಯಲ್ಲ.”
ಆ ಕ್ಷಣದಲ್ಲಿ ಶ್ರೇಯಾಳಿಗೆ ತನ್ನ ಜೀವನವೇ ನೆನಪಾಯಿತು.
ಅವಳು ತನ್ನನ್ನು ತಾನು ಅರಿತುಕೊಂಡಳು —
ಸೋಲಲ್ಲೂ ಕೈಹಿಡಿದವರು ಇದ್ದರೆ,ಮಹಿಳೆಯ ಬದುಕು ಕೇವಲ ಉಳಿಯುವುದಿಲ್ಲ; ಬೆಳೆಯುತ್ತದೆ.ಸೋಲು ಜೀವನದ ಅಂತ್ಯವಲ್ಲ, ಹೊಸ ಆರಂಭ.ಮಹಿಳೆಯ ಕನಸುಗಳಿಗೆ ಬೆಂಬಲ ಅಗತ್ಯತಂದೆ -ತಾಯಿಯ ನಂಬಿಕೆ ದೊಡ್ಡ ಶಕ್ತಿ. ಸ್ವ-ಅರಿವು ,ಉತ್ತಮ ಮಾರ್ಗದರ್ಶನದೊಂದಿಗೆ ಗುರುಗಳ ಮಾರ್ಗದರ್ಶನ ಬದುಕು ಬದಲಾಯಿಸುತ್ತದೆ.ಸೋಲಿನ ಸಮಯದಲ್ಲಿ ಕೈಹಿಡಿಯುವವರೇ ನಿಜವಾದ ಹಿತೈಷಿಗಳು.
ಆ ದಿನ ಶ್ರೇಯಾ ತನ್ನೊಳಗೆ ಒಂದು ಮಾತು ಬರೆದಳು —
“ನಾಳೆ ನಾನು ಯಾರಾದರೂ ಸೋತವರ ಕೈ ಹಿಡಿಯಬೇಕು.
ಅದೇ ನಿಜವಾದ ಗೆಲುವು."

✍️ ಎಸ್ ಶ್ರೀಧರಮೂರ್ತಿ ಶಿವಜಯಸುತ 


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ