ಕವನಗಳು
ಕಲ್ಪನೆ
Dec 03, 2025
ಕಲ್ಪನೆ
ಕಲ್ಪನೆ
ಓ ಕಲ್ಪನೆಯೇ
ನೀ ನರವ್ಯೂಹದಲಿ
ರೂಪುಗೊಳ್ಳುವ ವಿಸ್ಮಯ ಲೋಕ
ಚಿತ್ತ ಜ್ಞಾನದಿ
ನಿರ್ಮಿಸಬಹುದಾದ ಅಮಿತ ಅಲೋಕ
ಓ ಕಲ್ಪನೆಯೇ
ನೀ ಕ್ಷಣಾರ್ಧದಿ ಚಲಿಸುವೆ
ಬೃಹ್ಮಾಂಡದಾಚೆ
ಕೆಲವೊಮ್ಮೆ ಪರಿತಪಿಸುವೆ
ಹೊರಬರಲು ಭಾವಜಾಲದಿಂದಾಚೆ
ಓ ಕಲ್ಪನೆಯೇ
ನೀ ಯುಕ್ತಿಯ ವ್ಯಯಿಸುವ
ಆಸಕ್ತಿಯ ಶಕ್ತಿ
ನೀನಿರದೆ ಮನದಲಿ
ಮೂಡುವುದು ನಿರಾಸಕ್ತಿ
ಓ ಕಲ್ಪನೆಯೇ
ನೀ ಬುನಾದಿಯು
ಅಸಾಧ್ಯವ ಸಾಧಿಸುವ ಹಾದಿಗೆ
ನೀ ಸ್ಫೂರ್ತಿಯು
ನವಚಿಂತನೆಗಳ ಆವಿಷ್ಕಾರಕೆ
ಓ ಕಲ್ಪನೆಯೇ
ನಿರ್ಮಲ ಚಿತ್ತದಿ ನೀ ಸೃಷ್ಟಿಸುವೆ
ಪ್ರಶಾಂತತೆಯ ಬೀಡು
ಚಂಚಲ ಚಿತ್ತದಿ ನೀ ಕಟ್ಟುವೆ
ಗೊಂದಲಗಳ ಗೂಡು
ಓ ಕಲ್ಪನೆಯೇ
ಆಗು ನೀ ನನ್ನಲ್ಲಿ
ಕೌತುಕದ ರೂವಾರಿ
ಆಗದಿರು ನನ್ನಲ್ಲಿ
ಆತಂಕದ ಸಂಚಾರಿ
- ಮೋಹನ
ಇತ್ತೀಚಿನ ಕಾಮೆಂಟ್‌ಗಳು